ನ್ಯೂಸ್

ನ್ಯಾಯಾಲಯದ ಆದೇಶದಂತೆ ಗ್ರಾಚ್ಯುಟಿ ನೀಡಬೇಕು.ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಘಟನೆಗಳ ಒಕ್ಕೂಟ ಆಗ್ರಹ.

ಬೆಂಗಳೂರು:ಸರ್ವೋಚ್ಚ ನ್ಯಾಯಾಲಯ ಕಳೆದ ಏಪ್ರಿಲ್ 2022ರಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನಿವೃತ್ತಿ ಉಪಧನ ಕುರಿತ ಆದೇಶವನ್ನು ಹೊರಡಿಸಿದ್ದು, ಅದರ ಪ್ರಕಾರ ರಾಜ್ಯ ಸರ್ಕಾರ ಗ್ರಾಚ್ಯುಟಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ಒತ್ತಾಯಿಸಿದೆ.

ಸರ್ವೋಚ್ಚ ನ್ಯಾಯಾಲಯ ಹೊರಡಿಸಿರುವ ಆದೇಶದಲ್ಲಿ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು 1975 ರಿಂದ ಕೆಲಸ ಮಾಡುತ್ತಿದ್ದು, ಕಾಲ ಕಾಲಕ್ಕೆ ನಿವೃತ್ತಿಯಾದ ದಿನಾಂಕಗಳಲ್ಲಿ ಅವರಿಗೆ ಗ್ರಾಚ್ಯುಟಿ ನೀಡಬೇಕು ಎಂಬಂತಿದೆ. ಆದರೆ, ಸರ್ಕಾರ 2023ರ ಏ.1 ರಿಂದ ಅನ್ವಯವಾಗುವಂತೆ ಎಂದು ಆದೇಶಿಸಿದೆ. ಈ ಕೂಡಲೇ ಆದೇಶವನ್ನು ವಾಪಸ್ ಪಡೆದು ಸರ್ವೋಚ್ಚ ನ್ಯಾಯಾಲದ ತೀರ್ಪಿನ ಪ್ರಕಾರ ಗ್ರಾಚ್ಯುಟಿ ನೀಡಬೇಕು ಎಂದು ೆಡರೇಶನ್ ಅಧ್ಯಕ್ಷೆ ಎಂ.ಜಯಮ್ಮ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ರಾಜ್ಯ ಸರ್ಕಾರ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ ಮತ್ತು ಯುಕೆಜಿ ಶಿಕ್ಷಣ ನೀಡಲು ನಿರ್ಧರಿಸಿರುವುದು ಸ್ವಾಗತಾರ್ಹ ಆದರೆ,ಅಂಗನವಾಡಿ ಕೇಂದ್ರಗಳನ್ನು ಸರ್ಕಾರಿ ಮಾಂಟಸರಿ ಎಂದು ಹೊಸದಾಗಿ ನಾಮಕರಣ ಮಾಡಿರುವುದು ಸರಿಯಲ್ಲ. ಅಂಗನವಾಡಿ ಸಂಘಟನೆಗಳು ಕಳೆದ 35 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿವೆ. ಆ ಸಂಘಟನೆಗಳ ಅಭಿಪ್ರಾಯವನ್ನು ಪಡೆಯದೆ ಸರ್ಕಾರ ಏಕಪಕ್ಷಿಯವಾಗಿ ತಿರ್ಮಾನ ತೆಗೆದುಕೊಂಡಿರುವುದನ್ನು ನಮ್ಮ ಸಂಘಟನೆ ತೀರ್ವವಾಗಿ ಖಂಡಿಸುತ್ತದೆ ಎಂದು ಹೇಳಿದರು.

ಕರ್ನಾಟಕ ರಾಜ್ಯದಲ್ಲಿರುವ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಆಗುತ್ತಿರುವ ಪೌಷ್ಠಿಕ ಆಹಾರದ ಗುಣಮಟ್ಟ ಸರಿಯಿಲ್ಲ . ಈ ಕಾರಣದಿಂದಾಗಿ ಲಾನುಭವಿಗಳು ಆಹಾರ ಸೇವಿಸುತ್ತಿಲ್ಲ. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ನಿಯಮಾವಳಿಗಳಲ್ಲಿ ಸ್ಥಳೀಯ ಪೌಷ್ಠಿಕ ಆಹಾರ ನೀಡಲು ನಿಯಮವಿದ್ದರು ಅದನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿ ಗುತ್ತಿಗೆದಾರರಿಗೆ ಅಧಿಕಾರಿಗಳಿಗೆ ಹಣ ಮಾಡಲು ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಹಾಗೂ ಲಾನುಭವಿಗಳಿಗೆ ಸಂಬಂಧಿಸಿದಂತೆ ಪ್ರಾರಂಭದಿಂದ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕಾದ ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಏಕ ಪಕ್ಷಿಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಸರಿಯಲ್ಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ ಅಧ್ಯಕ್ಷ ಶಿವಶಂಕರ್, ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಕ್ಷೇಮಾಭಿವೃದ್ದಿ ಸಂಘ ಪ್ರಧಾನ ಕಾರ್ಯದರ್ಶಿ ಸಿ.ಶಿವಣ್ಣ, ಬಿ.ಪ್ರೇಮಾ, ಕೆ.ಸೋಮಶೇಖರ್ ಮತ್ತಿತರರಿದ್ದರು.