ನ್ಯೂಸ್

ಸುಳ್ಳು ಸುದ್ದಿಗಳಿಗೆ ಲಗಾಮು, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮುಲಾಮು

ಬೆಂಗಳೂರು: ಸುಳ್ಳು ಸುದ್ದಿಗಳ ಕಡಿವಾಣಕ್ಕೆ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಸರ್ಕಾರ ಬಂದ ಲಾಗಾಯ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸುಳ್ಳು ಸುದ್ದಿ ನಿಯಂತ್ರಣ ಮಾಡುವುದಾಗಿ ನೀಡಿದ ಭರವಸೆಯ ಹಿನ್ನೆಲೆಯಲ್ಲಿ ಸರ್ಕಾರ ದಾಪುಗಾಲು ಇಟ್ಟಿದೆ.

ಈ ನಿಯಂತ್ರಣ ಕ್ರಮಕ್ಕೆ ಸರ್ಕಾರ ಯಾವುದೇ ಹೊಸ ಕಾಯ್ದೆ ತರುವುದಾಗಲಿ, ಕಾಯ್ದೆ ತಿದ್ದುಪಡಿಯನ್ನಾಗಲಿ ಮಾಡದೆ ಈಗಿರುವ ಕಾಯ್ದೆ ಬಳಸಿಕೊಂಡೇ ಸುಳ್ಳು ಸುದ್ದಿ ತಡೆಗೆ ಕೈಹಾಕಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮಾಧ್ಯಮ ಸ್ವಾತಂತ್ರ್ಯಕ್ಕೆ ಯಾವುದೇ ರೀತಿಯ ಧಕ್ಕೆ ತರದಂತೆ ಈ ಪ್ರಯತ್ನ ನಡೆಯಲಿದೆ. ದೇಶದಲ್ಲೇ ವಿನೂತನ ಪ್ರಯೋಗ ಇದಾಗಿದೆ.

ವಿಧಾನಸೌಧದಲ್ಲಿ ಸುಳ್ಳು ಸುದ್ದಿ ಪತ್ತೆಯ ವಿಧಾನದ ಕುರಿತು ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಇತ್ತೀಚಿನ ಕೆಲವು ಸುಳ್ಳು ಸುದ್ದಿಗಳ ದೃಷ್ಟಾಂತಗಳನ್ನು ಕೊಟ್ಟು ಸಮಾಜದ ಸಾಮರಸ್ಯ ಹಾಳು ಮಾಡುವ ಸ್ವಾಸ್ಥ್ಯ ಕೆಡಿಸುವ ಸುದ್ದಿಗಳು ಹೇಗೆ ಪ್ರಸಾರವಾಗುತ್ತಿವೆ? ಅವುಗಳಿಗೆ ಕಡಿವಾಣ ಹೇಗೆ ಹಾಕಬಹುದು ಎಂಬ ಮಾಹಿತಿಯನ್ನು ನೀಡಿದರು.

ಜನರಿಗೆ ಸತ್ಯ ಯಾವುದು ಸುಳ್ಳು ಸುದ್ದಿ ಯಾವುದು ಎಂಬ ಮಾಹಿತಿ ನೀಡುವ ಉದ್ದೇಶದಿಂದ ಈ ಪ್ರಯತ್ನ ನಡೆದಿದೆಯೇ ವಿನಃ ಯಾವುದೇ ರಾಜಕೀಯ ದ್ವೇಷ ಅಥವಾ ಮಾಧ್ಯಮಗಳ ಧ್ವನಿಯನ್ನು ಅಡಗಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಜಾಪ್ರಭುತ್ವದಲ್ಲಿ ಚುನಾವಣೆ ಮೂಲಕ ಸರ್ಕಾರ ಆಯ್ಕೆಯಾಗುತ್ತವೆ. ಆದರೆ ಇತ್ತೀಚಿಗೆ ಕೆಲವು ಪಕ್ಷ ಹಾಗೂ ಸಂಸ್ಥೆಗಳು ಸರ್ಕಾರದ ಬಗ್ಗೆ ಸತ್ಯಕ್ಕೆ ದೂರವಾದ ವಿಚಾರಗಳನ್ನು ಮುಂದಿಟ್ಟು ಅಪಪ್ರಚಾರ ಮಾಡುತ್ತಿವೆ. ಇದಕ್ಕೆ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಳ್ಳುತ್ತಿವೆ ಎಂದು ಹೇಳಿದರು.

ಸುಳ್ಳು ಸುದ್ದಿಯನ್ನು ಪತ್ತೆ ಹಚ್ಚಿದಾಗ ಅದರ ಮೂಲವನ್ನು ಸಾರ್ವಜನಿಕವಾಗಿ ತಿಳಿಸುತ್ತೇವೆ. ಯಾವುದಾದರೂ ಸುದ್ದಿಗೆ ಮೂಲ ಇಲ್ಲದಿದ್ದರೆ ಅದನ್ನು ತಿಳಿಸುತ್ತೇವೆ. ಸುಳ್ಳು ಸುದ್ದಿ ಪತ್ತೆ ಮಾಡಲು ಓವರ್‌ಸೈಟ್ ಕಮಿಟಿ ರಚನೆ ಮಾಡಲು ಉದ್ದೇಶಿಸಲಾಗಿದೆ. ಇದರಲ್ಲಿ ಐಟಿ, ಬಿಟಿ ಇಲಾಖೆಯ ಮುಖ್ಯಸ್ಥರು, ಹಿರಿಯ ಪೊಲೀಸ್ ಅಧಿಕಾರಿ, ವಾರ್ತಾ ಇಲಾಖೆಯ ಪ್ರತಿನಿಧಿಗಳು, ಕೆಐಟಿಎಸ್ ವ್ಯವಸ್ಥಾಸಪ ನಿರ್ದೇಶಕರು, ಐಐಎಸ್ಸಿ ಡೀನ್, ಹೆಚ್ಚುವರಿ ಅಡ್ವೊಕೇಟ್ ಜನರಲ್, ಸೈಬರ್ ಸುರಕ್ಷತಾ ಕೇಂದ್ರದ ಮುಖ್ಯಸ್ಥರು ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳು ಇರಲಿದ್ದಾರೆ ಎಂದು ತಿಳಿಸಿದರು.

ಓವರ್‌ಸೈಟ್ ಕಮಿಟಿಯು ನೀಡುವ ವರದಿ, ಅಭಿಪ್ರಾಯದಂತೆ ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇಲ್ಲಿ ಯಾರನ್ನೂ ಗುರಿಯಾಗಿಸುತ್ತಿಲ್ಲ. ನಮ್ಮ ವಿರುದ್ಧ ಆರೋಪ ಮಾಡುತ್ತಿರುವ ಬಿಜೆಪಿಯವರು ತಮ್ಮ ಕಚೇರಿಯಲ್ಲಿರುವ ಒಂದು ವಿಭಾಗವನ್ನು ಮುಚ್ಚಿದರೆ ಸಾಕು, ಸುಳ್ಳು ಸುದ್ದಿ ಸೃಷ್ಟಿಯಾಗುವ ಪ್ರಮಾಣ ಕಡಿಮೆಯಾಗಿ ಬಿಡುತ್ತದೆ ಎಂದು ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟರು.
ಸುಳ್ಳು ಸುದ್ದಿ ಪತ್ತೆ ಪ್ರಯತ್ನಕ್ಕೆ ಸ್ಪಷ್ಟ ಚೌಕಟ್ಟು ಸಿಗಬೇಕಿದೆ. ಅದಕ್ಕಾಗಿ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಹಂತ ಹಂತವಾಗಿ ಈ ನಿಟ್ಟಿನಲ್ಲಿ ಪ್ರಯತ್ನ ಆಗಲಿವೆ. ಕೃತಕ ಬುದ್ಧಿಮತ್ತೆ, ತಾಂತ್ರಿಕ ಬಲವರ್ಧನೆ, ಸಾರ್ವಜನಿಕರು ಹಾಗೂ ಪರಿಣಿತರ ಸಲಹೆ ಪಡೆದು ಸ್ಪಷ್ಟ ಚೌಕಟ್ಟನ್ನು ರೂಪಿಸುತ್ತೇವೆ ಎಂದು ಹೇಳಿದರು.
ರಾಜಕೀಯ ಸುದ್ದಿಗಳನ್ನು ಈ ಚೌಕಟ್ಟಿನಲ್ಲಿ ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸರ್ಕಾರದ ಕಾರ್ಯಕ್ರಮಗಳಲ್ಲಿ ನಡೆದ ಅವ್ಯವಹಾರ ಏನಾದರೂ ಪ್ರಕಟಗೊಂಡರೆ ಅವುಗಳನ್ನು ತನಿಖೆ ಮಾಡಲಾಗುತ್ತದೆಯೇ ಹೊರತು, ವ್ಯಕ್ತಿಗತವಾಗಿ ಪರಿಶೀಲನೆ ಮಾಡುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಪಪಡಿಸಿದರು.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ, ಭಾರತೀಯ ಚುನಾವಣಾ ಆಯೋಗದ ಆಯುಕ್ತರು ಹಾಗೂ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲೇಬೇಕಿದೆ ಎಂದು ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.

ಭಾರತದಲ್ಲಿ 60 ಕೋಟಿ ಜನ ಸಕ್ರಿಯ ಇಂಟರ್‌ನೆಟ್ ಬಳಕೆದಾರರಿದ್ದಾರೆ(2023 ಜನವರಿ ವೇಳೆಗೆ). ಅದರಲ್ಲಿ ಪ್ರಮುಖವಾಗಿ ವಾಟ್ಸಪ್ ಬಳಕೆದಾರರು 54 ಕೋಟಿ, ಇನ್‌ಸ್ಟಾಗ್ರಾಂ ಬಳಕೆದಾರರು 52 ಕೋಟಿ, ಫೇಸ್‌ಬುಕ್ ಮೆಸೆಂಜರ್‌ನ 35 ಕೋಟಿ ಇದ್ದಾರೆ. ಪ್ರತಿದಿನ ಸಾಮಾಜಿಕ ಜಾಲತಾಣಗಳನ್ನು ಒಬ್ಬ ವ್ಯಕ್ತಿ ಸರಾಸರಿ 2.36 ಗಂಟೆ ವೀಕ್ಷಿಸುತ್ತಾನೆ. ಇದು ಮಾಹಿತಿ ಪಡೆಯಲು ಹಾಗೂ ಹರಡಲು ಮಹತ್ವದ ವೇದಿಕೆಯಾಗಿದೆ. ಇಂತಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುವಂತಹ ಸುದ್ದಿಗಳು, ಮಾಹಿತಿಗಳ ಕುರಿತು ಸರ್ಕಾರ ಹಾಗೂ ಸರ್ಕಾರಿ ಸಂಸ್ಥೆಗಳು ಪರಿಶೀಲಿಸಬೇಕು. ನಾಗರಿಕರಿಗೆ ಯಾವುದು ಸುಳ್ಳು ಸುದ್ದಿ, ಯಾವುದು ಸತ್ಯ, ಯಾವುದು ಉದ್ದೇಶಪೂರ್ವಕವಾಗಿ ದಾರಿ ತಪ್ಪಿಸಲು ಹರಡುತ್ತಿರುವ ಸುದ್ದಿ ಎಂಬ ಮಾಹಿತಿ ನೀಡುವ ಕೆಲಸವನ್ನು ಮಾಡಬೇಕಿದೆ. ಆ ದೃಷ್ಟಿಯಿಂದ ಸರ್ಕಾರ ಈ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಸುಳ್ಳು ಸುದ್ದಿಗಳ ಬಗ್ಗೆ ಸಾರ್ವಜನಿಕರು ನೀಡುವಂತಹ ದೂರು ಹಾಗೂ ಸರ್ಕಾರ ರಚಿಸುವ ಓವರ್ ಸೈಟ್ ಕಮಿಟಿಗಳು ಪರಿಗಣಿಸುವ ವಿಷಯಗಳನ್ನು ಪರಿಶೀಲನೆ ಮಾಡುತ್ತೇವೆ. ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚುವಂತಹ ಹಲವಾರು ಸಂಸ್ಥೆಗಳಿವೆ. ಅವರು ನಮ್ಮೊಂದಿಗೆ ಕೈ ಜೋಡಿಸುವಂತೆ ಕರೆ ನೀಡುತ್ತೇವೆ. ಅವುಗಳನ್ನು ನಾವು ಎಂಪ್ಯಾನಲ್ ಮಾಡಿಕೊಳ್ಳುತ್ತೇವೆ. ಸಮಾಜದಲ್ಲಿ ದ್ವೇಷದ ಮನೋಭಾವನೆ ಬೆಳೆಯಲು ಸುಳ್ಳು ಸುದ್ದಿಗಳು ಕಾರಣ ಎಂದು ಶೇ.78ರಷ್ಟು ಮಂದಿ ಹೇಳಿದ್ದಾರೆ. ಅದೇ ರೀತಿ, ಶೇ.88ರಷ್ಟು ಯುವಕರು ಇದನ್ನು ಒಪ್ಪಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.


ಬೇರೆ ದೇಶಗಳಲ್ಲಿ ಏನಿದೆ?

ಕೆನಡಾ, ಡೆನ್ಮಾರ್ಕ್, ಸ್ವೀಡನ್, ಸೌತ್ ಕೊರಿಯ ಮತ್ತಿತರ ದೇಶಗಳಲ್ಲಿ ಟಾಸ್ಕ್ ೆರ್ಸ್ ಸಮಿತಿಗಳಿವೆ. ಬೆಲ್ಜಿಯಂ, ಇಟಲಿಯಲ್ಲಿ ವೇದಿಕೆಗಳಿವೆ. ನೆದರ್ ಲ್ಯಾಂಡ್ ಮತ್ತಿತರ ಕಡೆಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆದಿವೆ.


ಸರ್ಕಾರದ ವಿರುದ್ಧ ಸುಳ್ಳು ಸುದ್ದಿಗಳನ್ನು ಸೃಷ್ಟಿಸುವ, ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ, ಉದ್ದೇಶ ಪೂರ್ವಕವಾಗಿ ಆತಂಕ ಸೃಷ್ಟಿಸುವಂತಹ ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆಯೇ ವಿನಃ ಯಾವುದೇ ರಾಜಕೀಯ ದ್ವೇಷ ಅಥವಾ ಮಾಧ್ಯಮಗಳ ಧ್ವನಿಯನ್ನು ಅಡಗಿಸುವ ಉದ್ದೇಶವನ್ನು ಹೊಂದಿಲ್ಲ.
-ಪ್ರಿಯಾಂಕ್ ಖರ್ಗೆ, ಐಟಿ,ಬಿಟಿ ಸಚಿವ.
-----------------------------