ಸಾಗರ: ಗಣಪತಿ ದೇವಸ್ಥಾನವನ್ನು ಸರ್ಕಾರ ಮತ್ತು ಸಾರ್ವಜನಿಕರ ಸಹಾಯಧನದೊಂದಿಗೆ ಮಾದರಿಯಾಗಿ ನಿರ್ಮಿಸಲಾಗುತ್ತದೆ. ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಗಣಪತಿ ದೇವಸ್ಥಾನ ಆವರಣದಲ್ಲಿ ಮುಜರಾಯಿ ಇಲಾಖೆಯಿಂದ ಗಣಪತಿ ದೇವಸ್ಥಾನ ಅಭಿವೃದ್ಧಿಗೆ ಸಂಬಂಧಿಸಿ ಕರೆಯಲಾಗಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಸಾಗರಕ್ಕೆ ಗಣಪತಿ ದೇವಸ್ಥಾನ ಮತ್ತು ಮಾರಿಕಾಂಬಾ ದೇವಸ್ಥಾನ ಪ್ರಮುಖ ಶ್ರದ್ಧಾಭಕ್ತಿಯ ಕೇಂದ್ರಗಳು. ಅನೇಕ ಪ್ರವಾಸಿಗರು ಬಂದಾಗ ಇಲ್ಲಿಗೆ ಭೇಟಿ ನೀಡುತ್ತಾರೆ. ಗಣಪತಿ ದೇವಸ್ಥಾನವನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಮಾಡುವುದು ಆದ್ಯತಾ ವಿಷಯ ಎಂದರು.
ಈಗಾಗಲೇ ಮುಜರಾಯಿ ಇಲಾಖೆಯಿಂದ 55 ಲಕ್ಷ ರೂ. ಅನುದಾನ ಮಂಜೂರಾಗಿದೆ. ಹೆಚ್ಚುವರಿಯಾಗಿ 1.7 ಕೋಟಿ ರೂ. ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗುತ್ತದೆ. ವಾಸ್ತುಪ್ರಕಾರ ದೇವಸ್ಥಾನ ಅಭಿವೃದ್ಧಿ, ಮುಖ ಮಂಟಪ, ಕಲ್ಯಾಣ ಮಂಟಪ, ಚಂದ್ರಶಾಲೆಯನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಹೇಳಿದರು.
ಗಣಪತಿ ದೇವಸ್ಥಾನ ಅಭಿವೃದ್ಧಿಗೆ ಸಾರ್ವಜನಿಕರು ಸಹಕಾರ ನೀಡಲು ಒಪ್ಪಿದ್ದಾರೆ. ಸಭೆಯಲ್ಲಿ ಬಂದ ಸಾರ್ವಜನಿಕರ ಅಭಿಪ್ರಾಯವನ್ನು ಅಭಿವೃದ್ಧಿ ಸಂದರ್ಭ ಅಳವಡಿಸಿಕೊಳ್ಳಲಾಗುತ್ತದೆ. ಇದರ ಜತೆಗೆ ಗಣಪತಿ ದೇವಸ್ಥಾನ ಎದುರಿಗೆ ಇರುವ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಕೆರೆಕೋಡಿ ಆಂಜನೇಯ ಸ್ವಾಮಿ ದೇವಸ್ಥಾನವನ್ನೂ ಅಭಿವೃದ್ಧಿಪಡಿಸುವ ಚಿಂತನೆಯಿದೆ ಎಂದರು.
ಶಿಥಿಲಗೊಂಡಿರುವ ಕಲ್ಯಾಣ ಮಂಟಪವನ್ನು ತೆಗೆದು ಹಾಕಬೇಕು ಮತ್ತು ಶೌಚಗೃಹವನ್ನು ಬೇರೆ ನಿರ್ಮಿಸುವುದು ಹಾಗೂ ಉದ್ಯಾನ ನಿರ್ಮಾಣದ ಬಗ್ಗೆ ಭಕ್ತರು ಸಲಹೆ ನೀಡಿದ್ದಾರೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಉಪವಿಭಾಗಾಧಿಕಾರಿ ವಿರೇಶ್‌ಕುಮಾರ್, ತಹಸೀಲ್ದಾರ್ ರಶ್ಮಿ, ಪ್ರಮಿಳಾಕುಮಾರಿ, ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಟಿ.ವಿ.ಪಾಂಡುರಂಗ, ಲಕ್ಷ್ಮಣ್ ಜೋಯಿಸ್, ಪ್ರಮುಖರಾದ ಅಶ್ವಿನಿಕುಮಾರ್, ಬಿ.ಎನ್.ಜಗದೀಶ್, ಐ.ವಿ.ಹೆಗಡೆ ಸುಂದರ್ ಸಿಂಗ್,ನಿರಂಜನ ಕೋರಿ, ನಾಗೇಂದ್ರ, ಮೋಹನ್ ಶೇಟ್, ಕೆ.ವಿ.ಜಯರಾಮ್, ನವೀನ, ದಿನೇಶ್ ಇತರರಿದ್ದರು.