ನ್ಯೂಸ್

ಹಣ್ಣ ಕೊಟ್ಟರಷ್ಟೇ ಅಜ್ಜಿ ಅಂತ್ಯಸಂಸ್ಕಾರ

ಮಾವಂದಿರ ವಿರುದ್ಧ ಮೃತಳ ಮೊಮ್ಮಗಳಿಂದ ದೂರು ತಹಸೀಲ್ದಾರ್ ಸಮ್ಮುಖದಲ್ಲಿ ಅಂತ್ಯಕ್ರಿಯೆ

ಗೌರಿಬಿದನೂರು: ಹಣ ಕೊಟ್ಟರಷ್ಟೇ ಅಜ್ಜಿಯ ಹೆಣ ಹೂಳಲು ಬಿಡುವುದಾಗಿ ಹೇಳಿದ ಮಾವಂದಿರ ವಿರುದ್ಧ ಮೊಮ್ಮಗಳು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಘಟನ ಮಂಗಳವಾರ ನಡೆದಿದೆ.

ಕಸಬಾ ಹೋಬಳಿ ದೊಡ್ಡಕುರುಗೋಡು ಗ್ರಾಮದ ಅನಂತಕ್ಕ ಎಂಬ ಮಹಿಳೆ ಕಡಗತ್ತೂರಿನಲ್ಲಿ ವಯೋಸಹಜವಾಗಿ ಮೃತಪಟ್ಟಿದ್ದು, ಅಲ್ಲಿಂದ ಮೊಮ್ಮಗಳಾದ ಶಾಂತಮ್ಮ ಮತ್ತು ಇತರರು ಅಂತ್ಯಸಂಸ್ಕಾರಕ್ಕಾಗಿ ಶವವನ್ನು ದೊಡ್ಡಕುರುಗೋಡು ಗ್ರಾಮಕ್ಕೆ ತಂದು ಆಕೆಯ ಗಂಡನ ಸಮಾಧಿಯ ಪಕ್ಕದಲ್ಲೇ ಹೂಳಲು ಮುಂದಾಗಿದ್ದರು. ಈ ವೇಳೆ ಮೃತಳ ಗಂಡು ಮಕ್ಕಳು 40 ಲಕ್ಷ ನೀಡಿದರೆ ಮಾತ್ರ ಹೂಳಲು ಅವಕಾಶ ನೀಡುತ್ತೇವೆ ಎಂದು ಹೇಳಿದಾಗ ದಿಕ್ಕು ತೋಚದ ಮೊಮ್ಮಗಳು ಶವವನ್ನು ಗ್ರಾಮಾಂತರ ಠಾಣೆ ಬಳಿ ತಂದು ಪ್ರಕರಣ ದಾಖಲಿಸುವಂತೆ ಒತ್ತಾಯ ಮಾಡಿದ ಘಟನೆ ಮಂಗಳವಾರ ನಡೆದಿದೆ.

ಮೃತ ಅನಂತಕ್ಕನ ಮೊಮ್ಮಗಳು ಶಾಂತಮ್ಮ ಮಾತನಾಡಿ, ನಮ್ಮ ಅಜ್ಜಿಗೆ ಇಬ್ಬರು ಗಂಡು ಮಕ್ಕಳು ಮತ್ತು ನಾಲ್ಕು ಹೆಣ್ಣು ಮಕ್ಕಳಿದ್ದು, ಅಜ್ಜಿಯ ಹೆಸರಿನಲ್ಲಿ 2 ಎಕರೆ ಜಮೀನು ಇತ್ತು. ಆ ಜಮೀನು ಕೆಐಡಿಬಿಗೆ ಸ್ವಾಧೀನಗೊಂಡ ಕಾರಣ 93,75000/ ರೂ. ಪರಿಹಾರದ ಹಣ ಅಜ್ಜಿಯ ಉಜ್ಜೀವನ್ ಬ್ಯಾಂಕ್ ಖಾತೆಗೆ ಬಂದಿತ್ತು. ಈ ಹಣದಲ್ಲಿ ಹೆಣ್ಣುಮಕ್ಕಳಿಗೆ ಪಾಲು ನೀಡದ ಮಾವಂದಿರು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದರು. ಈ ಪ್ರಕರಣ ಕೋರ್ಟ್‌ನಲ್ಲಿ ತಿರ್ಮಾನವಾಗಿ ಹೆಣ್ಣು ಮಕ್ಕಳ ಭಾಗಕ್ಕೆ 40 ಲಕ್ಷ ರೂ. ಬಂದಿತ್ತು. ಆ ಹಣವನ್ನು ನೀಡಿದರೆ ಮಾತ್ರ ಶವವನ್ನು ಹೂಳಲು ಬಿಡುತ್ತೇವೆ. ಇಲ್ಲವಾದರೆ ಬಿಡುವುದಿಲ್ಲ ಎಂದರು. ಹಾಗಾಗಿ ದಿಕ್ಕತೋಚದೆ ದೂರು ನೀಡಲು ಬಂದಿದ್ದಾಗಿ ತಿಳಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮಹೇಶ್ ಎಸ್. ಪತ್ರಿ ಮೃತ ಅನಂತಕ್ಕನ ಮಕ್ಕಳೊಂದಿಗೆ ಮಾತನಾಡಿ ಶವವನ್ನು ಹೂಳಲು ಅವಕಾಶ ಕಲ್ಪಿಸಿದರು.

ಒಳ್ಳೆಯ ಸಮಾಜ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿ

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಹೇಶ್ ಎಸ್. ಪತ್ರಿ, ದೊಡ್ಡಕುರುಗೋಡು ಗ್ರಾಮದಲ್ಲಿ ಅನಂತಕ್ಕ ಎಂಬುವವರು ತೀರಿಕೊಂಡಿದ್ದು, ಗಂಡು ಮಕ್ಕಳು ಶವವನ್ನು ಹೂಳಲು ಅವಕಾಶ ನೀಡುತ್ತಿಲ್ಲ, ಹೆಣ್ಣು ಮಕ್ಕಳು ತಂದೆ ಸಮಾಧಿಯ ಪಕ್ಕದಲ್ಲೇ ತಾಯಿಯನ್ನು ಹೂಳಬೇಕೆಂದು ಮುಂದಾದಾಗ ಈ ಪರಿಸ್ಥಿತಿ ಉದ್ಭವಿಸಿದೆ. ದಯವಿಟ್ಟು ಸಾರ್ವಜನಿಕರಲ್ಲಿ ಒಂದು ಮನವಿ ಹಣ ಮುಖ್ಯವಲ್ಲ ನಮಗೆ ಜನ್ಮ ನೀಡಿ ಸಾಕಿ, ಸಲುಹಿದ ತಂದೆ ತಾಯಿಗೆ ಗೌರವ ಕೊಡಿ, ಇಂತಹ ವಿಷಾದನೀಯ ಘಟನೆಗಳು ನಡೆಯಬಾರದು, ಎಲ್ಲರೂ ಎಚ್ಚೆತ್ತು ಇಂತಹವರಿಗೆ ತಿಳಿವಳಿಕೆ ನೀಡಿ ಒಳ್ಳೆಯ ಸಮಾಜ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.