ನ್ಯೂಸ್

ಅತಿಥಿ ಶಿಕ್ಷಕರ ನೇಮಕಕ್ಕೆ ಸರ್ಕಾರ ಹಸಿರು ನಿಶಾನೆ


ಮೈಸೂರು:
ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಶೈಕ್ಷಣಿಕ ವರ್ಷದ ಆರಂಭದಲ್ಲೇ ಅತಿಥಿ ಶಿಕ್ಷಕರ ನೇಮಕಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದ್ದು, 1,292 ಅಭ್ಯರ್ಥಿಗಳು ಶಿಕ್ಷಕರ ಬಳಗ ಸೇರಿಕೊಳ್ಳಲಿದ್ದಾರೆ.

ಶಾಲಾ ಶಿಕ್ಷಣ ಇಲಾಖೆಯು ಈ ವರ್ಷ 900 ಪ್ರಾಥಮಿಕ ಶಾಲೆ ಹಾಗೂ 290 ಪ್ರೌಢಶಾಲೆ ಅತಿಥಿ ಶಿಕ್ಷಕರಿಗಾಗಿ ಬೇಡಿಕೆ ಇಟ್ಟಿತ್ತು. ಅದಕ್ಕೆ ಪ್ರತಿಯಾಗಿ 1,001 ಪ್ರಾಥಮಿಕ ಶಾಲೆ ಹಾಗೂ 291 ಪ್ರೌಢಶಾಲೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಅಗತ್ಯಕ್ಕಿಂತ ತುಸು ಹೆಚ್ಚೇ ಹುದ್ದೆಗಳನ್ನು ಸರ್ಕಾರ ಮಂಜೂರು ಮಾಡಿದೆ. ಮುಂದಿನ 15 ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

2023-24ನೇ ಶೈಕ್ಷಣಿಕ ಸಾಲಿನ ಅಂತ್ಯಕ್ಕೆ ಜಿಲ್ಲೆಯಲ್ಲಿ 7,207 ಪ್ರಾಥಮಿಕ ಹಾಗೂ 1,949 ಪ್ರೌಢಶಾಲೆ ಸೇರಿದಂತೆ ಒಟ್ಟು 9,152 ಸರ್ಕಾರಿ ಶಾಲಾ ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ. ಇವರಲ್ಲಿ 7,431 ಕಾಯಂ ಶಿಕ್ಷಕರಿದ್ದು, ಇನ್ನೂ 1,721 ಹುದ್ದೆಗಳು ಖಾಲಿ ಇದ್ದವು. ಕಳೆದ ಸಾಲಿನಲ್ಲಿ 1,404 ಅತಿಥಿ ಶಿಕ್ಷಕರ ಸೇವೆಯನ್ನು ಎರವಲು ಪಡೆಯಲಾಗಿತ್ತು. ಈ ನಡುವೆ ಹೊಸದಾಗಿ ನೇಮಕಗೊಂಡ ಕಾಯಂ ಶಿಕ್ಷಕರೂ ಜಿಲ್ಲೆಗೆ ಬಂದಿದ್ದರಿಂದ ಈ ವರ್ಷ ಅತಿಥಿ ಶಿಕ್ಷಕರ ನೇಮಕಾತಿ ಪ್ರಮಾಣ ಕಡಿಮೆ ಆಗಿದೆ.