ಬೆಂಗಳೂರು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಕೊನೆಗೂ ಶಿಕ್ಷಣ ಇಲಾಖೆಯು ಸಿಹಿ ಸುದ್ದಿ ನೀಡಿದೆ. ಕಳೆದ ಒಂದು ವರ್ಷದಿಂದ ತಾಳ್ಮೆ, ಕುತೂಹಲದಿಂದ ಚಾಲಕ ಪಕ್ಷಿಯಂತೆ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ದಿನಾಂಕ ಪ್ರಕಟಿಸಿದೆ.
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ (6ರಿಂದ 8ನೇ ತರಗತಿ) ನೇಮಕಾತಿ-2022ರ ಸಂಬಂಧ 2023ರ ಮಾರ್ಚ್ 9ರಂದು ಪ್ರಕಟಿತ 1:1 ಅನುಪಾತದ ಮುಖ್ಯ ಆಯ್ಕೆ ಪಟ್ಟಿಯಲ್ಲಿನ ಅರ್ಹ ಅಭ್ಯರ್ಥಿಗಳಿಗೆ ಅ.21ರಂದು ಕೌನ್ಸೆಲಿಂಗ್ ನಡೆಸಿ ಸ್ಥಳ ನಿಯುಕ್ತಿ ಮಾಡಲಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ತಿಳಿಸಿದೆ.
371ಜೆ ಗೆ ಸಂಬಂಧಿಸಿದ ನ್ಯಾಯಾಲಯ ಪ್ರಕರಣಗಳು ಬಾಕಿ ಇರುವ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳನ್ನು ಹೊರತುಪಡಿಸಿ ಮತ್ತು ಬಿಬಿಎಂಪಿ ವ್ಯಾಪ್ತಿಯ ಶೇ.8 ಹುದ್ದೆಗಳಿಗೆ ಸಂಬಂಧಿಸಿದ ಬೆಂಗಳೂರು ಉತ್ತರ ಮತ್ತು ದಕ್ಷಿಣ ಶೈಕ್ಷಣಿಕ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ನಡೆಸಲಾಗುತ್ತದೆ.
ಅರ್ಹ ಅಭ್ಯರ್ಥಿಗಳ ವಿವರಗಳನ್ನು ಅ.19ರಂದು ಇಲಾಖೆ ವೆಬ್‌ಸೈಟ್ http://schooleducation.karnataka.gov.in
ನಲ್ಲಿ ಪ್ರಕಟಿಸಲಾಗುವುದು. ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಕ್ರಮವಾಗಿ ಗಣಿತ ಮತ್ತು ವಿಜ್ಞಾನ, ಸಮಾಜ ವಿಜ್ಞಾನ, ಜೀವ ವಿಜ್ಞಾನ ಮತ್ತು ಆಂಗ್ಲಭಾಷಾ ಹುದ್ದೆಗಳಿಗೆ ಸ್ಥಳ ನಿಯುಕ್ತಿ ಕೌನ್ಸೆಲಿಂಗ್ ಅನ್ನು ಅ.21ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾ ಉಪ ನಿರ್ದೇಶಕರ ಕಚೇರಿಗಳಲ್ಲಿ ನಡೆಸಲಾಗುತ್ತದೆ.
ಇಲಾಖೆ ವೆಬ್‌ಸೈಟ್‌ನಲ್ಲಿ ನೀಡಿರುವಂತೆ ಎಲ್ಲ ಅಗತ್ಯ ವಿವರಗಳು, ಭಾವಚಿತ್ರವಿರುವ ಗುರುತಿನ ಚೀಟಿ ಮತ್ತು ನೇಮಕಾತಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಹಾಜರಾಗುವಂತೆ ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಆಯಾ ಜಿಲ್ಲಾ ಡಿಡಿಪಿಐ ಗಳನ್ನು ಸಂಪರ್ಕಿಸುವಂತೆ ಶಾಲಾ ಶಿಕ್ಷಣ ಆಯುಕ್ತರು ಸೂಚನೆ ನೀಡಿದ್ದಾರೆ.
ನೇಮಕಾತಿ ಸಂಬಂಧ ಹೈಕೋರ್ಟ್‌ನ ವಿಭಾಗೀಯ ಪೀಠವು ಮಾ.8ರಂದು ಪ್ರಕಟಿಸಿರುವ 1:1ರ ಅನುಪಾತದ ಮುಖ್ಯ ಆಯ್ಕೆಪಟ್ಟಿಯಲ್ಲಿರುವಂತೆ ನೇಮಕ ಮಾಡುವಂತೆ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.
ಶಿಕ್ಷಣ ಇಲಾಖೆಯು 15 ಸಾವಿರ ಪದವೀಧರ ಶಿಕ್ಷಕರ ನೇಮಕಾತಿಗೆ ಆದೇಶ ಹೊರಡಿಸಿತ್ತು. 2022ರ ಮೇ ತಿಂಗಳಲ್ಲಿ ಪರೀಕ್ಷೆ ನಡೆಸಿ, ನ.18ರಂದು ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಈ ಪಟ್ಟಿ ಆಧಾರದಲ್ಲಿ ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಹೈಕೋರ್ಟ್ ನಿರ್ದೇಶನದಂತೆ ಮಾ.9ರಂದು 2ನೇ ಬಾರಿಗೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಅದರಲ್ಲಿ 13,352 ಅಭ್ಯರ್ಥಿಗಳು ಆಯ್ಕೆಯಾಗಿದ್ದರು.