ಕೋಲಾರ ಜಿಲ್ಲಾ ಪಂಚಾಯಿತಿ ಕಚೇರಿ. 
ನ್ಯೂಸ್

ತೆರಿಗೆ ವಸೂಲಿಗೆ ಗ್ರಾಪಂ ನಿರ್ಲಕ್ಷ್ಯ...!

> ಕಿರುವಾರ ಎಸ್​.ಸುದರ್ಶನ್​ ಕೋಲಾರ

ತೆರಿಗೆ ವಸೂಲಿ ಸಾಧನೆಯಲ್ಲಿ ಗ್ರಾಮ ಪಂಚಾಯಿತಿಗಳು ಹಿಂದೆ ಉಳಿದಿದ್ದು, ಗುರಿ ಸಾಧನೆಗೆ ಕ್ರಮವಹಿಸಲು ಸರ್ಕಾರವು ಜಿ.ಪಂ ಅಧಿಕಾರಿಗಳಿಗೆ ಸೂಚಿಸಿದೆ.

ಪ್ರತಿ ವರ್ಷ ತೆರಿಗೆ ಪಾವತಿ ಮಾಡಬೇಕಾಗಿರುವ ಜವಾಬ್ದಾರಿ ಮಾಲೀಕರ ಮೇಲಿರುತ್ತದೆ. ಸಕಾಲಕ್ಕೆ ಪಾವತಿ ಮಾಡದಿದ್ದರೆ ಮಾಲೀಕರನ್ನು ಸಂಪರ್ಕಿಸಿ ತೆರಿಗೆ ವಸೂಲಿ ಮಾಡುವ ಹೊಣೆ ಗ್ರಾಮ ಲೆಕ್ಕಿಗರದ್ದು. ಆರ್ಥಿಕ ವರ್ಷ ಶೇ.75ರಷ್ಟು ಮುಗಿಯುತ್ತಾ ಬಂದಿದ್ದರೂ ರಾಜ್ಯದಲ್ಲಿ ತೆರಿಗೆ ವಸೂಲಿಯಲ್ಲಿ ಸಾಧನೆಯಾಗಿರುವುದು ಶೇ.48.98ರಷ್ಟು ಮಾತ್ರ. ಸಮರ್ಪಕವಾಗಿ ತೆರಿಗೆ ವಸೂಲಿಗೆ ಬಿಲ್​ಕಲೆಕ್ಟರ್​ಗಳು ಅಸಕ್ತಿ ತೋರದೆ ಇರುವುದು ಸಾಧನೆಯ ಹಿನ್ನಡೆಗೆ ಕಾರಣವಾಗಿದೆ.

ಹಿಂದಿನ ದಿನಗಳಿಗೆ ಹೋಲಿಕೆ ಮಾಡಿದರೆ ಗ್ರಾಮೀಣ ಪ್ರದೇಶಗಳು ಪಟ್ಟಣ, ಪುರಸಭೆ, ನಗರಸಭೆ ಪ್ರದೇಶಗಳಿಂತಲೂ ವೇಗವಾಗಿ ಬೆಳೆಯುತ್ತಿವೆ. ಆದರೆ ಇದಕ್ಕೆ ತಕ್ಕಂತೆ ಪಂಚಾಯಿತಿಗೆ ತೆರಿಗೆ ಪಾವತಿ ಆಗುತ್ತಿಲ್ಲ. ಇದರಿಂದಾಗಿ ಪಂಚಾಯಿತಿಗಳ ಖಜಾನೆ ಭರ್ತಿಯಾಗದೇ ಆಗಬೇಕಾಗಿರುವ ಅಭಿವೃದ್ಧಿ ಕೆಲಸಗಳನ್ನು ಕಾಣಲು ಸಾಧ್ಯವಾಗುತ್ತಿಲ್ಲ.

ವಾಣಿಜ್ಯ ಕಟ್ಟಡಗಳು, ಶಾಲೆಗಳು, ಆಸ್ಪತ್ರೆಗಳು, ನಿವಾಸದ ಮನೆಗಳು, ಸಣ್ಣ ಕೈಗಾರಿಕೆಗಳು, ಕಲ್ಯಾಣ ಮಂಟಪಗಳು, ಬಹುಮಡಿ ಕಟ್ಟಡಗಳು ಹೀಗೆ ಹಲವು ರೀತಿಯ ಕಟ್ಟಡಗಳು ತಲೆಯೆತ್ತುತ್ತಿವೆ. ಆವುಗಳಲ್ಲಿ ನಗರ, ಪಟ್ಟಣಕ್ಕೆ ಸಮೀಪದಲ್ಲಿರುವ ಕೆಲವರು ಯಾವುದಕ್ಕೂ ತೆರಿಗೆ ಪಾವತಿ ಮಾಡದೆ ಸರ್ಕಾರವನ್ನು ವಂಚಿಸುತ್ತಿದ್ದಾರೆ. ಇನ್ನು ರಾಜಕೀಯ ಮತ್ತು ಆರ್ಥಿಕ ಬಲಾಡ್ಯರನ್ನಂತೂ ಮಾತನಾಡಿಸಲಾಗದ ಪರಿಸ್ಥಿತಿಯಿದೆ. ತೆರಿಗೆ ವಸೂಲಿಗೆ ಬಿಲ್​ ಕಲೆಕ್ಟರ್​ ಹೋದರೆ ಸಬೂಬುಗಳನ್ನು ಹೇಳಿ ಕಳುಹಿಸುತ್ತಾರೆ. ಕೆಲವೊಮ್ಮೆ ಹೆದರಿಸುವ ಪ್ರಯತ್ನವನ್ನೂ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ.

ವಿವಿಧ ತೆರಿಗೆಗಳಿಗೆ ಹೋಲಿಕೆ ಮಾಡಿದರೆ, ತೀರ ಕಡಿಮೆ ಶುಲ್ಕ ಇರುವ ತೆರಿಗೆ ಗ್ರಾಮೀಣ ಭಾಗದ ಆಸ್ತಿಗಳ ಮೇಲಿನದ್ದು. ಕಡಿಮೆ ಮೊತ್ತದ ತೆರಿಗೆಯನ್ನು ಪ್ರತಿ ವರ್ಷ ಪಾವತಿ ಮಾಡಿಕೊಂಡು ಬಂದರೂ ಯಾರಿಗೂ ಹೊರೆಯಾಗುವುದಿಲ್ಲ. ಬಾಕಿ ಉಳಿದುಕೊಂಡಿದ್ದು, ಸಿಬ್ಬಂದಿ ತೆರಿಗೆ ವಸೂಲಿಗೆ ಬಂದಾಗ ನೆಪ ಹೇಳುವುದು ಕೆಲವರ ರೂಢಿ. ಇದಾವುದಕ್ಕೂ ಕಿವಿಗೊಡಬಾರದು ಎಂದು ಜಿ.ಪಂ ಅಧಿಕಾರಿಗಳು, ಗ್ರಾ.ಪಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

* ಹೊಂದಾಣಿಕೆ ಕೊರತೆ

ಬಿಲ್​ ಕಲೆಕ್ಟರ್​ಗಳಿಗೆ ಜಿಲ್ಲಾ ಪಂಚಾಯಿತಿ ಹೊಣೆಗಾರಿಕೆ ನಿಗದಿಪಡಿಸಿಲ್ಲ. ತೆರಿಗೆ ವಸೂಲಿ ಗುರಿಯನ್ನು ನೀಡಿಲ್ಲ. ಅಧಿಕಾರಿಗಳು ಪಿಡಿಒಗಳನ್ನೇ ಕೇಳಿ ಮಾಹಿತಿ ಪಡೆದುಕೊಳ್ಳುತ್ತಾರೆ. ಅಗಬೇಕಾಗಿರುವ ಕೆಲಸಗಳನ್ನು ಸಹ ಪಿಡಿಒಗಳಿಂದಲೇ ಮಾಡಿಸುತ್ತಾರೆ. ಕೇಂದ್ರ ಸ್ಥಳದಲ್ಲಿ ಪಿಡಿಒಗಳು, ಕಾರ್ಯದರ್ಶಿಗಳು, ಬಿಲ್​ ಕಲೆಕ್ಟರ್​ಗಳು, ಇರುವುದಿಲ್ಲ. ತೆರಿಗೆ ಸಂಗ್ರಹ ವಿಚಾರ ಅಂತ ಬಂದಾಗ ಪಿಡಿಒ, ಕಾರ್ಯದರ್ಶಿ, ಬಿಲ್​ ಕಲೆಕ್ಟರ್​ ಹಾಗೂ ಅಧ್ಯಕ್ಷರು, ಸದಸ್ಯರ ನಡುವೆ ಹೊಂದಾಣಿಕೆ ಕೊರತೆ ಎದ್ದು ಕಾಣುತ್ತದೆ.

* ಅಭಿವೃದ್ಧಿ ಕುಂಠಿತ

ಗ್ರಾಮ ಪಂಚಾಯಿತಿಗಳಿಂದ ಸಮರ್ಪಕವಾಗಿ ತೆರಿಗೆ ಸಂಗ್ರಹವಿಲ್ಲದೆ ಸಂಪನ್ಮೂಲ ಕ್ರೋಡಿಕರಣವಾಗದೇ ಆರ್ಥಿಕವಾಗಿ ಸ್ವಾವಲಂಬನೆಯ ಯತ್ನಕ್ಕೂ ಹಿನ್ನಡೆಯಾಗುತ್ತಿದೆ. ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದ ಅನುದಾನವನ್ನೇ ಕಾಯುವಂತಾಗಿದೆ. ಸಂಗ್ರಹವಾಗಿರುವ ಆಸ್ತಿ ತೆರಿಗೆಯಲ್ಲಿ ಶೇ.40ರಷ್ಟು ವೇತನ, ಶೇ.25ರಷ್ಟು ಪರಿಶಿಷ್ಟ ಸುಮುದಾಯದ ಅಭಿವೃದ್ಧಿಗೆ, ಶೇ.5ರಷ್ಟು ಅಂಗವಿಕಲರಿಗೆ ಹಾಗೂ ಉಳಿದ ತೆರಿಗೆಯನ್ನು ಇತರ ಅಭಿವೃದ್ಧಿ ಕೆಲಸಗಳಿಗೆ ಬಳಸಬೇಕೆಂಬ ಸರ್ಕಾರದ ನಿಯಮವಿದೆ. ಒಂದು ವೇಳೆ ತೆರಿಗೆಯೂ ಸಮರ್ಪಕವಾಗಿ ವಸೂಲಿಯಾಗದಿದ್ದರೆ ಸರ್ಕಾರದಿಂದ 15ನೇ ಹಣಕಾಸು ಯೋಜನೆಯಡಿ ವಿಶೇಷ ಅನುದಾನ ಬಿಡುಗಡೆ ಮಾಡುತ್ತದೆ. ಇದರಲ್ಲಿಯೇ ಅಧಿಕಾರಿಗಳ, ಸಿಬ್ಬಂದಿ ವೇತನಕ್ಕೆ ವಿನಿಯೋಗಿಸಿಕೊಳ್ಳಬಹುದು ಎಂಬುದು ಕೆಲ ಅಧಿಕಾರಿಗಳ ಭಾವನೆಯಾಗಿದೆ.

* ರಾಯಚೂರು ಮೊದಲು, ಯಾದಗಿರಿ ಕೊನೆ

2024-25ನೇ ಹಣಕಾಸು ವರ್ಷ ಶೇ.75ರಷ್ಟು ಮುಗಿದೇ ಹೋಗಿದ್ದು, ತೆರಿಗೆ ವಸೂಲಿಯಲ್ಲಿ ರಾಜ್ಯದ ಯಾವುದೇ ಜಿಲ್ಲೆಯೂ ಶೇ.75ರಷ್ಟು ಸಾಧನೆಯ ಗುರಿ ಮುಟ್ಟಿಲ್ಲ. ರಾಯಚೂರು ಜಿಲ್ಲೆ ತೆರಿಗೆ ಸಂಗ್ರಹದಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಉತ್ತರಕನ್ನಡ ಜಿಲ್ಲೆ 2ನೇ ಸ್ಥಾನದಲ್ಲಿದ್ದು, ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು 3ನೇ ಸ್ಥಾನದಲ್ಲಿವೆ. ಕೊಡಗು, ಗದಗ, ಬಾಗಲಕೋಟೆ, ದಣ ಕನ್ನಡ, ರಾಮನಗರ, ಬೆಂಗಳೂರು ನಗರ, ದಾವಣಗೆರೆ, ಧರವಾಡ, ಬೆಳಗಾವಿ ಶೇ.50ರಷ್ಟು ಸಾಧನೆ ಸಹ ಮಾಡಿಲ್ಲ. ಉಡುಪಿ, ಚಿಕ್ಕಬಳ್ಳಾಪುರ, ಹಾವೇರಿ, ತುಮಗೂರು, ಮಂಡ್ಯ, ಕೊಪ್ಪಳ, ಚಿತ್ರದುರ್ಗ, ವಿಜಯಪುರ, ಬೀದರ್​, ಕೋಲಾರ ಶೇ.50ಕ್ಕಿಂತ ಕಡಿಮೆ ಸಾಧನೆಯಲ್ಲಿದ್ದು, ಇನ್ನುಳಿದ ಹಾಸನ, ಕಲಬುರ್ಗಿ, ಚಾಮರಾಜನಗರ, ಬಳ್ಳಾರಿ, ಮೈಸೂರು, ವಿಜಯಪುರ, ಯಾದಗಿರಿ ಕೊನೆ ಸ್ಥಾನದಲ್ಲಿವೆ.

ಬಾಕ್ಸ್​...

* ವಾರ್ಷಿಕ ಬೇಡಿಕೆ

ರಾಜ್ಯದಲ್ಲಿ 31 ಜಿಲ್ಲೆಗಳಲ್ಲಿ 5,949 ಗ್ರಾಮ ಪಂಚಾಯಿತಿಗಳಿಂದ ವಾರ್ಷಿಕವಾಗಿ ಒಟ್ಟು 40,10,23,03,241 ರೂ.(ಅಂದಾಜು 4010 ಕೋಟಿ ರೂ.) ತೆರಿಗೆ ಬೇಡಿಕೆಯಿದೆ. ಈ ಪೈಕಿ ಇದುವರೆಗೂ 8,03,20,58,351 ವಸೂಲಿಯಾಗಿದ್ದು, ಇನ್ನು 32,01,71,50,594 ರಷ್ಟು ಬಾಕಿ ಇದೆ.

ಕೋಟ್​...

ತೆರಿಗೆಯನ್ನು ಸಮರ್ಪಕವಾಗಿ ವಸೂಲಿ ಮಾಡುವ ಮೂಲಕ ಪಂಚಾಯಿತಿಗಳ ಅದಾಯ ವೃದ್ಧಿಸಿಕೊಳ್ಳಲು ವಿಶೇಷ ಆಂದೋಲನ ರೂಪಿಸಿಕೊಳ್ಳಲಾಗಿದೆ. ಆ ಮೂಲಕ ಸಮರ್ಪಕವಾಗಿ ಮಾಡುವ ಮೂಲಕ ಆದಾಯ ವೃದ್ಧಿಸಿಕೊಳ್ಳಲು ಕ್ರಮವಹಿಸಲಾಗಿದ್ದು ಇದುವರೆಗೂ ಜಿಲ್ಲೆಯಲ್ಲಿ ಶೇ.42ರಷ್ಟು ಸಾಧನೆಯಾಗಿದೆ. ವಾಣಿಜ್ಯ ವಹಿವಾಟು ನಡೆಸುತ್ತಿರುವ ಮಾಲೀಕರಿಗೆ ತಗಾದೆ ನೊಟೀಸ್​ ನೀಡಿ ವಸೂಲಿ ಮಾಡಲಾಗುವುದು.

> ಬಿ.ಶಿವಕುಮಾರ್​, ಉಪ ಕಾರ್ಯದರ್ಶಿ, ಕೋಲಾರ.