ವಿಶ್ವ ಸಂಗೀತ ಲೋಕದಲ್ಲೇ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎಂಬ ಹೆಗ್ಗಳಿಕೆ ಅಮೆರಿಕದ ರೆಕಾರ್ಡಿಂಗ್ ಅಕಾಡೆಮಿ ಪ್ರತಿವರ್ಷ ಕೊಡಮಾಡುವ ಗ್ರ್ಯಾಮಿಗೆ ಸಲ್ಲುತ್ತದೆ. 1959ರಲ್ಲಿ 28 ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಆರಂಭವಾದ ಗ್ರ್ಯಾಮಿ, ಸದ್ಯ 2027ರಲ್ಲಿ ಆಯೋಜಿಸಲಾಗುವ 69ನೇ ಸಾಲಿನಲ್ಲಿ ಒಟ್ಟು 96 ವಿಭಾಗಗಳಲ್ಲಿ ಪ್ರಶಸ್ತಿ ನೀಡುವುದಾಗಿ ಘೋಷಿಸಿದೆ. ಕೆಲ ಹಳೆಯ ಕೆಟಗರಿಗಳಿಗೆ ಕೊಕ್ ಕೊಟ್ಟು, "ಬೆಸ್ಟ್ ಏಷಿಯನ್ ಪಾಪ್ ಮ್ಯೂಸಿಕ್ ಪರ್ಫಾರ್ಮೆನ್ಸ್' ಸೇರಿ ಕೆಲ ಹೊಸ ವಿಭಾಗಗಳನ್ನು ಪರಿಚಯಿಸಿದ್ದು, ಇತ್ತೀಚೆಗಷ್ಟೆ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಆದರೆ, ಪ್ರಾರಂಭದಲ್ಲೇ ಕೊರಿಯಾ ಮೂಲದ ಬಿಟಿಎಸ್ (ಬಿಯಾಂಡ್ ದ ಸೀನ್) ತಂಡ, ಗ್ರ್ಯಾಮಿಯಿಂದ ಹೊರನಡೆದಿದೆ. ""ಬೆಸ್ಟ್ ಏಷಿಯನ್ ಪಾಪ್ ಮ್ಯೂಸಿಕ್ ಪರ್ಫಾರ್ಮೆನ್ಸ್' ಕೆಟಗರಿ ಮೂಲಕ ಸಂಗೀತವನ್ನು ಪ್ರಾದೇಶಿಕವಾಗಿ ವಿಭಜಿಸಲಾಗುತ್ತಿದೆ. ಆ ಮೂಲಕ ಏಷಿಯಾ ಮೂಲಕ ಕಲಾವಿದರು, ಸಂಗೀತಗಾರರು ಪ್ರಮುಖ ವಿಭಾಗಗಳಲ್ಲಿ ಸ್ಪರ್ಧಿಸಲು ಅಡ್ಡಿಯುಂಟು ಮಾಡಲಾಗುತ್ತಿದೆ. ಸಂಗೀತವನ್ನು ಸಂಗೀತದಂತೆ ನೋಡಬೇಕೇ ವಿನಃ ಭಾಷೆ, ಗಡಿ ಎಂದು ಇಬ್ಭಾಗ ಮಾಡಬಾರದು' ಎಂದು ಬಿಟಿಎಸ್ ತಂಡ ಅಧಿಕೃತವಾಗಿ ಅಸಮಾಧಾನ ವ್ಯಕ್ತಪಡಿಸಿದೆ. ವಿಶ್ವಾದ್ಯಂತ 500ಕ್ಕೂ ಅಧಿಕ ಪ್ರಶಸ್ತಿಗಳನ್ನು ಪಡೆದಿರುವ ಬಿಟಿಎಸ್, 20ಕ್ಕೂ ಹೆಚ್ಚು ವಿಶ್ವದಾಖಲೆಗಳನ್ನು ನಿರ್ಮಿಸಿದೆ. ಈ ಹಿಂದೆ ಐದು ಬಾರಿ ಗ್ರ್ಯಾಮಿಯಲ್ಲಿ ನಾಮಾಂಕಿತಗೊಂಡಿದ್ದರೂ, ಒಮ್ಮೆಯೂ ಪ್ರಶಸ್ತಿಗೆ ಮುತ್ತಿಡುವ ಭಾಗ್ಯ ದೊರೆತಿಲ್ಲ. ಈ ಬಾರಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಬಿಟಿಎಸ್ ತಂಡಕ್ಕೆ ಗ್ರ್ಯಾಮಿ ಹೊಸ ವಿಭಾಗ ಪರಿಚಯಿಸಿರುವುದು ಹೊಸ ಸಮಸ್ಯೆ ತಂದೊಡ್ಡಿದೆ. ಕೆಲವರು ಬಿಟಿಎಸ್ ಪರ ನಿಂತರೆ, ಇನ್ನೂ ಕೆಲವರು ಗ್ರ್ಯಾಮಿ ಪರ ನಿಂತಿದ್ದಾರೆ. ಅಲ್ಲಿಗೆ 2027ರ ಗ್ರ್ಯಾಮಿ ಪ್ರಶಸ್ತಿಗಳು ಈಗಿನಿಂದಲೇ ಕುತೂಹಲ ಮೂಡಿಸಿವೆ.