ನ್ಯೂಸ್

2-3 ತಿಂಗಳಲ್ಲಿ ಗ್ರಾಪಂ ಚುನಾವಣೆ, ಸಂಪುಟ ತೀರ್ಮಾನ

ಬೆಂಗಳೂರು: ರಾಜ್ಯದಲ್ಲಿ ಜೂನ್ ಹಾಗೂ ಆಗಸ್ಟ್ ತಿಂಗಳಲ್ಲಿ ಅವಧಿ ಮುಕ್ತಾಯಗೊಳ್ಳುವ ಸುಮಾರು 5,800 ಗ್ರಾಮ ಪಂಚಾಯಿತಿಗಳಿಗೆ 2-3 ತಿಂಗಳಲ್ಲಿ ಚುನಾವಣೆ ನಡೆಸಲು ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ರಾಜ್ಯದಲ್ಲಿ 6,025 ಗ್ರಾಮ ಪಂಚಾಯಿತಿಗಳಲ್ಲಿದ್ದು, ಸುಮಾರು 5,800 ಗ್ರಾಪಂಗಳ ಅವಧಿ ಜೂನ್-ಆಗಸ್ಟ್​ನಲ್ಲಿ ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿ ನೇಮಕ ಅಥವಾ ಆಡಳಿತ ಸಮಿತಿ ನೇಮಕ ಮಾಡುವ ಚರ್ಚೆ ನಡೆದಿತ್ತು. ಈಗದಕ್ಕೆ ತೆರೆ ಬಿದಿದೆ. ರಾಜ್ಯ ಚುನಾವಣಾ ಅಯೋಗ ಕೂಡ ಕರೊನಾ ಕಾರಣಕ್ಕೆ ಅಸಾಧಾರಣ ಪರಿಸ್ಥಿತಿ ಎಂದು ಪರಿಗಣಿಸಿ ಗ್ರಾಪಂಗಳ ಸಾರ್ವತ್ರಿಕ ಚುನಾವಣೆಯನ್ನು ಮುಂದೂಡಿತ್ತು. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ಗ್ರಾಪಂಗಳಿಗೆ ಚುನಾವಣೆ ನಡೆಸಲು ಸಂಪುಟ ತೀರ್ಮಾನ ತೆಗೆದುಕೊಂಡಿದೆ. ಚುನಾವಣೆ ನಡೆಯುವವರೆಗೆ ಆಡಳಿತಾಧಿಕಾರಿಗಳ ನೇಮಕ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು. ಕರೊನಾ ಕಾರಣ ಮುಂದೂಡಲ್ಪಟ್ಟಿದ್ದ ಸಹಕಾರ ಸಂಘದ ಚುನಾವಣೆ ನಡೆಸಲು ಸಹ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ರಾಜ್ಯದ ಸಕ್ಕರೆ ಕಾರ್ಖಾನೆಗಳನ್ನು ಹೊರತುಪಡಿಸಿ ಉಳಿದ ಸಹಕಾರ ಸಂಘಗಳ ಚುನಾವಣೆ ನಡೆಸಲಾಗುವುದು ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು. ಸಕ್ಕರೆ ಕಾರ್ಖಾನೆಗಳ ಸದಸ್ಯರ ಸಂಖ್ಯೆ 2-3 ಸಾವಿರ ದಷ್ಟಿರುವುದರಿಂದ ಕರೊನಾ ಸಂದರ್ಭದಲ್ಲಿ ಈ ಸಂಘಗಳ ಚುನಾವಣೆ ಸಾಧುವಲ್ಲ ಎಂದು ಸರ್ಕಾರ ತೀರ್ಮಾನಿಸಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಕೇಜಿಗಟ್ಟಲೆ ಚಿನ್ನ, ಬೆಳ್ಳಿ, ಸೈಟು, ಫ್ಲ್ಯಾಟು, ಮನೆಗಳು… ಬ್ರಹ್ಮಾಂಡ ಭ್ರಷ್ಟಾಚಾರ ಬಯಲು

  • ಸಾರ್ವಜನಿಕರ ಪರ ಹೋರಾಟದಲ್ಲಿ ಭಾಗಿಯಾಗಿ ಮೊಕದ್ದಮೆ ಎದುರಿಸುತ್ತಿದ್ದ 53 ಪ್ರಕರಣಗಳು ವಾಪಸ್. ಗಣಪತಿ ವಿಸರ್ಜನೆ, ರೈತರ ಹೋರಾಟ ಮತ್ತಿತರ ಪ್ರಕರಣಗಳು ಇದರಲ್ಲಿ ಸೇರಿವೆ. ಯಾವುದೇ ವೈಯಕ್ತಿಕ ಕೇಸ್​ಗಳಿಲ್ಲ.
  • 8 ಜಿಲ್ಲೆಗಳ 47 ತಾಲೂಕಿನ 1,697 ಪ್ರಾಥಮಿಕ ಆರೋಗ್ಯ ಕೇಂದ್ರ, 1,307 ಆರೋಗ್ಯ ಉಪಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲು ತೀರ್ವನ. ಇದಕ್ಕೆ ಕೇಂದ್ರ ಪುರಸ್ಕೃತ ಪ್ಯಾಕೇಜ್ ಅಡಿ 11.62 ಕೋಟಿ ರೂ. ಖರ್ಚು ಮಾಡಲು ನಿರ್ಧಾರ.
  • ಹಾಸನ ಹಾಗೂ ಸಿಂಧಗಿ ತಾಲೂಕಿನ ಅಲಮೇಲದಲ್ಲಿ ಪ್ರಾರಂಭಿಸಲು ಉದ್ದೇಶಿಸಿದ್ದ ತೋಟಗಾರಿಕೆ ಕಾಲೇಜು ಆರಂಭಕ್ಕೆ ತಡೆ.
  • ಬೆಂಗಳೂರಿನಿಂದ ಚಿಕ್ಕಬೇಗೂರು ಮತ್ತು ಹುಳಿಮಾವಿನಿಂದ ಒಟ್ಟು 25 ಎಂಎಲ್​ಡಿ ಸಂಸ್ಕರಿತ ನೀರನ್ನು ಕೆ.ಸಿ. ವ್ಯಾಲಿಗೆ ಹರಿಸಲು 40.50 ಕೋಟಿ ರೂ. ಅನುದಾನ ಬಿಡುಗಡೆಗೆ ನಿರ್ಧಾರ.
  • ಬೈಂದೂರನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲು ಒಪ್ಪಿಗೆ.
  • ನಗರೋತ್ಥಾನ ಕಾಯ್ದೆ ತಿದ್ದುಪಡಿಗೆ ಸಂಪುಟ ಸಮ್ಮತಿ. ಯಾವುದೇ ಯೋಜನೆ ರೂಪಿಸಬೇಕಾದರೆ ಯೋಜನಾ ಪ್ರಾಧಿಕಾರಗಳು ಸ್ಥಳೀಯ ಸಂಸ್ಥೆಗಳಿಂದ ಮಾಹಿತಿ ಪಡೆಯುವುದನ್ನು ಕಡ್ಡಾಯಗೊಳಿಸುವ ಸಂಬಂಧ ತಿದ್ದುಪಡಿಗೆ ತೀರ್ವನ.
  • 1998ರಲ್ಲಿ ಪೊ›ಬೆಷನರಿ ಹುದ್ದೆಗೆ ನೇಮಕಗೊಂಡವರಿಗೆ ಅವರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗೆ ನಿಗದಿಯಾದ ವೇತನ ಶ್ರೇಣಿ ನೀಡಿಕೆ. ಹಿಂದಿನ ಬಾಕಿ ಕೊಡುವ ಹಾಗಿಲ್ಲ. ಈ ವೃಂದದ ಅಧಿಕಾರಿಗಳಿಗೆ ಪ್ರೊಬೆಷನರಿ ಸೇವಾವಧಿ ರದ್ದುಪಡಿಸಲು ನಿರ್ಧಾರ.
  • ಇನ್ನುಮುಂದೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯವೊಂದೇ ದೂರ ಶಿಕ್ಷಣ ನೀಡಬೇಕು. ಅಲ್ಲದೆ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ಆದಾಯ ತೆರಿಗೆಗೆ ವಿನಾಯಿತಿ.
  • ಚಿಕ್ಕಮಗಳೂರಿನ ತೇಗೂರು ಬಳಿ ಮೆಡಿಕಲ್ ಕಾಲೇಜು ಪ್ರಾರಂಭಿಸಲು ತೀರ್ವನ. ಕಾಲೇಜಿಗೆ ಈ ಹಿಂದೆ ಜಮೀನು ಗುರುತಿಸಲಾಗಿತ್ತು. ಆ ಜಮೀನು ಸಾಕಾಗುತ್ತಿರಲಿಲ್ಲ.
  • ರೇರಾ ಕಾಯ್ದೆ ನಿಯಮಗಳಲ್ಲಿ ಬದಲಾವಣೆ. ಸೇಲ್ ಅಗ್ರಿಮೆಂಟ್ ಮಾಡಿಕೊಳ್ಳಲು ಈಗಿರುವ ಕಾಯ್ದೆಯಲ್ಲಿ ಅವಕಾಶವಿರಲಿಲ್ಲ. ಈಗ ಸೇಲ್ ಅಗ್ರಿಮೆಂಟ್ ದಾಖಲೆಯಾಗಲಿದೆ.
  • ಸಿಎಆರ್, ಡಿಎಆರ್, ಕೆಎಸ್​ಆರ್​ಪಿ, ಕೆಎಸ್​ಐಎಸ್​ಎಫ್ ಪೇದೆಗಳು ಸಿವಿಲ್ ಪೊಲೀಸ್ ಅಧಿಕಾರಿ ನೇಮಕಕ್ಕೆ ಅರ್ಜಿ ಸಲ್ಲಿಸಿದರೆ ಶೇ.10 ಕೃಪಾಂಕ ಕೊಡಲು ತೀರ್ಮಾನ
  • ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ನೇಮಕಾತಿ ಸಂದರ್ಭದಲ್ಲಿ ಶೇ.7 ಕೃಪಾಂಕ ನೀಡಲು ನಿರ್ಧಾರ.
  • ಅಧಿಕಾರಿಗಳಿಗೆ ಪೂರ್ವಾನ್ವಯ ಮುಂಬಡ್ತಿ, ಶಿಕ್ಷೆ ಮತ್ತು ದಂಡ- ಪ್ರಕರಣಗಳಲ್ಲಿ ಕೆಪಿಎಸ್​ಸಿ ಸಮಾಲೋಚನೆ ಇಲ್ಲದೆ ಇಲಾಖೆಗಳೇ ನಿರ್ಧಾರ ಕೈಗೊಳ್ಳಲು ಅವಕಾಶ ಕಲ್ಪಿಸಲು ನಿಯಮಗಳಿಗೆ ತಿದ್ದುಪಡಿ.