ನ್ಯೂಸ್

ಕುಡುಕರ ಅಡ್ಡೆಯಾದ ಸರ್ಕಾರಿ ಶಾಲೆ ಆವರಣ

ಗಂಗಾಧರ ಬಿ ವಿ

* ನಿತ್ಯ ಕಿರಿಕಿರಿ ಅನು‘ವಿಸುತ್ತಿರುವ ವಿದ್ಯಾರ್ಥಿಗಳು, ಶಿಕ್ಷಕರು

* ಬಾಟಲಿ ಆಯುವುದೇ ನಿತ್ಯದ ಕಾಯಕ

ಚೇತನ್ ಚಕ್ಕೆರೆ ಬಿಡದಿ

ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಪಾಲಕರೇ ಜಾಸ್ತಿ, ಹೀಗಿರುವಾಗ ಇಲ್ಲೊಂದು ಶಾಲೆಗೆ ಸಾರ್ವಜನಿಕರೇ ಕಂಟಕವಾಗಿದ್ದಾರೆ. ನಿತ್ಯ ಸಂಜೆ ಮಬ್ಬುಗತ್ತಲು ಆವರಿಸುತ್ತಿದ್ದಂತೆ ಶಾಲೆ ಆವರಣ ಕುಡುಕರ ಮೋಜು ಮಸ್ತಿಯ ತಾಣವಾಗಿ ಮಾರ್ಪಡುತ್ತಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರತಿದಿನ ಕಿರಿಕಿರಿ ಅನುಭವಿಸುವಂತಾಗಿದೆ.

ಹೌದು.. ಪಟ್ಟಣದ ಹೃದಯ ‘ಭಾಗದ ಎಂ.ಜಿ.ರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಸ್ಥಿತಿ ಇದು. ಇಲ್ಲಿ 1ನೇ ತರಗತಿಯಿಂದ ಪಿಯುಸಿವರೆಗೂ ಮಕ್ಕಳು ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೂ ಮಕ್ಕಳ ಆಟ, ಪಾಠದಲ್ಲಿ ತಲ್ಲೀನವಾಗುವ ಈ ಶಾಲಾ ಆವರಣ ಸಂಜೆ ಆಗುತ್ತಿದ್ದಂತೆ ಕುಡುಕರ ಅಡ್ಡೆಯಾಗಿ ಮಾರ್ಪಡುತ್ತಿದೆ.

ಬೇಸತ್ತ ಶಿಕ್ಷಕರು:

ಕುಡಿದು ಎಸೆದ ಬಾಟಲಿಗಳನ್ನು ತೆಗೆದು ಹೊರಹಾಕುವುದೇ ಪ್ರತಿನಿತ್ಯ ಶಿಕ್ಷಕರಿಗೆ ಕಾಯಕವಾಗಿದೆ. ಇದು ಒಂದು ದಿನದ ಗೋಳಲ್ಲ. ಪ್ರತಿನಿತ್ಯವು ಇದೇ ಪರಿಸ್ಥಿತಿಯಿಂದಾಗಿ ಶಿಕ್ಷಕರು ಬೇಸತ್ತಿದ್ದಾರೆ. ಈ ಪುಂಡರ ಕಾಟದಿಂದ ಸ್ಥಳೀಯ ನಿವಾಸಿಗಳು, ಪಾಲಕರು ಮತ್ತು ಶಿಕ್ಷಕರು ರೋಸಿ ಹೋಗಿದ್ದಾರೆ.

ಪುಂಡರಿಂದ ಶಾಲಾ ಆವರಣ ಪ್ರವೇಶ

ಶಾಲೆಯ ಸುತ್ತಲು ಕಾಂಪೌಂಡ್ ನಿರ್ಮಿಸಲಾಗಿದೆ. ಆದರೆ, ಗೇಟ್ ಅಳವಡಿಕೆ ಮಾಡಿಲ್ಲ. ಹಾಗಾಗಿ ಯಾವುದೇ ಭಯವಿಲ್ಲದೆ ಪುಂಡರು ಶಾಲಾ ಆವರಣ ಪ್ರವೇಶಿಸುತ್ತಾರೆ. ಪುಂಡರ ಹಾವಳಿಗೆ ಬೇಸತ್ತು ಪೊಲೀಸರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಜ್ಞಾನ ದೇಗುಲ ಕುಡುಕರ ಅಡ್ಡೆಯಾಗಿರುವುದು ಅತ್ಯಂತ ಶೋಚನೀಯ ಎಂದು ಸ್ಥಳೀಯ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ಮನೆಗಳಿಗಾಗಿ ಶಾಲೆಯಲ್ಲಿ ದಾರಿ

ಶಾಲೆಯ ಹಿಂಭಾಗದಲ್ಲಿ 10-15 ಮನೆಗಳಿದ್ದು, ಅಲ್ಲಿಯ ನಿವಾಸಿಗಳು ಓಡಾಟಕ್ಕೆ ಇದೇ ಶಾಲಾ ಜಾಗವನ್ನು ರಸ್ತೆ ಮಾಡಿಕೊಂಡಿದ್ದಾರೆ. ಅಲ್ಲಿನ ಮನೆಗಳಿಗೆ ಹೋಗಲು ಬೇರೆ ಕಡೆಯಿಂದ ರಸ್ತೆ ಇದ್ದರೂ ಅಲ್ಲಿನ ಮಂದಿ ಇದೇ ಶಾಲಾ ಆವರಣದಲ್ಲೇ ಸಂಚಾರ ಮಾಡುತ್ತಾರೆ. ಅವರ ಒಡಾಟಕ್ಕೆಂದೆ ಶಾಲಾ ಹಿಂಭಾಗದಲ್ಲಿ ಕಾಂಪೌಂಡ್, ಮುಂದೆ ಗೇಟ್ ಹಾಕದೆ ಹಾಗೆ ಬಿಡಲಾಗಿದೆ.

ನಮ್ಮ ಶಾಲೆಗೆ ಎರಡು ಕಡೆ ಕಾಂಪೌಂಡ್ ಇಲ್ಲದ ಕಾರಣ ಸಾಕಷ್ಟು ಸಮಸ್ಯೆ ಉಂಟಾಗುತ್ತಿವೆ. ಶಾಲೆ ಮುಗಿದು ನಾವು ಹೊರ ಹೋಗುತ್ತಿದಂತೆ ಶಾಲಾ ಆವರಣ ಕುಡುಕರ ಅಡ್ಡೆಯಾಗಿ ಮಾರ್ಪಡುತ್ತದೆ. ಕಾಂಪೌಂಡ್ ಇಲ್ಲದ ಕಾರಣ ಭಯವಿಲ್ಲದೆ ಪುಂಡರು ಆವರಣದಲ್ಲಿ ಮದ್ಯ ಸೇವಿಸಿ ಗಾಜಿನ ಬಾಟಲ್ ಒಡೆಯುತ್ತಾರೆ. ಬೆಳಗ್ಗೆ ಬಂದು ಅವೆಲ್ಲವನ್ನು ಸ್ವಚ್ಛ ಮಾಡಬೇಕಾಗಿದೆ. ಹಾಗಾಗಿ ಕೂಡಲೇ ಶಾಲೆಯ ಹಿಂದೆ ಹಾಗೂ ಮುಂದೆ ಕಾಂಪೌಂಡ್ ನಿರ್ಮಾಣ ಮಾಡಿಕೊಡಬೇಕಿದೆ.ಗುರುಮೂರ್ತಿ, ಶಾಲಾ ಮುಖ್ಯ ಶಿಕ್ಷಕ

--

ಪಟ್ಟಣದ ಎಂಜಿ ರಸ್ತೆಯಲ್ಲಿರುವ ಸರ್ಕಾರಿ ಶಾಲಾ ಆವರಣದಲ್ಲಿ ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಶಾಲಾ ಶಿಕ್ಷಕರು ಗಮನಕ್ಕೆ ತಂದಿದ್ದಾರೆ. ಈ ಶಾಲೆ ಪಕ್ಕದಲ್ಲೇ ಕಾಲೇಜು ಇದೆ. ಹಾಗಾಗಿ ಶಾಲೆಗೆ ಬೇರೆ ಕಾಂಪೌಂಡ್ ಹಾಗೂ ಕಾಲೇಜಿಗೆ ಬೇರೆ ಗೇಟ್ ಅಳವಡಿಕೆ ಮಾಡಲು ಚಿಂತನೆ ಮಾಡಲಾಗಿದೆ. ಈ ಕೆಲಸಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕೈಜೋಡಿಸಬೇಕು.ಹರಿಪ್ರಸಾದ್, ಪುರಸಭಾ ಅಧ್ಯಕ್ಷ ಬಿಡದಿ