ವಿಜಯವಾಡ (ಆಂಧ್ರ ಪ್ರದೇಶ): ಕರೊನಾ ವೈರಸ್ ತಡೆಗೆ ರಾಜ್ಯದ ಜನತೆಗೆ ಸರ್ಕಾರದ ವತಿಯಿಂದಲೇ ಮಾಸ್ಕ್ ವಿತರಿಸುವ ಆಂಧ್ರಪ್ರದೇಶ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ 16 ಕೋಟಿ ಮಾಸ್ಕ್ ಖರೀದಿಸಲು ತೀರ್ಮಾನಿಸಿದೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಕರೊನಾ ವೈರಸ್ ಪರಿಶೀಲನೆ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಮಾಸ್ಕ್ ಕುರಿತು ವಿವರಣೆ ನೀಡಿರುವ ಮುಖ್ಯಮಂತ್ರಿ, ‘ರಾಜ್ಯದ ಜನಸಂಖ್ಯೆ 5.3 ಕೋಟಿ. ಪ್ರತಿ ವ್ಯಕ್ತಿಗೆ ಮೂರು ಮಾಸ್ಕ್‌ನಂತೆ 16 ಕೋಟಿ ಮಾಸ್ಕ್ ವಿತರಿಸಲು ಸರ್ಕಾರ ತೀರ್ಮಾನಿಸಿದೆ’ ಎಂದಿದ್ದಾರೆ.
ಆಶಾ ಕಾರ್ಯಕರ್ತೆಯರು ಮನೆಮನೆಗೆ ಹೋಗಿ ಮೂರನೆಯ ರೌಂಡ್ ನಡೆಸಿದ ಪರಿಶೀಲನೆಯ ನಂತರ 32,349 ಮಂದಿಗೆ ಸ್ಕ್ರೀನಿಂಗ್ ನಡೆಸಲಾಗಿತ್ತು. ಆ ಪೈಕಿ 9,107 ಮಂದಿಗೆ ಕರೊನಾ ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇವರನ್ನು ಪರೀಕ್ಷೆಗೆ ಒಳಪಡಿಸುವಂತೆ ಈಗ ಸೂಚಿಸಲಾಗಿದೆ.
ಆಂಧ್ರಪ್ರದೇಶದಲ್ಲಿ ಇಲ್ಲಿಯವರೆಗೆ 409 ಕರೊನಾ ಸೋಂಕು ಪ್ರಕರಣ ವರದಿಯಾಗಿದೆ. ಏಳು ಮಂದಿ ಮೃತಪಟ್ಟಿದ್ದು, 11 ಮಂದಿ ಗುಣಮುಖರಾಗಿದ್ದಾರೆ. ಸೋಂಕು ಪೀಡಿತರ ಪೈಕಿ 199 ಮಂದಿ ದೆಹಲಿಯಲ್ಲಿ ತಬ್ಲಿಘಿ ಜಮಾತ್ ನಲ್ಲಿ ಭಾಗಿಯಾದವರು ಹಾಗೂ 161 ಮಂದಿ ಅವರ ಸಂಪರ್ಕಕ್ಕೆ ಬಂದವರು ಎಂದು ಮಾಹಿತಿ ನೀಡಲಾಗಿದೆ. (ಏಜೆನ್ಸೀಸ್)