ನವದೆಹಲಿ: ಭಾರತದ ಮೂರೂ ರಕ್ಷಣಾ ಪಡೆಗಳ ಮೊದಲ (Chief of Defence Staff ) ಮುಖ್ಯಸ್ಥರಾಗಿ ನೇಮಕವಾಗಿರುವ ಜನರಲ್ ಬಿಪಿನ್ ರಾವತ್ ಅವರು ಜನವರಿ 1ರಂದು ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಭೂಸೇನಾ ಮುಖ್ಯಸ್ಥ ಹುದ್ದೆಯಿಂದ ಇಂದು ಬಿಪಿನ್ ರಾವ್ ನಿವೃತ್ತಿ ಹೊಂದಲಿದ್ದು, ಅದಕ್ಕೂ ಮುನ್ನ ಮಂಗಳವಾರ ಬೆಳಗ್ಗೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. ಇದೇ ವೇಳೆ ಸೌತ್ ಬ್ಲಾಕ್ ಸೇನಾ ಮುಖ್ಯಸ್ಥರಾಗಿ ವಿದಾಯದ ಗೌರವನ್ನು ಸ್ವೀಕರಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇಂದು ಸೇನಾ ಮುಖ್ಯಸ್ಥ ಪದವಿಯನ್ನು ತ್ಯಜಿಸುತ್ತಿದ್ದೇನೆ. ಸವಾಲಿನ ಪರಿಸ್ಥಿತಿಯಲ್ಲೂ ಸ್ಥಿರವಾಗಿ ಎದೆಯುಬ್ಬಿಸಿ ನಿಂತ ಭಾರತೀಯ ಸೇನಾ ಯೋಧರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 28ನೇ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಜನರಲ್ ಮನೋಜ್ ನರಾವಣೆ ಅವರಿಗೆ ಇದೇ ವೇಳೆ ಶುಭಕೋರಿದರು.
ಚೀಫ್ ಆಫ್ ಡಿಫೆನ್ಸ್ ಸ್ಟಾಫ್(ಸಿಡಿಎಸ್) ಹುದ್ದೆಯು ಅನೇಕ ಜವಾಬ್ದಾರಿಗಳನ್ನು ಹೊಂದಿದೆ. ಈಕ್ಷಣದವರೆಗೂ ಸಿಡಿಎಸ್ನ ಕಟ್ಟುಪಾಡುಗಳ ಬಗ್ಗೆ ಗಮನ ಕೇಂದ್ರೀಕರಿಸಿದ್ದೇನೆ. ಸದ್ಯ ಹೊಸ ಹುದ್ದೆಯನ್ನು ಹೊಂದುತ್ತಿದ್ದು, ಅಧಿಕಾರ ವಹಿಸಿಕೊಂಡ ಬಳಿಕ ಭವಿಷ್ಯಕ್ಕಾಗಿ ಯೋಜನಾ ತಂತ್ರವನ್ನು ರೂಪಿಸುವೆ ಎಂದರು. ಸಿಡಿಎಸ್ಗೆ ವಿದಾಯ ಹೇಳುವವರೆಗೂ ನನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುವೆ ಎಂದು ತಿಳಿಸಿದರು. (ಏಜೆನ್ಸೀಸ್)
ಜ. ರಾವತ್ ಹಿನ್ನೆಲೆ
# ಜನನ- 1958ರ ಮಾರ್ಚ್ 16. ಉತ್ತರಪ್ರದೇಶದ (ಈಗ ಉತ್ತರಾಖಂಡ) ಪೌರಿಯಲ್ಲಿ
# ತಂದೆ- ಲೆಫ್ಟಿನೆಂಟ್ ಜನರಲ್ ಲಕ್ಷ್ಮಣ್ ಸಿಂಗ್ ರಾವತ್
ಶಿಕ್ಷಣ: ಪ್ರಾಥಮಿಕ ಶಿಕ್ಷಣ ಡೆಹ್ರಾಡೂನ್, ಶಿಮ್ಲಾ. ಮಹಾರಾಷ್ಟ್ರದ ಖಡಕ್ವಾಸ್ಲಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಕಲಿಕೆ. ವೆಲ್ಲಿಂಗ್ಟನ್ನ ಡಿಎಸ್ಎಸ್ಸಿಯಲ್ಲಿ ಪದವಿ. ಅಮೆರಿಕದ ಕಾನ್ಸಾಸ್ನಲ್ಲಿರಿವ ಸೇನಾ ಕಮಾಂಡ್ ಮತ್ತು ಜನರಲ್ ಸ್ಟಾಫ್ ಕಾಲೇಜಿನಲ್ಲಿ ಹೈಯರ್ ಕಮಾಂಡ್ ಕೋರ್ಸ್ ವ್ಯಾಸಂಗ. ರಕ್ಷಣಾ ಅಧ್ಯಯನಕ್ಕೆ ಮದ್ರಾಸ್ ವಿವಿಯಿಂದ ಎಂಫಿಲ್ ಪದವಿ.
ಸೇನೆಗೆ ಸೇರ್ಪಡೆ: 11 ಗೂರ್ಖಾ ರೈಫಲ್ಸ್ನ 5ನೇ ಬೆಟಾಲಿಯನ್ ಕಮಿಷನ್ಡ ಅಧಿಕಾರಿಯಾಗಿ 1978ರ ಡಿ. 16ರಂದು ಸೇರ್ಪಡೆ. ನಂತರ ಬ್ರಿಗೇಡಿಯರ್ ಹುದ್ದೆಗೆ ಬಡ್ತಿ ಪಡೆದು ರಾಷ್ಟ್ರೀಯ ರೈಫಲ್ನ 5ನೇ ಸೆಕ್ಟರ್ನಲ್ಲಿ ಕರ್ತವ್ಯ. ಕಾಂಗೊಗೆ ತೆರಳಿದ್ದ ಶಾಂತಿಪಡೆಯಲ್ಲಿ ರಾವತ್ ಕೂಡ ಇದ್ದರು. ಮೇಜರ್ ಜನರಲ್ ಹುದ್ದೆಗೆ ಪದೋನ್ನತಿ, 19ನೆ ಇನ್ಫೆಂಟ್ರಿಯಲ್ಲಿ ವಿಭಾಗದ ಹೊಣೆ. 3ನೇ ಕೋರ್ನಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಕರ್ತವ್ಯ ನಿರ್ವಹಣೆ. 2016ರ ಡಿಸೆಂಬರ್ 31ಕ್ಕೆ ಭೂಸೇನೆಯ 27ನೇ ಮುಖ್ಯಸ್ಥರಾಗಿ ಅಧಿಕಾರ ಸ್ವೀಕಾರ. 37 ವರ್ಷಗಳ ಸೇನಾ ಸೇವೆಯಲ್ಲಿ ಪರಮ ವಿಶಿಷ್ಟ ಸೇವಾ ಪದಕ ಸೇರಿ ಹಲವು ಶೌರ್ಯ ಪ್ರಶಸ್ತಿಗಳಿಗೆ ರಾವತ್ ಭಾಜನರಾಗಿದ್ದಾರೆ.