ನವದೆಹಲಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಬುಧವಾರ ರಚನೆಯಾಗಿರುವ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಸರ್ಕಾರ ಒಂದು ರೂಪಾಯಿ ದೇಣಿಗೆ ನೀಡಿದೆ. ಇದರೊಂದಿಗೆ ಟ್ರಸ್ಟ್ನ ಕೆಲಸ ಅಧಿಕೃತವಾಗಿ ಶುರುವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಪರವಾಗಿ ಕೇಂದ್ರ ಗೃಹ ಸಚಿವಾಲಯದ ಅಧೀನ ಕಾರ್ಯದರ್ಶಿ ಡಿ.ಮುರ್ಮು ಅವರು ಒಂದು ರೂಪಾಯಿಯನ್ನು ಟ್ರಸ್ಟ್ ಖಾತೆಗೆ ಬುಧವಾರ ವರ್ಗಾವಣೆ ಮಾಡಿದ್ದಾರೆ.
ಈ ಟ್ರಸ್ಟ್ ಬೇಷರತ್ತಾಗಿ ದೇಣಿಗೆ, ಅನುದಾನ, ಚಂದಾ, ನಗ, ನಗದು ಅಥವಾ ಇನ್ನಾವುದೇ ರೂಪದ ನೆರವನ್ನೂ ಯಾರಿಂದ ಬೇಕಾದರೂ ಸ್ವೀಕರಿಸಬಹುದಾಗಿದೆ. ಸದ್ಯ ಈ ಟ್ರಸ್ಟ್ ಹಿರಿಯ ನ್ಯಾಯವಾದಿ ಕೆ.ಪರಾಸರನ್ ಅವರ ಮನೆಯಿಂದಲೇ ಕಾರ್ಯಾಚರಿಸಲಿದೆ. ಭವಿಷ್ಯದಲ್ಲಿ ಇದು ಸ್ವಂತ ಕಚೇರಿಗೆ ಸ್ಥಳಾಂತರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟ್ರಸ್ಟ್ನಲ್ಲಿ ಹಿರಿಯ ನ್ಯಾಯವಾದಿ ಕೆ.ಪರಾಸರನ್, ಅಲಹಾಬಾದ್ನ ಜಗದ್ಗುರು ಶಂಕರಾಚಾರ್ಯ ಜ್ಯೋತಿಷ್ಪೀಠಾಧೀಶ್ವರ ಸ್ವಾಮಿ ವಾಸುದೇವಾನಂದ ಸರಸ್ವತೀಜಿ, ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಹರಿದ್ವಾರದ ಯುಗಪುರುಷ ಪರಮಾನಂದ ಜೀ ಮಹಾರಾಜ್, ಪುಣೆಯ ಸ್ವಾಮಿ ಗೋವಿಂದದೇವ್ ಗಿರಿಜೀ ಮಹಾರಾಜ್, ಅಯೋಧ್ಯೆಯ ವಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ, ಅಯೋಧ್ಯೆಯ ಹೋಮಿಯೋಪತಿ ಡಾಕ್ಟರ್ ಅನಿಲ್ ಮಿಶ್ರಾ, ಪಟನಾದ ಕಾಮೇಶ್ವರ ಚೌಪಾಲ್(ಎಸ್ಸಿ) , ಮಹಾಂತ ದಿನೇಂದ್ರ ದಾಸ್, ಅಯೋಧ್ಯೆಯ ನಿರ್ಮೋಹಿ ಅಖಾಡದ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ. (ಏಜೆನ್ಸೀಸ್)