ನ್ಯೂಸ್

ಕೇಂದ್ರ ಬಜೆಟ್​ 2020: ಶೀಘ್ರದಲ್ಲೇ ಹೊಸ ಶಿಕ್ಷಣ ನೀತಿ ಘೋಷಣೆಗೆ ಸರ್ಕಾರ ನಿರ್ಧಾರ; 99,300 ಕೋಟಿ ರೂಪಾಯಿ ಮೀಸಲು

ನವದೆಹಲಿ: ಕೇಂದ್ರ ಸರ್ಕಾರ ಶೀಘ್ರದಲ್ಲೇ ಹೊಸ ಶಿಕ್ಷಣ ನೀತಿಯನ್ನು ಘೋಷಣೆ ಮಾಡಲಿದೆ. ಇದಕ್ಕೆ ಸಂಬಂಧಪಟ್ಟಂತೆ ಸುಮಾರು 2 ಲಕ್ಷ ಸಲಹೆಗಳನ್ನು ಈಗಾಗಲೇ ಪಡೆದುಕೊಂಡಿದ್ದೇವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆ ವೇಳೆ ತಿಳಿಸಿದ್ದಾರೆ.

ಶೈಕ್ಷಣಿಕ ವಲಯಕ್ಕಾಗಿ 99,300 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ. ಹಾಗೇ ಮುಂದಿನ ಹಣಕಾಸು ವರ್ಷದಲ್ಲಿ ಕೌಶಲಾಭಿವೃದ್ಧಿಗೆ 3000 ಕೋಟಿ ರೂ.ನೀಡಲಾಗುವುದು ಎಂದು ಹೇಳಿದರು.

ಶೈಕ್ಷಣಿಕ ವಲಯದ ಅಭಿವೃದ್ಧಿಗಾಗಿ ಬಾಹ್ಯ ವಾಣಿಜ್ಯ ಸಾಲ ಹಾಗೂ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು. ಯುವ ಇಂಜಿನಿಯರ್​​ಗಳಿಗೆ ಇಂಟರ್ನ್‌ಶಿಪ್​​ಗೆ ಅವಕಾಶ ಮಾಡಿಕೊಡಲು ಆಯಾ ನಗರದ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯಸೂಚಿ ಸಿದ್ಧಗೊಳಿಸಲು ಸರ್ಕಾರ ಯೋಜನೆ ಹಾಕಿಕೊಂಡಿದೆ ಎಂದರು.

ರಾಷ್ಟ್ರೀಯ ಪೊಲೀಸ್​ ವಿಶ್ವವಿದ್ಯಾಲಯ, ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಪ್ರಸ್ತಾಪ ಇದೆ. ಹಾಗೇ ಅಗ್ರ 100ರಲ್ಲಿ ಸ್ಥಾನ ಪಡೆದ ಶಿಕ್ಷಣ ಸಂಸ್ಥೆಗಳಿಂದ ಪದವಿ ಹಂತದ ಪೂರ್ಣ ಪ್ರಮಾಣದ ಶಿಕ್ಷಣ ಒದಗಿಸಲೂ ಯೋಜನೆ ರೂಪಿಸಲಾಗುತ್ತಿದೆ. ಪ್ರತಿ ಜಿಲ್ಲೆಗಳ ಆಸ್ಪತ್ರೆಗಳೊಂದಿಗೆ ಖಾಸಗಿ-ಸರ್ಕಾರಿ ಸಹಭಾಗಿತ್ವದಲ್ಲಿ (ಪಿಪಿಪಿ ಮಾಡೆಲ್​)ವೈದ್ಯಕೀಯ ಕಾಲೇಜುಗಳನ್ನು ಹೊಂದಿಸಲೂ ಸರ್ಕಾರ ಯೋಚನೆ ಮಾಡುತ್ತಿದೆ. ಇದರಿಂದ ವೈದ್ಯರ ಕೊರತೆಯನ್ನೂ ನಿಭಾಯಿಸಬಹುದು ಎಂದು ಹೇಳಿದರು.

ಶಿಕ್ಷಕರು, ನರ್ಸ್​ಗಳು, ಪ್ಯಾರಾ ಮೆಡಿಕಲ್​ ಸಿಬ್ಬಂದಿಗೆ ವಿಶೇಷ ಬ್ರಿಜ್​ ಕೋರ್ಸ್​ಗಳನ್ನು ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು. ಹಾಗೇ ಸ್ವಚ್ಛಭಾರತ್​ ಆಂದೋಲನದ ಕಾರ್ಯಕ್ರಮಗಳಿಗೆ 12,300 ಕೋಟಿ ರೂ.ಹಂಚಿಕೆ ಮಾಡಲಾಗುವುದು. ಮನೆಗಳಿಗೆ ಕೊಳಾಯಿ ನೀರು ಸರಬರಾಜು ಮಾಡಲು 3.6ಲಕ್ಷ ಕೋಟಿ ರೂ.ಮೀಸಲಿಡಲು ಯೋಜನೆ ರಚಿಸಲಾಗುತ್ತಿದೆ ಎಂದರು. (ಪಿಟಿಐ)