ನ್ಯೂಸ್

ರಾಜ್ಯದ ಕೈಗಾರಿಕೆಗಳಿಗೆ ಚೌತಿ ಉಡುಗೊರೆ

ಬೆಂಗಳೂರು: ಕರೊನಾ ಸಂಕಷ್ಟದ ಕಾಲದಲ್ಲಿ ಕೈಗಾರಿಕೆಗಳ ಉತ್ತೇಜನಕ್ಕೆ ಕ್ರಮಕೈಗೊಳ್ಳುತ್ತಿರುವ ರಾಜ್ಯ ಸರ್ಕಾರ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ವಿನ್ಯಾಸ ಮತ್ತು ಉತ್ಪಾದನಾ (ಇಎಸ್​ಡಿಎಂ) ಕ್ಷೇತ್ರವನ್ನು ಪ್ರೋತ್ಸಾಹಿಸಲು ಮುಂದಾಗಿದೆ. ಈ ಕ್ಷೇತ್ರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಖರೀದಿಸಲಾಗುವ ಭೂಮಿಗೆ ಶೇ.25 ನೇರ ಸಬ್ಸಿಡಿ ನೀಡುವುದೂ ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳು ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ಹೊರಬೀಳಲಿವೆ.

ಈ ಎಲ್ಲ ಪ್ರಸ್ತಾವನೆಗಳಿಗೂ ಹಣಕಾಸು ಇಲಾಖೆ ಈಗಾಗಲೇ ಒಪ್ಪಿಗೆ ನೀಡಿದ್ದು, ಸಂಪುಟ ಸಭೆಯಲ್ಲಿ ಹೊಸ ಪ್ರಸ್ತಾವನೆಗಳಿಗೆ ಅನುಮೋದನೆ ಪಡೆಯಲಾಗುವುದೆಂದು ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ. ಭಾರತೀಯ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಸಂಘ ಬುಧವಾರ ಹಮ್ಮಿಕೊಂಡಿದ್ದ ‘ವಿಷನ್ ಶೃಂಗಸಭೆ -2020’ ಉದ್ದೇಶಿಸಿ ಆನ್​ಲೈನ್ ಭಾಷಣ ಮಾಡಿದ ಎಲೆಕ್ಟ್ರಾನಿಕ್ಸ್, ಐಟಿ ಬಿಟಿ ಸಚಿವರೂ ಆದ ಅಶ್ವತ್ಥನಾರಾಯಣ ಇಡೀ ದೇಶದಲ್ಲಿ ಇಂಥ ಕ್ರಮ ಕೈಗೊಂಡಿರುವ ಏಕೈಕ ರಾಜ್ಯ ಕರ್ನಾಟಕವಾಗಲಿದೆ ಎಂದರು.

ಪ್ರತಿ ಜಿಲ್ಲೆಯಲ್ಲಿ 10 ಸಾವಿರ ಉದ್ಯೋಗ: ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆ ಮತ್ತು ವಿನ್ಯಾಸಕ್ಕೆ 3 ಜಿಲ್ಲೆಗಳಲ್ಲಿ ಕ್ಲಸ್ಟರ್ ಸ್ಥಾಪಿಸಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್, ಮೈಸೂರು ಜಿಲ್ಲೆಯಲ್ಲಿ ಪಿಸಿಬಿಎ ಮತ್ತು ಐಸಿಬಿ ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಎಲ್​ಇಡಿ ದೀಪ ತಯಾರಿಸಲಾಗುತ್ತದೆ. ಪ್ರತಿ ಜಿಲ್ಲೆಯಲ್ಲೂ 10 ಸಾವಿರ ಉದೊ್ಯೕಗ ಸೃಷ್ಟಿ ಹಾಗೂ 725 ದಶಲಕ್ಷ ಡಾಲರ್ ಬಂಡವಾಳ ಆಕರ್ಷಿಸಲಾಗುತ್ತಿದೆ, 20 ಸಾವಿರಕ್ಕೂ ಹೆಚ್ಚು ಯುವಕರಿಗೆ ಕೌಶಲ ತರಬೇತಿ ನೀಡಲಾಗಿದೆ ಎಂದು ಡಿಸಿಎಂ ವಿವರಿಸಿದ್ದಾರೆ.

ಡಿಜಿಟಲ್ ಎಕಾನಮಿ ಮಿಷನ್

ರಾಜ್ಯದಲ್ಲಿ ಡಿಜಿಟಲ್ ಆರ್ಥಿಕತೆಯನ್ನು ಉತ್ತೇಜಿಸಲು ಹಾಗೂ ಹೂಡಿಕೆ ಆಕರ್ಷಿಸುವ ಉದ್ದೇಶದಿಂದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸ್ಥಾಪಿಸಲಾಗುತ್ತದೆ. ಈ ಕ್ಷೇತ್ರದಲ್ಲಿ ಹೊಸದಾಗಿ ಬರುವ ಕಂಪನಿಗಳಿಗೆ ಸೇವೆಯನ್ನು ಒದಗಿಸುವ ಹಾಗೂ ನೀತಿನಿರೂಪಣೆ ಮಾಡುವ ಕೆಲಸವನ್ನು ಈ ಸಂಸ್ಥೆ ಮಾಡಲಿದೆ ಎಂದು ಡಿಸಿಎಂ ತಿಳಿಸಿದರು.

ಮುಖ್ಯಾಂಶ

25- ರಾಜ್ಯದ 13 ಜಿಲ್ಲೆಗಳಲ್ಲಿರುವ ಒಟ್ಟು ಕೈಗಾರಿಕಾ ಪ್ರದೇಶ

07- ಸಾವಿರ ಎಕರೆ ಭೂಮಿ ಈವರೆಗೆ ನೀಡಿರುವುದು

800- ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆ ಮತ್ತು ವಿನ್ಯಾಸ ಕ್ಷೇತ್ರಕ್ಕೆ 7 ಎಸ್​ಇಝೆಡ್​ಗಳಿದ್ದು, ಒಟ್ಟು 800 ಎಕರೆ ಭೂಮಿ ಇದೆ

ಸರ್ಕಾರದ ಇತರ ಸೌಲಭ್ಯ

  • ಭೂಮಿ ನೋಂದಣಿಯ ಮುದ್ರಾಂಕ, ನೋಂದಣಿ ಶುಲ್ಕವನ್ನು ಸರ್ಕಾರವೇ ಭರಿಸಲಿದೆ
  • ಭೂ ಪರಿವರ್ತನೆಗೆ ಖರ್ಚಾದ ಶುಲ್ಕವನ್ನೂ ಮರುಪಾವತಿಸಲಿದೆ
  • 5 ವರ್ಷ ಪ್ರತಿ ಯೂನಿಟ್​ಗೆ 1 ರೂ.ಸಬ್ಸಿಡಿ, ವಿದ್ಯುತ್ ಮೇಲಿನ ತೆರಿಗೆಗೆ 5 ವರ್ಷ ರಿಯಾಯಿತಿ
  • ಒಟ್ಟಾರೆ ವಹಿವಾಟಿನ ಮೇಲೆ ಶೇ.1 ರಿಯಾಯಿತಿ

50 ಎಕರೆವರೆಗೆ ಭೂ ಖರೀದಿಗೆ ಅನ್ವಯ

ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲಿ ಖರೀದಿಸುವ ಜಮೀನುಗಳಿಗೆ ರಿಯಾಯಿತಿ ಅನ್ವಯಿಸಲ್ಲ. ಉಳಿದ ಯಾವುದೇ ಜಿಲ್ಲೆಗಳಲ್ಲಿ 50 ಎಕರೆವರೆಗೆ ಭೂಮಿ ಖರೀದಿ ಮಾಡಿ ಕೈಗಾರಿಕೆ ಸ್ಥಾಪಿಸಿದರೂ ಈ ಸೌಲಭ್ಯ ದೊರೆಯಲಿದೆ. ಕೆಐಎಡಿಬಿ ಅಥವಾ ಕೆಎಸ್​ಎಸ್​ಐಡಿಸಿಯಿಂದ ಖರೀದಿಸಿದ ಭೂಮಿಯ ಮಾರ್ಗಸೂಚಿದರ ಅಥವಾ ಭೂಮಿಯ ಖರೀದಿ ದರದ ಶೇ.25 ರಿಯಾಯಿತಿ ಸಿಗಲಿದೆ. ಕೈಗಾರಿಕಾ ಘಟಕ ಸ್ಥಾಪನೆ ಮತ್ತು ಯಂತ್ರಗಳ ಖರೀದಿಗೆ ಹೂಡಿಕೆ ಮಾಡುವ ಒಟ್ಟು ಹಣದಲ್ಲಿ ಶೇ.20 ರಿಯಾಯಿತಿ ನೀಡಲಾಗುವುದೆಂದೂ ಸಚಿವರು ಘೋಷಿಸಿದರು. ಈ ಘೋಷಣೆಗೆ ಹರ್ಷ ವ್ಯಕ್ತಪಡಿಸಿದ ಉದ್ಯಮಿಗಳು ಕರ್ನಾಟಕದಲ್ಲಿ ಹೆಚ್ಚೆಚ್ಚು ಬಂಡವಾಳ ಹೂಡುವ ಭರವಸೆ ನೀಡಿದರು.

ಯಾವ ಕ್ಷೇತ್ರಗಳಿಗೆ ಸಿಗಲಿದೆ ಅನುಕೂಲ?

ಎಲೆಕ್ಟ್ರಾನಿಕ್ ಉತ್ಪನ್ನ ಉತ್ಪಾದನೆ ಮತ್ತು ವಿನ್ಯಾಸ, ಸೆಮಿಕಂಡಕ್ಟರ್​ಗಳ ವಿನ್ಯಾಸ ಮತ್ತು ತಯಾರಿ, ಎಲೆಕ್ಟ್ರಾನಿಕ್ ಉತ್ಪಾದನಾ ಸೇವೆ, ಸೋಲಾರ್ ಸೆಲ್ ಉತ್ಪಾದನೆ, ಎಲ್​ಇಡಿಗಳ ತಯಾರಿ, ಜತೆಗೆ ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ನೀತಿಯ ಅಡಿಯಲ್ಲಿ ಯಾವುದೇ ಉತ್ಪನ್ನ ತಯಾರಿಸಿದರೂ ಸೌಲಭ್ಯ ಸಿಗಲಿದೆ.