ಕುಶಾಲನಗರ:
ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷ ಚೆಟ್ಟಡ್ಕ ಎಲ್. ವಿಶ್ವ ಅಧ್ಯಕ್ಷತೆಯಲ್ಲಿ ಮಂಗಳವಾರ ಹೊಸಪಟ್ಟಣದ ಸಮುದಾಯ ಭವನದಲ್ಲಿ ನಡೆಯಿತು. ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖೆಯಲ್ಲಿನ ವಿಚಾರಗಳು ಮತ್ತು ಸಾರ್ವಜನಿಕರಿಗೆ ದೊರಕುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಹೊಸಪಟ್ಟಣ, ವಿರೂಪಾಕ್ಷಪುರ ವ್ಯಾಪ್ತಿಯಲ್ಲಿ ಹುಲಿಗಳೆರಡು ಕಾಣಿಸಿಕೊಂಡು ಕಾಡಂಚಿನ ನಿವಾಸಿಗಳಲ್ಲಿ ಆತಂಕ ಮೂಡಿಸಿದ್ದು ಈ ಬಗ್ಗೆ ಅರಣ್ಯಾಧಿಕಾರಿಗಳು ನಿಗಾವಹಿಸಬೇಕು. ಸಾರ್ವಜನಿಕರಿಗೆ ಯಾವುದೇ ಜೀವಹಾನಿ ಆಗದಂತೆ ತುರ್ತು ಕ್ರಮ ವಹಿಸುವಂತೆ ಗ್ರಾಪಂ ಸದಸ್ಯ ಆರ್.ಕೆ. ಚಂದ್ರು ಒತ್ತಾಯಿಸಿದರು.
ದಾಸವಾಳ ಗ್ರಾಮದಲ್ಲಿ ಕಾಡಾನೆ ಹಾವಳಿಗೆ ಅಳವಡಿಸಿರುವ ರೈಲ್ವೆ ಬ್ಯಾರಿಕೇಡ್ ಹಾಳಾಗಿದ್ದು ಸರಿಪಡಿಸಬೇಕೆಂದು ಗ್ರಾಮಸ್ಥರಾದ ಸಚಿನ್ ಆಗ್ರಹಿಸಿದರು. ಮೀನುಕೊಲ್ಲಿ, ಆನೆಕಾಡು ಅರಣ್ಯ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದಲ್ಲಿ ಕಾಡು ಮರಗಳ ಹನನವಾಗುತ್ತಿದೆ. ಇಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳ ಕುಮ್ಮಕ್ಕಿನಿಂದಲೇ ನಡೆಯುತ್ತಿದೆ ಎಂದು ಮಾವಾಜಿ ರವಿ ನೇರವಾಗಿ ಆರೋಪಿಸಿದರು. ಈ ಆರೋಪಕ್ಕೆ ಆರ್.ಕೆ. ಚಂದ್ರು ಧ್ವನಿಗೂಡಿಸಿದರು. ಇದಕ್ಕೆ ಉತ್ತರಿಸಿದ ಅರಣ್ಯಾಧಿಕಾರಿಗಳು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು.
ಹೊಸಪಟ್ಟಣ ಗ್ರಾಮದಲ್ಲಿ ಎರಡು ಕೆರೆಗಳಿದ್ದು ಸರ್ವೆ ನಂಬರ್ 32 ರಲ್ಲಿದ್ದ 2.40 ಎಕರೆ ಜಾಗದಲ್ಲಿದ್ದ ಕೆರೆಯನ್ನು ಕಂದಾಯ ಇಲಾಖೆಯಿಂದ ಖಾಸಗಿ ವ್ಯಕ್ತಿಗೆ ಮಂಜೂರಾತಿ ಮಾಡಲಾಗಿದೆ. ಈಗ ಉಳಿದ 30 ಸೆಂಟು ಜಾಗದಲ್ಲಿನ ಕೆರೆಯನ್ನು ಸಂರಕ್ಷಣೆ ಮಾಡಬೇಕು. ಸಾರ್ವಜನಿಕರ ಉಪಯೋಗಕ್ಕೆ ಕೆರೆಗೆ ಸೂಕ್ತ ರಸ್ತೆ ಒಸಗಿಸಬೇಕೆಂದು ಹೊಸಪಟ್ಟಣ ಗ್ರಾಮದ ನಿವಾಸಿ ಹೆಚ್.ಎಂ. ಸ್ವಾಮಿ ಒತ್ತಾಯಿಸಿದರು. ಸಂಬAಧಿಸಿದವರ ಗಮನಕ್ಕೆ ಈ ವಿಷಯ ತರುವುದಾಗಿ ಅಧ್ಯಕ್ಷರು ಹೇಳಿದರು.
ಮೊದಲಿಂದಲೂ ನಂಜರಾಯಪಟ್ಟಣ ಗ್ರಾ.ಪಂ.ಗೆ ತೆರಿಗೆ ಪಾವತಿಸುತ್ತಿದ್ದೇವೆ. ಆದರೆ ನಮ್ಮ ಸರ್ವೆ ನಂಬರ್ 49/1 ರ ಜಾಗ ರಸೂಲ್‌ಪುರದಲ್ಲಿದ್ದು ಇದನ್ನು ಗುಡ್ಡೆಹೊಸೂರು ಗ್ರಾಪಂಗೆ ಸೇರಿಸಲಾಗಿದೆ. ಆದ್ದರಿಂದ ನಮ್ಮನ್ನು ನಂಜರಾಯಪಟ್ಟಣ ಗ್ರಾಪಂ ಗೆ ವರ್ಗಾಯಿಸಿ ನಮಗೆ ನ್ಯಾಯ ಒದಗಿಸಿ ಎಂದು ಕಬ್ಬಿನಗದ್ದೆ ನಿವಾಸಿ ಮಣಿಕಂಠ, ವರುಣ್, ರಾಜಾ, ಲೋಕೇಶ್ ಮೊದಲಾದವರು ಸಭೆಯಲ್ಲಿ ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ವಿಶ್ವ, ರಸೂಲ್ ಪುರದ ಏಳು ಕುಟುಂಬಗಳ ಸಮಸ್ಯೆಗಳನ್ನು ತಹಸೀಲ್ದಾರ್ ಗಮನಕ್ಕೆ ತಂದು ಪ್ರತ್ಯೇಕ ಸಭೆ ಮಾಡಿ ಶೀಘ್ರದಲ್ಲಿಯೇ ಪರಿಹಾರ ಕಾಣಲಾಗುವುದು ಎಂದರು.
ನೋಡಲ್ ಅಧಿಕಾರಿಯಾಗಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸ್ವಾಮಿ ಕಾರ್ಯನಿರ್ವಹಿಸಿದರು. ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಂ.ಎಸ್. ರಾಜಶೇಖರ್, ಪಂಚಾಯಿತಿ ಉಪಾಧ್ಯಕ್ಷೆ ಪಿ.ಎಸ್. ಕುಸುಮಾ, ಸದಸ್ಯರಾದ ಅಯ್ಯಂಡ್ರ ಲೋಕನಾಥ್, ಜೆ.ಟಿ. ಜಾಜಿ, ಎಸ್.ಎಂ. ಸಮೀರ, ಮಾವಾಜಿ ರಕ್ಷಿತ, ಗಿರಿಜಮ್ಮ, ಗ್ರಾಮ ಲೆಕ್ಕಿಗರಾದ ಸೋನು, ಸಚಿನ್, ಸೆಸ್ಕ್ ಅಭಿಯಂತರ ಸೋಮೇಶ್, ನರೇಗಾ ಅಭಿಯಂತರ ವಿಷ್ಣು, ಗ್ರಾಮೀಣಾಭಿವೃದ್ದಿ ಇಲಾಖೆ ಅಭಿಯಂತರ ಚಿದಾನಂದ, ಅರಣ್ಯ ಇಲಾಖೆ ಮೀನುಕೊಲ್ಲಿ ವಿಭಾಗದ ಸಚಿನ್ ನಿಂಬಾಳ್ಕರ್, ಆನೆಕಾಡು ವಿಭಾಗದ ದೇವಯ್ಯ, ಆಹಾರ ಇಲಾಖೆಯ ಅಧಿಕಾರಿ ಸ್ವಾತಿ, ಕಾರ್ಯದರ್ಶಿ ಎಂ.ಆರ್.ಶೇಷಗಿರಿ ಇದ್ದರು.
ಇದೇ ಸಂದರ್ಭ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಾದ ಭಾಗೀರಥಿ, ಲಲಿತಾ ಅವರನ್ನು ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು.