ರಾಮನಗರ : ಜಿಲ್ಲಾ ಸರ್ಕಾರಿ ನೌಕರರ ಸಂಘ ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಆರ್.ಕೆ. ಭೈರಲಿಂಗಯ್ಯ ಅಭಿಪ್ರಾಯಪಟ್ಟರು.
ನಗರದ ನರಸಿಂಹಯ್ಯ ಬಡಾವಣೆಯಲ್ಲಿರುವ ಕ್ರೀಡಾ ಸಾಂಸ್ಕೃತಿಕ ಕೇಂದ್ರದಲ್ಲಿ ಶನಿವಾರ 2020-2021ರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಸಂಘದ ವ್ಯಾಪ್ತಿಗೆ ಒಳಪಡುವ ಸುಮಾರು 78 ಸರ್ಕಾರಿ ನೌಕರರ ಹಿತ ಕಾಪಾಡುವ ಜತೆಗೆ ಒಂದು ಹೆಜ್ಜೆ ಮುಂದಿಟ್ಟು ನಾಗರಿಕರಿಗೆ ಆರೋಗ್ಯ ತಪಾಸಣೆ ಶಿಬಿರ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನೌಕರರ ಕ್ರೀಡಾಕೂಟ, ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳ ವಿತರಣೆಯಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಜನಸ್ನೇಹಿ ಸಂಘಟನೆಯಾಗಿ ಕ್ರಿಯಾಶೀಲವಾಗಿದೆ.
ಷಡಕ್ಷರಿ ಅವರು ರಾಜ್ಯಾಧ್ಯಕ್ಷರಾದ ನಂತರ ರಾಜ್ಯ ಸಂಘದ ಕೇಂದ್ರ ಕಚೇರಿಯನ್ನು ಸುಮಾರು 13 ಕೋಟಿ ರೂ.ಗಳ ವೆಚ್ಚದಲ್ಲಿ ನವೀಕರಣಗೊಳಿಸಿ ಸುಸಜ್ಜಿತ ಕಟ್ಟಡ ನಿರ್ಮಿಸಿರುವುದು ಇತಿಹಾಸದ ಪುಟಗಳಲ್ಲಿ ಬರೆದಿಡುವ ವಿಚಾರವಾಗಿದೆ. ಷಡಕ್ಷರಿ ಅವರು ಅಧ್ಯಕ್ಷರಾಗಿ ನೌಕರರ ಪರವಾದ ಅನೇಕ ಸರ್ಕಾರಿ ಆದೇಶಗಳನ್ನು ಪಡೆಯುವ ನಿಟ್ಟಿನಲ್ಲಿ ಯಶಸ್ವಿ ಆಗಿದ್ದಾರೆ ಎಂದರು.
ರಾಜ್ಯಾಧ್ಯಕ್ಷರು 2023ಕ್ಕೆ ಕೇಂದ್ರ ಸರ್ಕಾರಿ ನೌಕರರ ವೇತನಕ್ಕೆ ಸರಿಸಮಾನವಾಗಿ ರಾಜ್ಯ ಸರ್ಕಾರಿ ನೌಕರರಿಗೂ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ರಾಜ್ಯ ಸಂಘ ತೆಗೆದುಕೊಳ್ಳುವ ನಿರ್ಣಯಗಳನ್ನು ನಮ್ಮ ಜಿಲ್ಲಾ ಸಂಘ ಗೌರವಿಸಲಿದೆ ಎಂದು ಭೈರಲಿಂಗಯ್ಯ ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ರಾಜೂಗೌಡ ಸಂಘದ ವಾರ್ಷಿಕ ವರದಿ ಲೆಕ್ಕಪತ್ರಗಳ ವರದಿ ಮಂಡಿಸಿದರು.
ಖಜಾಂಚಿ ನರಸಯ್ಯ, ಚನ್ನಪಟ್ಟಣ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್, ಮಾಗಡಿ ಅಧ್ಯಕ್ಷ ಶಿವರಾಮಯ್ಯ, ಕನಕಪುರ ಅಧ್ಯಕ್ಷ ಚಿಕ್ಕೆಂಪೇಗೌಡ ಹಾಗೂ ಸಂಘದ ಜಿಲ್ಲೆಯ ಚುನಾಯಿತ ನಿರ್ದೇಶಕರು, ನಾಮ ನಿರ್ದೇಶಕರು ಹಾಜರಿದ್ದರು.