ಮಹಾರಾಷ್ಟ್ರದ ಹಾಲಿ ವಿಧಾನಸಭೆಯ ಅವಧಿ ನವೆಂಬರ್ 26ಕ್ಕೆ ಕೊನೆಗೊಳ್ಳಲಿದೆ. ಚುನಾವಣಾ ಆಯೋಗ ವಿಧಾನಸಭೆ ಚುನಾವಣೆ ದಿನಾಂಕವನ್ನು ಮುಂದಿನ ವಾರ ಪ್ರಕಟಿಸುವ ಸಾಧ್ಯತೆ ಇದ್ದು, ನವೆಂಬರ್ ಎರಡನೇ ವಾರದಲ್ಲಿ ಮತದಾನ ನಡೆಯಬಹುದು. ಈಗಾಗಲೇ ಎಲ್ಲ ರಾಜಕೀಯ ಪಕ್ಷಗಳು ಚುನಾವಣೆಗೆ ಸಜ್ಜಾಗಿದ್ದು, ವಿಜಯದಶಮಿ ದಿನದಂದೇ ಪ್ರಚಾರ ರ್ಯಾಲಿಗಳ ಮೂಲಕ ರಣಕಹಳೆ ಮೊಳಗಿಸಿವೆ. ಪ್ರಧಾನಿ ನರೇಂದ್ರ ಮೋದಿ ಇತ್ತೀಚಿನ ಮಹಾರಾಷ್ಟ್ರ ಭೇಟಿಯಲ್ಲಿ ಅಭಿವೃದ್ಧಿ ಕಾರ್ಯಗಳ ಚಾಲನೆ ನಿಮಿತ್ತ ರಾಜಕೀಯ ವಿರೋಧಿಗಳ ಮೇಲೆ ಟೀಕಾಪ್ರಹಾರ ನಡೆಸಿದ್ದಾರೆ. ಹಲವು ವಿಷಯ, ವೈರುಧ್ಯಗಳ ಕಾರಣ ಈ ಬಾರಿಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಕುತೂಹಲ ಕೆರಳಿಸಿದ್ದು, ರಾಜಕೀಯ ಪಂಡಿತರ ಜಿಜ್ಞಾಸೆ, ಲೆಕ್ಕಾಚಾರಗಳು ಗರಿಗೆದರಿವೆ.
ರವೀಂದ್ರ ಎಸ್. ದೇಶಮುಖ್
ಮುಂಬೈಯ ಕಡಲತೀರದಲ್ಲಿ ಅಪ್ಪಳಿಸುವ ಅಲೆಗಳ ವೇಗದಂತೆಯೇ ಮಹಾರಾಷ್ಟ್ರದ ರಾಜಕೀಯದಲ್ಲಿ ಕಳೆದ ಐದು ವರ್ಷಗಳಲ್ಲಿ ಬದಲಾವಣೆಗಳು ಭಾರಿ ವೇಗವಾಗಿ ನಡೆದುಹೋಗಿವೆ. ರಾಜಕೀಯದ ಪಡಸಾಲೆಯಲ್ಲಿ ಸ್ನೇಹಿತರಾಗಿದ್ದವರು ಇಂದು ಬದ್ಧವೈರಿಗಳಾಗಿದ್ದಾರೆ, ವೈರಿಗಳಾಗಿದ್ದವರು ಆಪ್ತಮಿತ್ರರಾಗಿದ್ದಾರೆ. ಪಕ್ಷಗಳು ಕವಲೊಡೆದು ಬಣಗಳಾಗಿವೆ, ಎಲ್ಲ ಬಣಗಳು ‘ನಮ್ಮದೇ ನೈಜ ಪಕ್ಷ’ ಎಂದು ಹೇಳಿಕೊಳ್ಳುತ್ತಿವೆ. ಅಷ್ಟೇ ಅಲ್ಲ, ಎಲ್ಲ ಪಕ್ಷಗಳಲ್ಲೂ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣು ಇಟ್ಟಿರುವ ನಾಯಕರ ಪಟ್ಟಿ ದೀರ್ಘವಿದೆ. ಯಾವ ಪಕ್ಷಕ್ಕೆ ಸಿಎಂ ಹುದ್ದೆ ಬಿಟ್ಟುಕೊಡಬೇಕು ಎಂಬುದು ಮೈತ್ರಿಕೂಟಗಳಿಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡುತ್ತಿದೆ. ಹಾಗಾಗಿಯೇ ಪ್ರಸ್ತುತ ಆಡಳಿತದಲ್ಲಿರುವ ಎನ್ಡಿಯ ಮೈತ್ರಿಕೂಟ ಹಾಗೂ ಪ್ರತಿಪಕ್ಷ ಮಹಾ ವಿಕಾಸ ಆಘಾಡಿ (ಎಮ್ಎ) ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಮಾತನಾಡಲು ಹಿಂಜರಿಯುತ್ತಿವೆ. ಅಂದಹಾಗೆ, ಬಿಜೆಪಿ ಮತ್ತು ಶಿವಸೇನೆಯ ದೀರ್ಘವಾದ ಮೈತ್ರಿ 2019ರ ಚುನಾವಣೆಯ ಹೊಸ್ತಿಲಲ್ಲಿ ಮುರಿದು ಬಿದ್ದದ್ದು ಕೂಡ ಇದೇ ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ! ಆದ್ದರಿಂದ, ಎನ್ಡಿಎ ಮೈತ್ರಿಕೂಟ ಮತ್ತು ಮಹಾ ವಿಕಾಸ ಆಘಾಡಿ ನಡುವೆ ನೇರಾನೇರ ಸ್ಪರ್ಧೆ ಕಣ್ಣಿಗೆ ಕಾಣುವಂಥದ್ದು. ಆದರೆ, ಮೈತ್ರಿಕೂಟದೊಳಗಿರುವ ಪಕ್ಷಗಳು (ಎನ್ಡಿಎಯಲ್ಲಿ ಬಿಜೆಪಿ, ಶಿವಸೇನೆ- ಶಿಂಧೆ ಬಣ, ಎನ್ಸಿಪಿ-ಅಜಿತ್ ಪವಾರ್ ಬಣ, ಮಹಾ ವಿಕಾಸ ಆಘಾಡಿಯಲ್ಲಿ ಕಾಂಗ್ರೆಸ್, ಶಿವಸೇನೆ-ಯುಬಿಟಿ ಬಣ, ಎನ್ಸಿಪಿ-ಶರದ್ ಪವಾರ್ ಬಣ) ಪರಸ್ಪರ ಸ್ಪರ್ಧೆಯಲ್ಲಿ ತೊಡಗಿದ್ದು, ಬಹುಮತಕ್ಕೆ ಹತ್ತಿರವಾಗುವ ಸಂಖ್ಯೆಗಾದರೂ ತಲುಪಿದರೆ, ಸಿಎಂ ಸ್ಥಾನ ತಮ್ಮದಾಗಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿವೆ. ಅಂದರೆ, ಒಳಗೊಂದು, ಹೊರಗೊಂದು ಹೋರಾಟ ನಡೆಯುತ್ತಿದ್ದು, ಈ ಎಲ್ಲ ಬೆಳವಣಿಗೆಗಳನ್ನು ಮತದಾರರು ಕುತೂಹಲದಿಂದ ಗಮನಿಸುತ್ತಿದ್ದಾರೆ. ಕಳೆದ ಬಾರಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ‘ಮಿತ್ರಪಕ್ಷಗಳ ಛಾಯೆಯಲ್ಲಿ’ ಮಂಕಾಗಿ ಹೋಗಿದೆ.
ಕ್ಷಿಪ್ರ ಬೆಳವಣಿಗೆಗಳು: ರಾಜಕೀಯದ ಅನಿವಾರ್ಯತೆಗಳು, ಅಧಿಕಾರ ಉಳಿಸಿಕೊಳ್ಳುವ ಧಾವಂತ ಸೃಷ್ಟಿಸುವ ಸನ್ನಿವೇಶಗಳೇ ವಿಚಿತ್ರ. 2019ರ ಚುನಾವಣೆಯಲ್ಲಿ, 288 ಸದಸ್ಯಬಲದ ವಿಧಾನಸಭೆಯಲ್ಲಿ 106 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ (ಪ್ರಸ್ತುತ 103 ಶಾಸಕರನ್ನು ಹೊಂದಿದೆ) ಉಪಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಐದು ವರ್ಷಗಳ ಪೂರ್ಣಾವಧಿ ಸರ್ಕಾರ ನಡೆಸಿದ (2014-2019) ದೇವೇಂದ್ರ ಫಡ್ನವೀಸ್ ಪ್ರಸ್ತುತ ಡಿಸಿಎಂ ಆಗಿದ್ದಾರೆ. ಪಕ್ಷ ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿಸಲಿಲ್ಲ ಎಂದು ಬಂಡಾಯವೆದ್ದು, ಚಿಕ್ಕಪ್ಪನ ವಿರುದ್ಧವೇ ಕೆಂಪು ಬಾವುಟ ಹಾರಿಸಿ, ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದಿಂದ ಬೇರ್ಪಟ್ಟು, ತಮ್ಮದೇ ಬಣ ಸ್ಥಾಪಿಸಿ, ಕೇಸರಿ ಪಾಳಯದೊಂದಿಗೆ ದೋಸ್ತಿ ಮಾಡಿಕೊಂಡ ಅಜಿತ್ ಪವಾರ್ ಕೂಡ ಉಪಮುಖ್ಯಮಂತ್ರಿಯಾಗಿದ್ದಾರೆ. ಬಾಳಾ ಠಾಕ್ರೆಯವರಿಗೆ ಆತ್ಮೀಯರಾಗಿದ್ದ, ಉದ್ಧವ್ ಠಾಕ್ರೆ ಸಂಪುಟದಲ್ಲಿ ಸಚಿವರಾಗಿದ್ದ ಏಕನಾಥ್ ಶಿಂಧೆ, ಬಂಡಾಯವೆದ್ದು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು, ಸಿಎಂ ಆಗಿದ್ದಾರೆ. ಇನ್ನು, ಸೋದರನೊಂದಿಗೆ (ದೊಡ್ಡಪ್ಪನ) ರಾಜಕೀಯ ಸಖ್ಯ ತೊರೆದು ‘ಮಹಾರಾಷ್ಟ್ರ ನವನಿರ್ವಣ ಸೇನೆ’ ಮೂಲಕ ಸಿಎಂ ಹುದ್ದೆ ಏರಬೇಕೆಂಬ ಕನಸು ಕಾಣುತ್ತಿದ್ದ ರಾಜ್ ಠಾಕ್ರೆ ಈಗ ರಾಜಕೀಯ ಅಸ್ತಿತ್ವ ಮರುಸ್ಥಾಪಿಸಲು ಹೋರಾಡುತ್ತಿದ್ದಾರೆ. 2019ರ ಮುಂಚೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಶರದ್ ಪವಾರ್ ವಿರುದ್ಧ ತೀವ್ರ ವಾಕ್ಸಮರ ನಡೆಸುತ್ತಿದ್ದ ಉದ್ಧವ್ ಠಾಕ್ರೆ ತಂದೆ ಕಟ್ಟಿಬೆಳೆಸಿದ ಪಕ್ಷವನ್ನು ಉಳಿಸಿಕೊಳ್ಳಲು, ತಮ್ಮ ರಾಜಕೀಯ ಸಿದ್ಧಾಂತದ ಬದ್ಧವೈರಿಗಳೊಂದಿಗೆ ಮೈತ್ರಿ ಮಾಡಿಕೊಂಡು, ‘ನಾವೆಲ್ಲ ಒಗ್ಗಟ್ಟಾಗಿದ್ದೇವೆ’ ಎನ್ನುತ್ತಿದ್ದಾರೆ. ಮಗಳನ್ನು ಸಿಎಂ ಹುದ್ದೆಯಲ್ಲಿ ಕಾಣಬೇಕೆಂಬ ಮಹತ್ವಾಕಾಂಕ್ಷೆಯಲ್ಲಿ ಪಕ್ಷವೇ ವಿಭಜನೆಗೊಂಡಿದ್ದು ಶರದ್ ಪವಾರ್ ಅವರಿಗೆ ದುಬಾರಿಯಾಗಿ ಪರಿಣಮಿಸಿದೆ.
ಇಷ್ಟೆಲ್ಲ ಬೆಳವಣಿಗೆಗಳನ್ನು ಐದು ವರ್ಷಗಳ ಅಲ್ಪಾವಧಿಯಲ್ಲಿ ಜೀರ್ಣಿಸಿಕೊಂಡಿರುವ ಮಹಾರಾಷ್ಟ್ರದ ಸಾಮಾನ್ಯ ಮತದಾರ, ಈ ಬಾರಿ ಗೊಂದಲದಲ್ಲಿ ಮುಳುಗಿದ್ದು, ಯಾರನ್ನೂ ನಂಬಂದಂಥ ಸ್ಥಿತಿ ತಲುಪಿದ್ದಾನೆ. ಆದ್ದರಿಂದ, ಯಾವುದೇ ಒಂದು ಪಕ್ಷ ಅಥವಾ ಮೈತ್ರಿಕೂಟಕ್ಕೆ ಈ ಬಾರಿಯೂ ಸ್ಪಷ್ಟ ಬಹುಮತ ಸಿಗದಿದ್ದರೆ ಇಲ್ಲಿನ ರಾಜಕೀಯ ಮತ್ತಷ್ಟು ಅಯೋಮಯವಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಹೊಸದಾಗಿ ಹುಟ್ಟಿಕೊಂಡಿರುವ ಬಣಗಳು ಮತ್ತೆ ಯೂಟರ್ನ್ ತೆಗೆದುಕೊಂಡರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಾರೆ ರಾಜಕೀಯ ಪರಿಣಿತರು.
ವಿಧಾನಸಭೆ ಚುನಾವಣೆಯ ಪ್ರಮುಖ ವಿಷಯಗಳು: ಮಹಾರಾಷ್ಟ್ರವು ಎಲ್ಲ ಪ್ರಮುಖ ಪಕ್ಷಗಳ ಆಡಳಿತವನ್ನು ಕಂಡಿದೆ. ಕಾಂಗ್ರೆಸ್, ಎನ್ಸಿಪಿ, ಬಿಜೆಪಿ, ಶಿವಸೇನೆ ಹೀಗೆ ಎಲ್ಲ ಪಕ್ಷಗಳು ರೈತರ ವಿಷಯದಲ್ಲಿ ಭಾವನಾತ್ಮಕವಾಗಿ ಮಾತನಾಡುತ್ತವೆಯೇ ಹೊರತು ರೈತರ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲವಾಗಿವೆ. ವಿದರ್ಭ ಪ್ರಾಂತ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಮುಂದುವರಿದಿದ್ದು, ಬಡತನ, ಅಪೌಷ್ಟಿಕತೆಯ ಸಮಸ್ಯೆಗಳು ಕಾಡುತ್ತಿವೆ. ರೈತರಿಗೆ ತಾವು ಬೆಳೆದ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಈರುಳ್ಳಿಗೆ ಉತ್ತಮ ದರವಿದ್ದರೂ, ಅದರ ಲಾಭ ರೈತರಿಗೆ ಸಿಗದೆ ಮಧ್ಯವರ್ತಿಗಳ ಪಾಲಾಗುತ್ತಿದೆ. ಹಲವು ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರ ಹಣವನ್ನು ಬಾಕಿ ಇರಿಸಿಕೊಂಡಿವೆ. ಹೀಗಾಗಿ ಈ ಚುನಾವಣೆಯಲ್ಲೂ ರೈತರ ವಿಷಯ ಪ್ರಮುಖವಾಗಿ ಮಾರ್ದನಿಸುತ್ತಿದೆ. ಇದಲ್ಲದೆ, ಮಹಾರಾಷ್ಟ್ರದ ಉದ್ಯಮಗಳು ಗುಜರಾತ್ಗೆ ವಲಸೆ ಹೋಗುತ್ತಿವೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿದ್ದು, ‘ಮುಂಬೈ ಅಸ್ಮಿತೆ’ ಕಾಪಾಡುವ ವಿಷಯವು ಚರ್ಚೆಯ ಮುನ್ನಲೆಯಲ್ಲಿದೆ. ಇದಲ್ಲದೆ, ಉಚಿತ ‘ಗ್ಯಾರಂಟಿ’ಗಳು ಸದ್ದು ಮಾಡುತ್ತಿವೆ.
ಹಿಂದುತ್ವ ಕಾರ್ಡ್...: ರಾಜ್ಯದ ಎನ್ಡಿಎ ಸರ್ಕಾರ ಗೋವಿಗೆ ಇತ್ತೀಚೆಗಷ್ಟೇ ‘ರಾಜ್ಯಮಾತೆ’ಯ ಸ್ಥಾನಮಾನ ನೀಡಿದೆ. ಗೋವಿಗೆ ರಾಜ್ಯಮಾತೆಯ ಅಧಿಕೃತ ಸ್ಥಾನಮಾನ ಕಲ್ಪಿಸಿದ ದೇಶದ ಮೊದಲ ರಾಜ್ಯ ಮಹಾರಾಷ್ಟ್ರವೇ ಆಗಿದೆ. ಅಲ್ಲದೆ, ಗೋಶಾಲೆಗಳಲ್ಲಿ ದೇಶೀ ಗೋವುಗಳ (ತಲಾ) ಪಾಲನೆ- ಪೋಷಣೆಗೆ ದಿನಕ್ಕೆ 50 ರೂ. ನೆರವು ಘೋಷಿಸಿದೆ. ಇದರ ಬೆನ್ನಲ್ಲೇ, ಉದ್ಧವ್ ಠಾಕ್ರೆ ಕೂಡ ಹಿಂದುತ್ವದ ಮಂತ್ರ ಜಪಿಸಿದ್ದು, ಶಿವಸೇನೆ ಅಧಿಕಾರಕ್ಕೆ ಬಂದಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಶಿವ ಮಂದಿರ ನಿರ್ವಿುಸಲಾಗುವುದು ಎಂದಿದ್ದಾರೆ.
ವಿಶ್ವಾಸದಲ್ಲಿ ಮೈತ್ರಿಕೂಟಗಳು: ಇದೇ ವರ್ಷದ ಮೇ-ಜೂನ್ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 48 ಕ್ಷೇತ್ರಗಳ ಪೈಕಿ ಬಿಜೆಪಿ ಗೆದ್ದಿದ್ದು ಕೇವಲ 9 ಸ್ಥಾನಗಳಲ್ಲಿ. ಶಿವಸೇನೆ (ಶಿಂಧೆ ಬಣ) 7 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿತು. ಕಾಂಗ್ರೆಸ್ 13, ಶಿವಸೇನೆ (ಉದ್ಧವ್ ಬಣ) 9 ಹಾಗೂ ಎನ್ಸಿಪಿ (ಶರದ್ ಪವಾರ್ ಬಣ) 8 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಇದು ಪ್ರತಿಪಕ್ಷಗಳ ವಿಶ್ವಾಸ ಹೆಚ್ಚಿಸಿದ್ದು, ಲೋಕಸಭೆ ಫಲಿತಾಂಶವೇ ವಿಧಾನಸಭೆಯಲ್ಲಿ ಮರುಕಳಿಸಲಿದೆ ಎಂಬ ಮಾತನ್ನು ಪ್ರಚಾರದಲ್ಲಿ ಮತ್ತೆಮತ್ತೆ ಪ್ರಸ್ತಾಪಿಸುತ್ತಿದ್ದಾರೆ. ಬಿಜೆಪಿಗೆ ಹರಿಯಾಣದ ಫಲಿತಾಂಶ ಉತ್ಸಾಹ ತುಂಬಿದ್ದು, ಮಹಾರಾಷ್ಟ್ರದಲ್ಲೂ ಗೆಲುವು ಸಾಧಿಸುತ್ತೇವೆ ಎಂದು ಪ್ರತಿಪಾದಿಸುತ್ತಿದೆ.
ಹಿಂಸೆಯ ಕರಾಳಛಾಯೆ: ಅಜಿತ್ ಪವಾರ್ ಎನ್ಸಿಪಿಯ ನಾಯಕ, ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಶನಿವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಚುನಾವಣೆಯ ಮುನ್ನವೇ ಹಿಂಸೆಯ ಕರಾಳಛಾಯೆ ಆವರಿಸಿಕೊಂಡಿದೆ. ಈ ಹಿಂದೆ ಕಾಂಗ್ರೆಸ್ನಲ್ಲಿದ್ದ ಸಿದ್ದಿಕಿಯವರ ಹತ್ಯೆಯಿಂದ ಎಲ್ಲ ಪಕ್ಷದ ನಾಯಕರು ಆತಂಕಗೊಂಡಿದ್ದಾರೆ. ಈ ಹತ್ಯೆ ಪ್ರಕರಣ ಚುನಾವಣೆಯ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.