ನ್ಯೂಸ್

ಗ್ರಾ.ಪಂ. ಕಚೇರಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮೋಜಿನಿ ವ್ಯವಸ್ಥೆಯ ಸೇವೆಗಳು ಲಭ್ಯ: ಪ್ರಿಯಾಂಕ್ ಖರ್ಗೆ

ಬೆಂಗಳೂರು:

ಗ್ರಾಮೀಣ ಜನರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಆರಂಭಿಸಲಾಗಿರುವ ಬಾಪೂಜಿ ಸೇವಾ ಕೇಂದ್ರಗಳ ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣದಲ್ಲಿ ಲೋಕಾರ್ಪಣೆಗೊಳಿಸಿದರು.

ಮೂಲಕ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಮೋಜಿನಿ ವ್ಯವಸ್ಥೆಯಡಿ 11 ಇ ನಕ್ಷೆ, ಜಮೀನಿನ ತತ್ಕಾಲ್ ಪೋಡಿಗಾಗಿ ಅರ್ಜಿ, ಭೂ ಪರಿವರ್ತನೆಗಾಗಿ ಅರ್ಜಿ ಮತ್ತು ಹದ್ದುಬಸ್ತುಗಾಗಿ ಅರ್ಜಿ ಸೇವೆಗಳು ಇದರಲ್ಲಿ ಲಭ್ಯವಿದೆ.

ಗ್ರಾಮೀಣ ಜನರ ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ ಹಾಗೂ ಕೃಷಿ ಚಟುವಟಿಕೆಗಳಿಗಾಗಿ ವಿವಿಧ ಇಲಾಖೆಗಳಿಂದ ಹಲವಾರು ದಾಖಲೆಗಳನ್ನು ಪಡೆಯುವ ಅಗತ್ಯವಿದ್ದು, ದಾಖಲೆಗಳನ್ನು ತ್ವರಿತವಾಗಿ ಮತ್ತು ಸಮೀಪವಾಗಿ ಪಡೆದುಕೊಳ್ಳಲು 2016ರಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು.

ಬಾಪೂಜಿ ಸೇವಾ ಕೇಂದ್ರಗಳಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ 17 ಸೇವೆಗಳನ್ನು ಹಾಗೂ ಕಂದಾಯ ಇಲಾಖೆ, ಕರ‌್ಮಿಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇಂಧನ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗಳ ಸೇವೆಗಳನ್ನು ಮತ್ತು ಆಧಾರ್ ಸೇವೆಗಳನ್ನು ಒದಗಿಸಲಾಗುತ್ತಿದೆ.

ಗ್ರಾಮೀಣ ಜನರು ಸರ್ಕಾರಿ ಸೇವೆಯನ್ನು ತಾಲ್ಲೂಕು ಅಥವಾ ಹೋಬಳಿ ಮಟ್ಟದಲ್ಲೇ ಪಡೆಯಬೇಕಾದುದರಿಂದ ಜನಸಂದಣಿ ಹೆಚ್ಚುವುದರ ಜೊತೆಗೆ ಕೇಂದ್ರದಲ್ಲಿ ತ್ವರಿತ ಗತಿಯಲ್ಲಿ ಸೇವೆಯನ್ನು ಒದಗಿಸುವುದಕ್ಕೆ ತೊಡಕಾಗುತ್ತಿತ್ತು. ಈಗ ಈ ಸೇವೆಗಳನ್ನು ಗ್ರಾಮ ಪಂಚಾಯತಿಗಳ ಹಂತದಲ್ಲಿಯೇ ದೊರಕುವಂತೆ ಅನುಕೂಲ ಕಲ್ಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶಗಳ ಅದಾಂಜು 3.7 ಕೋಟಿ ಜನರು ಅಂದರೆ 78 ಲಕ್ಷ ಕುಟುಂಬಗಳು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಮೋಜಿನಿ ವ್ಯವಸ್ಥೆಯಡಿ ವಿವಿಧ ಸೇವೆಗಳನ್ನು ಪಡೆಯುವಲ್ಲಿ ಗ್ರಾಮ ಪಂಚಾಯತಿಯ ಬಾಪೂಜಿ ಸೇವಾ ಕೇಂದ್ರಗಳು ಮಹ್ವತದ ಪಾತ್ರವಹಿಸಲಿವೆ ಎಂದೂ ಸಚಿವರು ಹೇಳಿದ್ದಾರೆ.