ನ್ಯೂಸ್

ಗ್ರಾಪಂ ಎಲೆಕ್ಷನ್​: ನಾಮಪತ್ರ ಹಿಂಪಡೆಗೆ ಸೋಮವಾರ ಕೊನೇ ದಿನ

ಬೆಂಗಳೂರು: ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ನಾಮಪತ್ರ ವಾಪಸ್​ ಪಡೆಯಲು ಸೋಮವಾರ (ಡಿ.14) ಕೊನೆಯ ದಿನವಾಗಿದ್ದು, ಪ್ರತಿಸ್ಪರ್ಧಿಗಳನ್ನು ಕಣದಿಂದ ಹಿಂದೆ ಸರಿಸಲು ಹಳ್ಳಿ ಫೈಟ್​ನಲ್ಲಿ ಭರ್ಜರಿ ಪ್ರಯತ್ನ ನಡೆಯುತ್ತಿದೆ.

ತಮ್ಮ ಗೆಲುವಿಗೆ ಅಡ್ಡಿ ಆಗಬಹುದಾದ ಸ್ಪರ್ಧಾಳುಗಳಿಗೆ ಆಸೆ, ಆಮಿಷ, ಪ್ರಭಾವಿಗಳಿಂದ ಪ್ರಭಾವ ಬೀರಿಸಿ ನಾಮಪತ್ರ ವಾಪಸ್​ ತೆಗೆಸುವ ಕೆಲಸವನ್ನು ಅನೇಕ ಅಭ್ಯರ್ಥಿಗಳು ಮಾಡುತ್ತಿದ್ದಾರೆ.

ಮೊದಲ ಹಂತದ ಚುನಾವಣೆಯ ನಾಮಪತ್ರಗಳ ಪರಿಶೀಲನೆ ಶನಿವಾರ ನಡೆದಿದ್ದು, ತಿರಸ್ಕೃತ ಮತ್ತು ಕ್ರಮಬದ್ಧ ನಾಮಪತ್ರಗಳ ವಿವರವನ್ನು ಆಯಾ ಜಿಲ್ಲಾ ಚುನಾವಣಾಧಿಕಾರಿ ಪ್ರಕಟಿಸಿದ್ದಾರೆ.

ಸೋಮವಾರ ಸಂಜೆ ವೇಳೆಗೆ ಮೊದಲ ಹಂತದ ಚುನಾವಣಾ ಕಣದಲ್ಲಿ ಉಳಿಯುವ ಅಭ್ಯರ್ಥಿಗಳು ಹಾಗೂ ಅವಿರೋಧ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಚುನಾವಣಾಧಿಕಾರಿಗಳು ಪ್ರಕಟಿಸಲಿದ್ದಾರೆ.

ಮೊದಲ ಹಂತಕ್ಕೆ ಡಿ.22ರಂದು ಹಾಗೂ ಎರಡನೇ ಹಂತಕ್ಕೆ ಡಿ.27ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ.

ಎರಡನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಡಿ.16ವರೆಗೆ ಅವಕಾಶವಿದ್ದು, ಡಿ.17 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಡಿ.19 ಕೊನೇ ದಿನ.

ರಾಜ್ಯದ 5,762 ಗ್ರಾಮ ಪಂಚಾಯಿತಿಗಳ 35,884 ಕ್ಷೇತ್ರಗಳ 92,121 ಸ್ಥಾನಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಒಟ್ಟು 2,96,15,048 ಮತದಾರರು 92,121 ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ.

ಎರಡೂ ಹಂತಗಳ ಮತ ಎಣಿಕೆಯೂ ಆಯಾ ತಾಲೂಕು ಕೇಂದ್ರಗಳಲ್ಲಿ ಡಿ.30ರ ಬೆಳಗ್ಗೆ 8 ರಿಂದ ಆರಂಭವಾಗಲಿದ್ದು, ಸಂಜೆ ವೇಳೆಗೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ.