ನ್ಯೂಸ್

ರಾಜ್ಯದಲ್ಲಿ ‘ಆರ್ಥಿಕ ತುರ್ತು ಪರಿಸ್ಥಿತಿ’ಗೆ ಸರ್ಕಾರ ಚಿಂತನೆ: ಛಲವಾದಿ ಆಪಾದನೆ

ಬೆಂಗಳೂರು: ಆದಾಯ ಕ್ರೋಡೀಕರಣ ಕುಸಿತ, ಅಭಿವೃದ್ಧಿ ಕುಂಠಿತ, ಹೆಚ್ಚುತ್ತಿರುವ ವೆಚ್ಚಗಳನ್ನು ಸರಿದೂಗಿಸಲು ‘ಆರ್ಥಿಕ ತುರ್ತು ಪರಿಸ್ಥಿತಿ’ ಘೋಷಿಸಲು ರಾಜ್ಯ ಸರ್ಕಾರ ಆಲೋಚಿಸಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೌಕರರ ಸಂಬಳ, ಬದ್ಧತಾ ವೆಚ್ಚಗಳನ್ನು ನಿರ್ವಹಿಸಲು ಲಭ್ಯ ಆದಾಯ ಸರಿಹೋಗುತ್ತದೆ. ವಿವಿಧ ಯೋಜನೆಗೆ ಹಣ ಹೊಂದಿಸಲು ಹೆಣಗಾಡುತ್ತಿದ್ದು, ಸಾಲದ ಮೇಲೆ ಅವಲಂಬಿಸಿದೆ.

ಸಿಎಂ ಹಿಂಜರಿಕೆ

ಆರ್ಥಿಕ ತುರ್ತು ಪರಿಸ್ಥಿತಿ ಮೂಲಕ ಬರಿದಾದ ಬೊಕ್ಕಸಕ್ಕೆ ಅಷ್ಟಿಷ್ಟು ಆದಾಯ ಹರಿದು ಬರುವಂತೆ ನೋಡಿಕೊಳ್ಳುವುದು ಸಿಎಂ ಸಿದ್ದರಾಮಯ್ಯ ಚಿಂತನೆಯಾಗಿದೆ. ಆದರೆ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಬಂತೆಂದು ಈ ಆಲೋಚನೆ ಅದುಮಿಟ್ಟರು.

ಬೆಳಗಾವಿ ವಿಧಾನ ಮಂಡಲದ ಅಧಿವೇಶನದ ದಿನಗಳು ಸಮೀಪಿಸುತ್ತಿವೆ. ಆರ್ಥಿಕ ಪರಿಸ್ಥಿತಿ ತುರ್ತು ಜಾರಿಗೊಳಿಸಿದರೆ ಪ್ರತಿಪಕ್ಷಗಳ ದಾಳಿಗೆ ಪಕ್ಕಾಗಬೇಕಾಗುತ್ತದೆ ಎಂದು ಮೀನಮೇಷ ಎಣಿಸುತ್ತಿದ್ದಾರೆ.

ಆರ್ಥಿಕ ತುರ್ತು ಪರಿಸ್ಥಿತಿ ಎಂದರೆ, ವಿವಿಧ ತೆರಿಗೆ, ಶುಲ್ಕ ಹಾಗೂ ರಾಜಧನ ದರ ಹೆಚ್ಚಳ, ವಿವಿಧ ಯೋಜನೆಗಳಿಗೆ ಒದಗಿಸಿದ ಅನುದಾನ ಕಡಿತ, ಮರು ಪರಿಶೀಲನೆ ಮುಂತಾದವುಗಳಿಗೆ ಅವಕಾಶ ಮಾಡಿಕೊಳ್ಳಲಿದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

ದೇಶಕ್ಕೆ ಸುಳ್ಳು ಹೇಳಿದ ಕಾಂಗ್ರೆಸ್

ಸುಳ್ಳು, ಅಪಪ್ರಚಾರವೇ ಕಾಂಗ್ರೆಸ್ ಪಕ್ಷದ ಮೂಲ ದ್ರವ್ಯವಾಗಿದೆ. ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಕರ್ನಾಟಕವೇ ಪ್ರಧಾನ ವಿಷಯವಸ್ತುವಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವುದು ಐದು ಗ್ಯಾರಂಟಿಗಳು. ಅದರಲ್ಲೂ ಕೆಲವು ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಲು ವಿಲವಾಗಿದೆ.

ಆದರೆ ಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ಮುದ್ರಣ ಮಾಧ್ಯಮಗಳಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ನುಡಿದಂತೆ ನಡೆದಿದ್ದೇವೆ ಎಂದು ಜಾಹೀರಾತು ಕೊಟ್ಟು ಪ್ರಚಾರ ಮಾಡಿದೆ. ಕಾಂಗ್ರೆಸ್ ಪಕ್ಷ ನೀಡಿರುವ ಈ ಪ್ರಕಟಣೆ ಪ್ರಕಾರ ಕರ್ನಾಟಕದಲ್ಲಿ 10 ಗ್ಯಾರಂಟಿಗಳನ್ನು ಜಾರಿಗೆ ತರಲಾಗಿದೆ ಎಂದು ಹಸಿ ಸುಳ್ಳು ಹೇಳಿದೆ. ಬ್ರ್ಯಾಂಡ್ ಬೆಂಗಳೂರು, ಕೂಸಿನ ಮನೆ, ಕೆಕೆಆರ್‌ಡಿಬಿಗೆ ಅನುದಾನ, ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ ಅನುದಾನ, ಆರೋಗ್ಯ ಕ್ಷೇತ್ರದ ಕಾರ್ಯಕ್ರಮಗಳನ್ನು ಗ್ಯಾರಂಟಿ ಯೋಜನೆಗಳಿಗೆ ಸೇರಿಸಿದೆ ಎಂದರು.

ಹಿಮಾಚಲ ಪ್ರದೇಶದ ಬಿಜೆಪಿ ಅಧ್ಯಕ್ಷ, ಕರ್ನಾಟಕದ ಬಿಜೆಪಿ ನಾಯಕರೆಲ್ಲ ಸೇರಿ ಎರಡೂ ರಾಜ್ಯಗಳ ಜನರಿಗೆ ಕಾಂಗ್ರೆಸ್‌ನ ಹಸಿಸುಳ್ಳು, ಕರ್ನಾಟಕದಲ್ಲಿ ಹೇಗೆ ವಿಲವಾಗಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಆಮಿಷವೊಡ್ಡಿದವರು ಯಾರು ?

ಕಾಂಗ್ರೆಸ್ ಶಾಸಕರಿಗೆ ಆಮಿಷವೊಡ್ಡಿದವರು ಯಾರು ? ಎಂಬುದನ್ನು ಸಿಎಂ ಸಿದ್ದರಾಮಯ್ಯ ಬಹಿರಂಗಪಡಿಸಬೇಕು. ಹೀಗೆ ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವುದು ಸಾಧ್ಯವಿಲ್ಲ. ಪಾಪದ ಕೊಡ ತುಂಬಿರುವ ಕಾರಣ ಕಾಂಗ್ರೆಸ್ ಸರ್ಕಾರ ಯಾವತ್ತು ಬೇಕಾದರೂ ಬೀಳಬಹುದು ಎಂದರು.

ವಕ್ಫ್ ಸಮಸ್ಯೆ ಮತ್ತಷ್ಟು ಉಲ್ಬಣವಾಗುತ್ತಿದ್ದು, ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ರೈತರ ಮೇಲೆ ಲಾಠಿ ಚಾರ್ಜ್ ಮಾಡಿರುವುದು ಸರಿಯಲ್ಲ. ಜನರು ರೋಷಾಗ್ನಿಯಿಂದ ಮೇಲೆರಗುವ ಸಂದರ್ಭ ಬಂದಿದೆ ಎಂದು ಛಲವಾದಿ ನಾರಾಯಣಸ್ವಾಮಿ ಎಚ್ಚರಿಸಿದರು.