ನ್ಯೂಸ್

ಗ್ರ್ಯಾಮಿ ಪ್ರಶಸ್ತಿ 2024: ಫ್ಯೂಷನ್ ಬ್ಯಾಂಡ್ 'ಶಕ್ತಿ'ಗೆ ಒಲಿದ ಜಾಗತಿಕ ಮ್ಯೂಸಿಕ್​ ಆಲ್ಬಂ ಪ್ರಶಸ್ತಿ

ನವದೆಹಲಿ: ಫೆ. 5ರಂದು ಲಾಸ್ ಏಂಜಲೀಸ್‌ನ Crypto.com ಅರೆನಾದಲ್ಲಿ ನಡೆದ ಗ್ರ್ಯಾಮಿ ಅವಾರ್ಡ್ಸ್‌ನಲ್ಲಿ ಜಾನ್ ಮೆಕ್‌ಲಾಫ್ಲಿನ್, ಝಾಕಿರ್ ಹುಸೇನ್, ಗಾಯಕ ಶಂಕರ್ ಮಹಾದೇವನ್, ತಾಳವಾದ್ಯ ವಾದಕ ವಿ. ಸೆಲ್ವಗಣೇಶ್ ಮತ್ತು ಪಿಟೀಲು ವಾದಕ ಗಣೇಶ್ ರಾಜಗೋಪಾಲನ್ ಒಳಗೊಂಡ ಫ್ಯೂಷನ್ ಬ್ಯಾಂಡ್ 'ಶಕ್ತಿ' ಜಾಗತಿಕ ಮ್ಯೂಸಿಕ್​ ಆಲ್ಬಂ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಕಳೆದ 45 ವರ್ಷಗಳಲ್ಲಿ ಈ ಗುಂಪಿನ ಮೊದಲ ಹೊಸ ಆಲ್ಬಂ ಆಗಿದ್ದು, ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆಯುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದಂತಾಗಿದೆ. ಜಾನ್ ಮೆಕ್‌ಲಾಫ್ಲಿನ್ (ಗಿಟಾರ್, ಗಿಟಾರ್ ಸಿಂಥ್), ಜಾಕಿರ್ ಹುಸೇನ್ (ತಬಲಾ), ಶಂಕರ್ ಮಹದೇವನ್ (ಗಾಯನಕಾರ), ವಿ ಸೆಲ್ವಗಣೇಶ್ (ತಾಳವಾದ್ಯ ವಾದಕ) ಮತ್ತು ಗಣೇಶ್ ರಾಜಗೋಪಾಲನ್ (ಪಿಟೀಲು ವಾದಕ) ಒಳಗೊಂಡಿರುವ ಪ್ರತಿಭಾವಂತ ತಂಡದಿಂದ ರಚನೆಯಾಗಿರುವ ಆಲ್ಬಮ್ ಎಂಟು ಹೊಸ ಸಂಯೋಜನೆಗಳನ್ನು ಹೊಂದಿದೆ.

ಸುಸಾನಾ ಬಾಕಾ, ಬೊಕಾಂಟೆ, ಬರ್ನಾ ಬಾಯ್ ಮತ್ತು ಡೇವಿಡೊ ಅವರಂತಹ ಕಲಾವಿದರಿಂದ ಗ್ರ್ಯಾಮಿಸ್‌ನಲ್ಲಿ ತೀವ್ರ ಸ್ಪರ್ಧೆಯನ್ನು ಎದುರಿಸಿದ 'ಶಕ್ತಿ'ಯು ಅಂತಿಮವಾಗಿ ವಿಜಯಶಾಲಿಯಾಗಿ ಹೊರಹೊಮ್ಮುವ ಮೂಲಕ ಅತ್ಯುತ್ತಮ ಜಾಗತಿಕ ಮ್ಯೂಸಿಕ್​ ಆಲ್ಬಮ್‌ಗಾಗಿ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದುಕೊಂಡಿತು.

ಅಮೆರಿಕನ್ ಗೀತರಚನೆಕಾರ ಮತ್ತು ಗಾಯಕ ಜಸ್ಟಿನ್ ಟ್ರಾಂಟರ್ ಆಯೋಜಿಸಿದ ಮುಖ್ಯ ಕಾರ್ಯಕ್ರಮದ ಪ್ರೀಮಿಯರ್ ಸಮಾರಂಭವು ಫೆ.4ರ ಭಾನುವಾರದಂದು ಮಧ್ಯಾಹ್ನ 3.30ಕ್ಕೆ ಪ್ರಾರಂಭವಾಯಿತು. ಬಹುಪಾಲು ಗ್ರ್ಯಾಮಿ ಪ್ರಶಸ್ತಿಗಳನ್ನು ವಿತರಿಸಲಾಯಿತು. ಈ ಸಮಾರಂಭವನ್ನು Grammy.com ನಲ್ಲಿ ಲೈವ್​ನಲ್ಲಿ ವೀಕ್ಷಿಸಬಹುದಾಗಿದೆ. (ಏಜೆನ್ಸೀಸ್​)