ನ್ಯೂಸ್

ಸರ್ಕಾರಕ್ಕೆ ಸೆಡ್ಡು ಹೊಡೆದ ಸಾರಿಗೆ ಸಿಬ್ಬಂದಿ: ಮತ್ತೆ ಬಸ್​ ಬಂದ್​

arunakunigal

ಬೆಂಗಳೂರು: ಪ್ರಯಾಣಿಕರೇ ಗಮನಿಸಿ, ಸಾರಿಗೆ ಬಸ್​ಗಳು ಸದ್ಯಕ್ಕೆ ರಸ್ತೆಗೆ ಇಳಿಯುವಂತೆ ಕಾಣುತ್ತಿಲ್ಲ. ಸರ್ಕಾರ ಮತ್ತು ಸಾರಿಗೆ ನೌಕರರ ಮಾತುಕತೆ 'ನಾ ಕೊಡೆ- ನೀ ಬಿಡೆ' ಎಂಬಂತಾಗಿದ್ದು, ಮುಷ್ಕರ ಮುಂದುವರಿಯಲಿದೆ ಎಂದು ಫ್ರೀಡಂ ಪಾರ್ಕ್​ನಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಭಾನುವಾರ ಸಂಜೆ 7.30ರ ಸುಮಾರಿಗೆ​ ಘೋಷಿಸಿದ್ದಾರೆ.

ಪ್ರತಿಭಟನೆ ನಡೆಸುತ್ತಿದ್ದ ಸಾರಿಗೆ ಸಿಬ್ಬಂದಿ ಜತೆಗಿನ ಮಾತುಕತೆ ಯಶಸ್ವಿಯಾಗಿದ್ದು, ಇಂದು ರಾತ್ರಿಯಿಂದಲೇ ಬಸ್ ಸಂಚಾರ ಪುನರಾರಂಭ ಆಗಲಿದೆ ಎಂದು ಸಚಿವ ಲಕ್ಷ್ಮಣ ಸವದಿ ಅವರು ಸಂಜೆ 6.30ರ ಸುಮಾರಿಗೆ ಹೇಳಿದ್ದರು. ಅಲ್ಲದೆ ಕೋಡಿಹಳ್ಳಿ ಚಂದ್ರಶೇಖರ್​ ಕೂಡ, ಸಂಧಾನ ಸಭೆ ಸಕ್ಸಸ್​ ಆಗಿದ್ದು, ಮುಷ್ಕರ ಕೈ ಬಿಡುವ ಬಗ್ಗೆ ಫ್ರೀಡಂ ಪಾರ್ಕ್​ನಲ್ಲಿ ಘೋಷಣೆ ಮಾಡುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಕೆಲವೆಡೆ ಬಸ್​ಗಳ ಸಂಚಾರವೂ ಆರಂಭವಾಗಿತ್ತು. ಇದೀಗ ಮುಷ್ಕರ ಮುಂದುವರಿಸಿದ ಪರಿಣಾಮ ಸಂಚಾರ ಆರಂಭಿಸಿದ್ದ ಬಸ್​ಗಳನ್ನು ನಿಲ್ಲಿಸಲಾಗಿದ್ದು, ಪ್ರಯಾಣಿಕರ ಪ್ರರದಾಟ ಮುಂದುವರಿದಿದೆ.

ಸಂಧಾನ ಸಭೆಯಲ್ಲಿ ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲ್ಲ ಎಂದಿದ್ದ ಸರ್ಕಾರ, 6ನೇ ವೇತನ ಆಯೋಗ ಜಾರಿ ಸೇರಿದಂತೆ, ಉಳಿದ ಬೇಡಿಕೆ ಈಡೇರಿಸಲು ಒಪ್ಪಿತ್ತು. ಇದಕ್ಕೆ ಮೂವರ ಸಚಿವರ ಮುಂದೆ ನಮಗೆ ಒಪ್ಪಿಗೆ ಇದೆ ಎಂದು ಚಪ್ಪಾಳೆ ತಟ್ಟಿ ಸಭೆಯಿಂದ ಚಂದ್ರಶೇಖರ್ ಆ್ಯಂಡ್ ಟೀಮ್ ಹೊರಬಂದಿತ್ತು. ಆದರೆ, ಅಲ್ಲಿಂತ ಪ್ರತಿಭಟನೆ ಸ್ಥಳಕ್ಕೆ ಹೋದ ತಕ್ಷಣ ಯೂಟರ್ನ್ ಹೊಡೆದಿದೆ. ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷರು ಆಗ್ರಹಿಸಿದ್ದಾರೆ. ನಾಳೆಯೂ ಬಸ್ ಸಂಚಾರ ಇರಲ್ಲ ಎಂಬ ಮಾಹಿತಿ ಲಭ್ಯವಾಗಿದೆ.