ಬೆಂಗಳೂರು: ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ‘ಅರಿವು ಕೇಂದ್ರ’ ಗಳಾಗಿ ಕಾರ್ಯ ನಿರ್ವಹಿಸಲು ಹಾಗೂ ಕೆಲಸದ ಸಮಯವನ್ನು 8 ಗಂಟೆವರೆಗೆ ನಿಗದಿಪಡಿಸಿ ಗ್ರಂಥಾಲಯ ಮೇಲ್ವಿಚಾರಕರಿಗೆ 15196.72 ರೂ.ಗಳ ಮಾಸಿಕ ಕನಿಷ್ಟ ವೇತನ ಮತ್ತು ತುಟ್ಟಿ ಭತ್ಯೆ ಪಾವತಿಸಲು ಸರ್ಕಾರ ನಿರ್ಧರಿಸಿದೆ.
ಸರ್ಕಾರದ ಆದೇಶದಲ್ಲಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಹೆಸರನ್ನು ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಎಂಬುದನ್ನು ಅರಿವು ಕೇಂದ್ರ ಎಂದು ಮರು ಪದನಾಮೀಕರಿಸಿದೆ. ಈ ಕೇಂದ್ರಗಳ ಕೆಲಸದ ವೇಳೆಯನ್ನು ಹೆಚ್ಚಿಸಲಾಗಿದೆ.
ರಾಜ್ಯ ಸರ್ಕಾರದಿಂದ ಸಾರ್ವಜನಿಕ ರಜೆ ಎಂದು ಘೋಷಿಸಲ್ಪಟ್ಟ ರಜಾ ದಿನಗಳು ಮತ್ತು ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಮಂಗಳವಾರ ಹಾಗೂ ವಾರದ ರಜೆ (ಸೋಮವಾರ) ಹೊರತುಪಡಿಸಿ, ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಕೆಲಸದ ಸಮಯವನ್ನು ಸೆ.1, 2023 ರಿಂದ ಜಾರಿಗೆ ಬರುವಂತೆ ಪ್ರಸ್ತುತ ಇರುವ 1 ಗಂಟೆಯಿಂದ 8 ಗಂಟೆವರೆಗೆ ಹೆಚ್ಚಿಸಿ ಅಂದರೆ ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರಗಳಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಮಧ್ಯಾಹ್ನ 3 ರಿಂದ ಸಂಜೆ 7ರ ವರೆಗೆ ಹಾಗೂ ಶನಿವಾರ ಮತ್ತು ಭಾನುವಾರದಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಹಾಗೂ ಮಧ್ಯಾಹ್ನ 2 ರಿಂದ ಸಂಜೆ 6 ವರೆಗೆ ನಿಗದಿಪಡಿಸಲು ನಿರ್ಧರಿಸಿದೆ.
ಕೆಲಸದ ಹೆಚ್ಚಿದ ಗಂಟೆಗಳನ್ನು ಗಮನದಲ್ಲಿಟ್ಟುಕೊಂಡು ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರಿಗೆ 15,196.12 ರೂ.ಗಳ ಮಾಸಿಕ ಕನಿಷ್ಟ ವೇತನ ಪಾವತಿಸಲು ಮತ್ತು ಗ್ರಂಥಾಲಯ ಉಪಕರವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಉಳಿಸಿಕೊಂಡು, ಹೆಚ್ಚುವರಿ ವೇತನವನ್ನು ಪಾವತಿಸಲು ನಿರ್ಧರಿಸಲಾಗಿದ್ದು, ಈ ಬಗ್ಗೆ ಪ್ರತ್ಯೇಕವಾಗಿ ಆದೇಶ ಹೊರಡಿಸಲು ಸರ್ಕಾರವು ನಿರ್ಣಯಿಸಿದೆ.
ಜತೆಗೆ ಈ ಗ್ರಂಥಾಲಯಗಳಿಗೆ ಅರಿವು ಕೇಂದ್ರ ಎಂದು ನಾಮಫಲಕ ಹಾಕಲು ಆದೇಶಿಸಿದೆ.