ಬೆಂಗಳೂರು: ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಜನನ, ಮರಣ ಉಪನೋಂದಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುವ ಸಂಬಂಧ ಸರ್ಕಾರ ಸುತ್ತೋಲೆ ಹೊರಡಿಸಿದೆ.
1 ಜನವರಿ 2000 ರಂದು ಜನನ, ಮರಣ ನೋಂದಣಿ ಕಡ್ಡಾಯವಾಗಿ ಜಾರಿಗೊಳಿಸಲಾಗಿದೆ. ಜನನ, ಮರಣ ಘಟನೆಗಳು ಘಟಿಸಿದ ಮೂವತ್ತು ದಿನಗಳವರೆಗಿನ ಘಟನೆಗಳನ್ನು ನೋಂದಾಯಿಸಲು ಪಂಚಾಯಿತಿ ಕಾರ್ಯದರ್ಶಿಗಳನ್ನು ಜನನ, ಮರಣ ಉಪ ನೋಂದಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ಘಟನೆ ಸಂಭವಿಸಿದ 21 ದಿನಗಳ ಒಳಗೆ ಜನನ, ಮರಣ ಘಟನೆಗಳನ್ನು ನೋಂದಣಿ ಮಾಡಿ ಉಚಿತವಾಗಿ ಒಂದು ಪ್ರಮಾಣ ಪತ್ರ ವಿತರಿಸಬೇಕು. 21 ದಿನಗಳ ತರುವಾಯ ಮತ್ತು 30 ದಿನಗಳ ಒಳಗೆ ವರದಿಯಾಗುವ ಘಟನೆಗಳನ್ನು 2 ರೂ. ತಡೆ ಶುಲ್ಕ ಪಡೆದು ನೋಂದಾಯಿಸಬೇಕು.
ಘಟನೆ ಸಂಭವಿಸಿದ 30 ದಿನಗಳ ತರುವಾಯ ವರದಿಯಾಗುವ ಘಟನೆಗಳ ನೋಂದಣಿಯನ್ನು ಮಾಡತಕ್ಕದ್ದಲ್ಲ. ಈ ಘಟನೆಗಳ ನೋಂದಣಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಬೇಕಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ಸಾರ್ವಜನಿಕರಿಗೆ/ಅರ್ಜಿದಾರರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.
30 ದಿನಗಳ ತರುವಾಯ ಒಂದು ವರ್ಷದ ಒಳಗೆ ವರದಿಯಾಗುವ ಜನನ, ಮರಣ ಹಾಗೂ ನಿರ್ಜೀವ ಜನನಗಳನ್ನು ತಹಸೀಲ್ದಾರರ ಲಿಖಿತ ಅನುಮತಿಯೊಂದಿಗೆ 5 ರೂ. ತಡೆ ಶುಲ್ಕ ಪಡೆದು ನೋಂದಾಯಿಸಬೇಕು.
ಒಂದು ವರ್ಷದ ನಂತರ ವರದಿಯಾಗುವ ಜನನ, ನರಣ ಘಟನೆಗಳಿಗೆ ವಿಳಂಬ ನೋಂದಣಿ ಮಾಡಲು ಮೊದಲನೇ ವರ್ಗದ ದಂಡಾಧಿಕಾರಿ ಅಥವಾ ಮಹಾ ಪ್ರಾಂತ ದಂಡಾಧಿಕಾರಿಗಳ ಆದೇಶದೊಂದಿಗೆ ತಡೆ ಶುಲ್ಕ 10 ರೂ. ಪಡೆದು ನೋಂದಾಯಿಸಬೇಕು ಎಂದು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ.