ನ್ಯೂಸ್

ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲ; ಬೊಮ್ಮಾಯಿ ಟೀಕೆ

ಬೆಂಗಳೂರು: ಸ್ವಹಿತಾಸಕ್ತಿಗೆ ಬಲಿಯಾಗಿ ಅಧಿಕಾರಿಗಳನ್ನು ವರ್ಗಾಯಿಸಿದರೆ ಅವರು ಯಾರ ಮಾತು ಕೇಳುವರು ? ಅಂತಹ ಅಧಿಕಾರಿಗಳು ಕಾನೂನು ಸುವ್ಯವಸ್ಥೆ ಕಾಪಾಡುವ ಬದಲು ಬೇರೆ ಕೆಲಸಗಳಲ್ಲಿ ಮಗ್ನರಾಗಿರುತ್ತಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಮುಲಾಜಿಗೆ ಬಿದ್ದು ಅಧಿಕಾರಿಗಳನ್ನು ವರ್ಗಾಯಿಸಿದ ಅಧಿಕಾರಿಗಳಿಂದ ಮುಲಾಜಿಲ್ಲದ ಕ್ರಮ ನಿರೀಕ್ಷೆ ಅಸಾಧ್ಯ. ಇಂತಹವರು ಬೇರೆಯದೆ ಕೆಲಸಗಳಲ್ಲಿ ತೊಡಗುವುದರಿಂದ ಸಮಾಜಘಾತುಕ ಶಕ್ತಿಗಳು ಸಕ್ರಿಯವಾಗುತ್ತವೆ ಎಂದರು.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ. ಶಿವಮೊಗ್ಗ ನಗರ ಪ್ರಕ್ಷುಬ್ಧವಾಗಿದೆ. ಹಿಂದಿನ ಹಲವು ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಸೂಕ್ತ ಮುನ್ನೆಚ್ಚರಿಕೆ ಕ್ರಮವಹಿಸಿಲ್ಲ ಎಂದು ದೂರಿದರು.

ಶಿವಮೊಗ್ಗದ ಮೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇಂತಹ ಘಟನೆ ನಡೆಯುತ್ತದೆ. ಇಂತಹ ಠಾಣೆಗಳಿಗೆ ದಕ್ಷ, ಸಮರ್ಥ ಪೊಲೀಸ್ ಅಧಿಕಾರಿಗಳನ್ನು ಹಾಕಬೇಕು. ಸಮಾಜಘಾತುಕ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಬೊಮ್ಮಾಯಿ ತಿಳಿಸಿದರು.

ಜಿಲ್ಲೆಗಳಲ್ಲಿ ಕ್ಲಬ್, ರಿಯಲ್ ಎಸ್ಟೇಟ್ ಮಾಫಿಯಾಗಿ ಶುರುವಾಗಿದೆ. ಇದರಿಂದ ಕಾನೂನು ಮತ್ತು ಸುವ್ಯವಸ್ಥೆ ಕದಡುವ ಪ್ರಯತ್ನಗಳಾಗಿದ್ದು, ಸಮಗ್ರವಾಗಿ ನಿಭಾಯಿಸುವ ಅಗತ್ಯವಿದೆ. ಪೊಲೀಸರಿಗೆ ಸರ್ಕಾರ ಸ್ಪಷ್ಟ ಸಂದೇಶ ರವಾನಿಸಬೇಕು. ಯಾವುದೇ ಮುಲಾಜಿಲ್ಲದೆ ವರ್ಗಾವಣೆಗಳಾದರೆ ಶಾಂತಿ ಕದಡುವ ಘಟನೆಗಳು ನಿಲ್ಲುತ್ತವೆ ಎಂದು ಸಲಹೆ ನೀಡಿದರು.

ಗಾಂಧಿಯವರು ಮದ್ಯಮಾರಾಟ, ಪಾನವನ್ನು ವಿರೋಧಿಸಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಪ್ರತಿ ಗ್ರಾ.ಪಂ.ಗೊಂದು ಮದ್ಯದಂಗಡಿ ತೆರೆಯಲು ಹೊರಟಿದೆ. ಹೇಳಲು ಗಾಂಧಿ ಶಾಂತಿ ಮಂತ್ರ, ಮಾಡುವುದೆಲ್ಲ ಗಾಂಧಿ ವಿರೋಧಿ ಕೆಲಸಗಳು ಎಂದು ಬೊಮ್ಮಾಯಿ ಟೀಕಿಸಿದರು.