ಬೆಂಗಳೂರು: ಗ್ರಾಮ ಪಂಚಾಯಿತಿಗಳಲ್ಲಿ ನಡೆಯುವ ಅವ್ಯವಹಾರಕ್ಕೆ ಇನ್ನು ಮುಂದೆ ಚುನಾಯಿತ ಪ್ರತಿನಿಧಿಗಳನ್ನೂ ಜವಾಬ್ದಾರರನ್ನಾಗಿಸಲಾಗುತ್ತದೆ. ಈವರೆಗೆ ಕೇವಲ ಪಿಡಿಒಗಳನ್ನೇ ಹೊಣೆಗಾರರನ್ನಾಗಿಸಲಾಗುತ್ತಿತ್ತು.
ಹೌದು, ಗ್ರಾಮ ಪಂಚಾಯಿತಿಗಳಲ್ಲಿನ ಆರ್ಥಿಕ ವ್ಯವಹಾರಗಳ ಖರ್ಚು, ವೆಚ್ಚ ಪಾವತಿಸುವಾಗ ಧನಾದೇಶವನ್ನು ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ಲೆಕ್ಕ ಪತ್ರಗಳು ಮತ್ತು ಬಜೆಟ್) ನಿಯಮಗಳು, 2006 ರನ್ವಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಜಂಟಿಯಾಗಿ ಸಹಿ ಮಾಡುತ್ತಿದ್ದು, ಅವರೂ ಸಹ ಜವಾಬ್ದಾರರಾಗಿರುತ್ತಾರೆ.
ಗ್ರಾಮ ಪಂಚಾಯಿತಿಗಳಲ್ಲಿನ ಆರ್ಥಿಕ ಅವ್ಯವಹಾರ, ಹಣಕಾಸು ದುರುಪಯೋಗಕ್ಕೆ ಸಂಬಂಧಪಟ್ಟ ಪ್ರಕರಣಗಳಲ್ಲಿ ಕೇವಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮಾತ್ರ ದಂಡನೆಯನ್ನು ವಿಧಿಸಲಾಗುತ್ತಿದೆ. ಗ್ರಾಮ ಪಂಚಾಯತಿ ಅಧ್ಯಕ್ಷ/ಸದಸ್ಯರು, ಇತರೆ ಅಧಿಕಾರಿಗಳ ವಿರುದ್ಧ ಯಾವುದೇ ಪ್ರಕರಣ ದಾಖಲಾಗುತ್ತಿಲ್ಲ. ಕಾಮಗಾರಿಗಳ ಅನುಷ್ಠಾನದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ ತಾಂತ್ರಿಕ ಅನುಮೋದನೆ ಮತ್ತು ಕಾಮಗಾರಿಗಳ ಎಂ.ಬಿ. ಯನ್ನು ನಮೂದಿಸುತ್ತಿದ್ದು, ಅದರ ಆಧಾರದ ಮೇಲೆ ಬಿಲ್ಲುಗಳನ್ನು ಪಾವತಿಸುತ್ತಿರುವ ಕಾರಣ ಇನ್ನು ಮುಂದೆ ಇಂತಹ ಎಲ್ಲ ಪ್ರಕರಣಗಳಲ್ಲಿ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಪಾತ್ರಕ್ಕನುಗುಣವಾಗಿ ಸದರಿಯವರ ಮೇಲೆ ಕ್ರಮವಹಿಸುವ/ವಹಿಸಬೇಕಿರುವ ಮಾಹಿತಿಯನ್ನು ತಮ್ಮ ಸೃಷ್ಟ ಅಭಿಪ್ರಾಯದೊಂದಿಗೆ ಆಯುಕ್ತಾಲಯಕ್ಕೆ ಸಲ್ಲಿಸಲು ಸಿಇಒಗಳನ್ನು ಕೋರಲಾಗಿದೆ.