ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಈ ವೇಳೆ ಅವರ ಪತ್ನಿ ಮೆಲಾನಿಯಾ ಟ್ರಂಪ್ ಅವರು ದೆಹಲಿಯ ಸರ್ಕಾರಿ ಶಾಲೆಗೆ ಭೇಟಿ ನೀಡಲಿದ್ದಾರೆ. ಅರವಿಂದ್ ಕೇಜ್ರಿವಾಲ್ ಪ್ರಾರಂಭ ಮಾಡಿರುವ ಹ್ಯಾಪಿನೆಸ್ ಕ್ಲಾಸ್ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೆಲಾನಿಯಾ ಟ್ರಂಪ್ ಅವರು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುವ ಬಗ್ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ. ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರು ಇಂದು ನಮ್ಮ ಶಾಲೆಯಲ್ಲಿ ಹ್ಯಾಪಿನೆಸ್ ಕ್ಲಾಸ್ನಲ್ಲಿ ಭಾಗವಹಿಸಲಿದ್ದಾರೆ. ಇದು ನಮ್ಮ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ದೆಹಲಿಯ ಜನರ ಪಾಲಿಗೆ ಅದ್ಭುತವಾದ ದಿನ. ಶತಮಾನಗಳಿಂದಲೂ ಭಾರತ ಜಗತ್ತಿಗೆ ಆಧ್ಯಾತ್ಮಿಕತೆಯನ್ನು ಕಲಿಸುತ್ತಿದೆ. ಈಗ ಹ್ಯಾಪಿನೆಸ್ ಕ್ಲಾಸ್ನಲ್ಲಿ ಭಾಗವಹಿಸುತ್ತಿರುವ ಮೆಲಾನಿಯಾ ಅವರು ನಮ್ಮ ಶಾಲೆಗಳಿಂದಲೂ ಅದೇ ಸಂತೋಷವನ್ನು ಪಡೆಯುತ್ತಿರುವ ಬಗ್ಗೆ ನನಗೆ ಖುಷಿಯಿದೆ ಎಂದು ಟ್ವೀಟ್ ಮಾಡಿದ್ದಾರೆ.
ಮೆಲಾನಿಯಾ ಟ್ರಂಪ್ ಅವರು ಇಂದು ನಾನಕ್ಪುರದಲ್ಲಿರುವ ಸರ್ಕಾರಿ ಶಾಲೆಗೆ ಭೇಟಿ ನೀಡಲಿದ್ದಾರೆ. ಅವರು ಮಕ್ಕಳೊಂದಿಗೆ ಸಂವಾದ ನಡೆಸುವರು. ಹ್ಯಾಪಿನೆಸ್ ಕ್ಲಾಸ್ನ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವರು. ಇದಕ್ಕಾಗಿ ಶಾಲೆಯಲ್ಲಿ ಸಕಲ ಸಿದ್ಧತೆಗಳನ್ನೂ ಮಾಡಲಾಗಿದೆ.
ಮೆಲಾನಿಯಾ ಟ್ರಂಪ್ ಅವರು ದೆಹಲಿ ಶಾಲೆಗೆ ಭೇಟಿ ನೀಡುವ ಸಮಾರಂಭಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಕೇಂದ್ರ ಸರ್ಕಾರ ಆಮಂತ್ರ ನೀಡಿಲ್ಲ ಎಂಬುದು ಚರ್ಚೆಗೆ ಗ್ರಾಸವಾಗಿತ್ತು. ಇದೇ ವಿಚಾರವಾಗಿ ಆಪ್ ಮುಖಂಡರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು. (ಏಜೆನ್ಸೀಸ್)