ನ್ಯೂಸ್

ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ನೇಮಕ ಸಮಸ್ಯೆ ಇತ್ಯರ್ಥ: ಸರ್ಕಾರ ಕೈಗೊಂಡ ಕ್ರಮವೇನು?

ಬೆಂಗಳೂರು: ಕಾನೂನು ತೊಡಕಿನಿಂದ ಕಳೆದ ಎರಡು ತಿಂಗಳುನಿಂದ ಕಗ್ಗಂಟಾಗಿದ್ದ ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ನೇಮಕ ವಿಚಾರವನ್ನು ಸರ್ಕಾರವು ಬಗೆಹರಿಸಿದ್ದು, ಕಳೆದ ವರ್ಷ ಕಾರ್ಯನಿರ್ವಹಿಸಿದ್ದ ಅತಿಥಿ ಉಪನ್ಯಾಸಕರನ್ನೇ 2025-26ನೇ ಸಾಲಿನ ಹಾಲಿ ಸೆಮಿಸ್ಟರ್ ಪೂರ್ಣಗೊಳ್ಳುವವರೆಗೆ ಮುಂದುವರಿಸಲು ಅನುಮತಿ ನೀಡಿದೆ.

ಹೆಚ್ಚುವರಿ ಅಡ್ವೋಕೇಟ್ ಜನರಲ್ ಅವರು ನೀಡಿರುವ ಕಾನೂನು ಅಭಿಪ್ರಾಯದಂತೆ ಸೆ.9ರಂದು ನೀಡಿರುವ ಮಧ್ಯಂತರ ಆದೇಶದ ಅವಲೋಕನಗಳಿಗೆ ಒಳಪಟ್ಟಿರುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 2025-26ನೇ ಶೈಕ್ಷಣಿಕ ಸಾಲಿನ ಹಾಲಿ ಸೆಮಿಸ್ಟರ್ ಪೂರ್ಣಗೊಳ್ಳುವವರೆಗೆ 2024-25ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ ಅತಿಥಿ ಉಪನ್ಯಾಸಕರನ್ನೇ ಕಾರ್ಯಭಾರಕ್ಕೆ ಅನುಗುಣವಾಗಿ ಮುಂದುವರಿಸಲು ಅನುಮತಿ ನೀಡಲಾಗಿದೆ.

ಈ ರೀತಿ ಮುಂದುವರಿಕೆ ನಂತರವೂ ಕಾರ್ಯಭಾರವಿದ್ದಲ್ಲಿ ಅಂತಹ ಕಾರ್ಯಭಾರಕ್ಕೆ ಎದುರಾಗಿ ನ್ಯಾಯಾಲಯದ ಮಧ್ಯಂತರ ಆದೇಶದ ಅನುಸಾರ ಪ್ರಸ್ತುತ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಲ್ಲಿ ಯುಜಿಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ಅತಿಥಿ ಉಪನ್ಯಾಸಕರನ್ನಾಗಿ ಆಯ್ಕೆ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಸಂಜಯ್ ಬಿ.ಎಸ್. ಆದೇಶ ಹೊರಡಿಸಿದ್ದಾರೆ.

ಈ ಸಂಬಂಧ ಕೂಡಲೇ ಕ್ರಮ ಕೈಗೊಳ್ಳುವಂತೆ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅವರು ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಕಳೆದ ವರ್ಷ ಸುಮಾರು 10,500 ಅತಿಥಿ ಉಪನ್ಯಾಸಕರನ್ನು ಉನ್ನತ ಶಿಕ್ಷಣ ಇಲಾಖೆಯು ನೇಮಕ ಮಾಡಿಕೊಂಡಿತ್ತು. ಅವರ ಕರ್ತವ್ಯದ ಅವಧಿಯು ಇದೇ ಆಗಸ್ಟ್.2ಕ್ಕೆ ಕೊನೆಯಾಗಿತ್ತು. ಆಗಸ್ಟ್‌ನಲ್ಲಿ ಕಾಲೇಜು ಆರಂಭವಾದ ಬಳಿಕ ಎರಡು ತಿಂಗಳಿನಿಂದ ಉಪನ್ಯಾಸಕರಿಲ್ಲದೆ ತರಗತಿಗಳು ನಡೆಯದಿರುವ ಕಾರಣ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಿದ್ದರು.