ನವದೆಹಲಿ: ಗುರು ತೇಗ್ ಬಹಾದೂರ್ ಅವರ 400ನೇ ಜಯಂತಿ ಆಚರಣೆಯನ್ನು ಯೋಜನಾಬದ್ಧವಾಗಿ ನೆರವೇರಿಸುವುದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ಸರ್ಕಾರ ರಚಿಸಿದೆ. ಈ ಸಮಿತಿಯಲ್ಲಿ 70 ಸದಸ್ಯರಿದ್ದು, ಕಾರ್ಯಕ್ರಮದ ರೂಪುರೇಷೆ, ಆಯೋಜನೆ ಮಾಡುವ ನಿಟ್ಟಿನಲ್ಲಿ ಸಕ್ರಿಯವಾಗಿರಲಿದೆ. ಕಾರ್ಯಕ್ರಮದ ನೀತಿ, ನಿಯಮ, ಯೋಜನೆ, ಉಸ್ತುವಾರಿ, ದಿನಾಂಕ ನಿಗದಿ ಮುಂತಾದ ಕಾರ್ಯಕ್ರಮಗಳೂ ಸೇರಿ ಒಟ್ಟಾರೆ ವ್ಯವಸ್ಥೆಯನ್ನು ನಿರ್ವಹಿಸುವ ದೃಷ್ಟಿಯಿಂದ ಈ ಉನ್ನತ ಸಮಿತಿ ಗಮನಹರಿಸಲಿದೆ. ಈ ಸಮಿತಿಯಲ್ಲಿ ಅನೇಕ ನಾಯಕರಿದ್ದು, ಕಾರ್ಯಕ್ರಮವನ್ನು ಸಂದರ್ಭೋಚಿತವಾಗಿ ಯಶಸ್ವಿಯಾಗಿ ನೆರವೇರಿಸಲು ಸರ್ಕಾರ ಸಜ್ಜಾಗಿದೆ.
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಲೋಕ ಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಷಾ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ಹರ್ದೀಪ್ ಸಿಂಗ್ ಪುರಿ, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್, ಹರಿಯಾಣ, ಬಿಹಾರ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ಮಹಾರಾಷ್ಟ್ರ, ಉತ್ತರಾಖಂಡ, ಹಿಮಾಚಲ ಪ್ರದೇಶ, ಒಡಿಶಾ ಮತ್ತು ರಾಜಸ್ಥಾನಗಳ ಮುಖ್ಯಮಂತ್ರಿಗಳು ಈ ಸಮಿತಿಯ ಸದಸ್ಯರು.
ಇವರಷ್ಟೇ ಅಲ್ಲ, ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ಅಖಾಲಿ ದಳದ ಪ್ರಕಾಶ್ ಸಿಂಗ್ ಬಾದಲ್, ಸುಖ್ಬೀರ್ ಸಿಂಗ್ ಬಾದಲ್, ಎಸ್ಜಿಪಿಸಿ ಪ್ರೆಸಿಡೆಂಟ್ ಗೋವಿಂಧ್ ಸಿಂಗ್ ಲೊಂಗೊವಾಲ್, ನಿವೃತ್ತ ಸೇನಾಧಿಕಾರಿಗಳಾದ ಜೆ.ಜೆ.ಸಿಂಗ್, ಬೀರೇಂದರ್ ಸಿಂಗ್ ಧನೋವಾ, ಕ್ರೀಡಾ ತಾರೆಗಳಾದ ಮಿಲ್ಖಾ ಸಿಂಗ್, ಹರ್ಭಜನ್ ಸಿಂಗ್ ಇತರೆ ಸದಸ್ಯರು. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಈ ಸಮಿತಿಯ ಸದಸ್ಯ ಕಾರ್ಯದರ್ಶಿ ಆಗಿದ್ದಾರೆ. (ಏಜೆನ್ಸೀಸ್)