ನ್ಯೂಸ್

ಭೂಸ್ವಾಧೀನಕ್ಕಾಗಿ ರೈತರ ಮನವೊಲಿಸಲು ಸರ್ಕಾರದ ಸರ್ಕಸ್ !

ಬೆಂಗಳೂರು: ಸಾಗುವಳಿ ಯೋಗ್ಯ ಜಮೀನು ಕೈಗಾರಿಕೆಗಳು ಆಪೋಷಣ ಮಾಡಿಕೊಳ್ಳುತ್ತಿರುವ ರೈತರ ಬೇಗುದಿ, ಸಂಘಟಿತ ಸಂಘರ್ಷಕ್ಕೆ ವೇದಿಕೆಯಾಗಲಿದೆ ಎಂಬ ಸುಳಿವು ಅರಿತ ಸರ್ಕಾರ, ರಾಜಿ ಸಂಧಾನದ ಸರ್ಕಸ್ ನಡೆಸಿದೆ.

ಈ ಕಸರತ್ತಿನ ಭಾಗವಾಗಿ ಖನಿಜ ಭವನದಲ್ಲಿ ಬುಧವಾರ ನಡೆದ ಸುದೀರ್ಘ ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲು ವಿಲವಾಯಿತು. ರೈತ ಮುಖಂಡರ ಮನವೊಲಿಸಲು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಪ್ರಯತ್ನಿಸಿದರೆ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಸಾಥ್ ನೀಡಿದರು.

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ವ್ಯಾಪ್ತಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು 1,777 ಎಕರೆ ಭೂಮಿಯನ್ನು ಸ್ವಾಧೀನಕ್ಕೆ ಸಭೆಯಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡರು ತೀವ್ರವಾಗಿ ವಿರೋಧಿಸಿದರು.

ರೈತ ಮುಖಂಡರಾದ ಜೆ.ಸಿ.ಬಯ್ಯರೆಡ್ಡಿ, ಚುಕ್ಕಿ ನಂಜುಂಡಸ್ವಾಮಿ, ‘ಭೂಸ್ವಾಧೀನವನ್ನು ವಿರೋಧಿಸಿ ಸುಮಾರು ಒಂದೂವರೆ ವರ್ಷದಿಂದಲೂ ಹೋರಾಟ ನಡೆಯುತ್ತಿದೆ. ಆದ್ದರಿಂದ, ಭೂಸ್ವಾಧೀನಕ್ಕೆ ಸರಕಾರ ಹೊರಡಿಸಿರುವ ಪ್ರಾಥಮಿಕ ಅಧಿಸೂಚನೆಯನ್ನು ರದ್ದು ಮಾಡಬೇಕು. ಇದರಲ್ಲಿ ಹದಿಮೂರು ಹಳ್ಳಿಗಳ ನೂರಾರು ರೈತ ಕುಟುಂಬಗಳ ಬದುಕಿನ ಪ್ರಶ್ನೆ ಅಡಗಿದೆ ಎಂದು ಪ್ರತಿಪಾದಿಸಿದರು.

25ಕ್ಕೆ ಮತ್ತೊಂದು ಸುತ್ತಿನ ಸಭೆ

ಅಹವಾಲುಗಳನ್ನು ಆಲಿಸಿದ ಎಂ.ಬಿ.ಪಾಟೀಲ, ಜಮೀನು ಸ್ವಾಧೀನಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಒಮ್ಮತಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ‘ಇನ್ನು ಮೂರ್ನಾಲ್ಕು ದಿನಗಳಲ್ಲಿ ನೀವೆಲ್ಲರೂ ಮತ್ತೊಮ್ಮೆ ಸಭೆ ಸೇರಿ, ಒಮ್ಮತಕ್ಕೆ ಬನ್ನಿ.

ಇದೇ 25ರ ನಂತರ ನಾವು ಇನ್ನೊಂದು ಸಭೆ ಏರ್ಪಡಿಸುತ್ತೇವೆ. ಅಲ್ಲಿ ನಿಮ್ಮ ಅಂತಿಮ ನಿರ್ಣಯ ತಿಳಿಸಿ. ಅಲ್ಲೂ ಬಗೆಹರಿಯದಿದ್ದರೆ ಮುಖ್ಯಮಂತ್ರಿಗಳ ಬಳಿಗೆ ಹೋಗೋಣ ಎಂಬ ಭರವಸೆ ನೀಡಿದರು.

ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆ ಕೂಡ ಅಗತ್ಯವಾಗಿದೆ. ಇದರಲ್ಲಿ ಬಂಡವಾಳ ಹೂಡಿಕೆ ಮತ್ತು ಯುವಜನರಿಗೆ ಉದ್ಯೋಗಸೃಷ್ಟಿಯ ಪ್ರಶ್ನೆ ಇದೆ. ಹಾಗೆಂದ ಮಾತ್ರಕ್ಕೆ ಸರಕಾರವು ಕೃಷಿಕರಿಗೆ ವಿರುದ್ಧವಾಗಿಲ್ಲ. ಸ್ವಾಧೀನ ಪಡಿಸಿಕೊಳ್ಳುವ ಜಮೀನಿಗೆ ಒಳ್ಳೆಯ ಪರಿಹಾರ ಕೊಡಲಾಗುವುದು.

ಈ ಪ್ರಸ್ತಾಪ ಬೇಡವೆಂದಾದರೆ ಕೆಐಎಡಿಬಿ ವತಿಯಿಂದ ಅಭಿವೃದ್ಧಿಪಡಿಸಲಾಗುವ ಬಡಾವಣೆಯಲ್ಲಿ ಪ್ರತೀ ಒಂದು ಎಕರೆ ಸ್ವಾಧೀನಕ್ಕೆ 10,800 ಚದುರ ಅಡಿ ಜಾಗವನ್ನು ಪರಿಹಾರದ ರೂಪದಲ್ಲಿ ನೀಡುವುದಕ್ಕೂ ಅವಕಾಶವಿದೆ. ಈ ಜಮೀನನ್ನು ವಾಣಿಜ್ಯೋದ್ದೇಶಕ್ಕೆ ರೈತರು ಬಸಿಕೊಳ್ಳಬಹುದು ಎಂದು ವಿವರಿಸಿದರು.

ಕೆಐಎಡಿಬಿ ಕೇವಲ ದೇವನಹಳ್ಳಿಯ ಸುತ್ತಮುತ್ತ ಮಾತ್ರ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುತ್ತಿಲ್ಲ. ಉದ್ಯಮಗಳಿಗಾಗಿ ರಾಜ್ಯದ ಎಲ್ಲ ಕಡೆಗಳಲ್ಲೂ ಈ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯದ ಎಲ್ಲ ಕಡೆಗಳಲ್ಲೂ ಕೈಗಾರಿಕೆಗಳು ನೆಲೆಯೂರುವಂತೆ ನೋಡಿಕೊಳ್ಳುವುದು ಸರಕಾರದ ಆದ್ಯತೆಗಳಲ್ಲಿ ಒಂದಾಗಿದೆ ಎಂದು ರೈತ ಮುಖಂಡರಿಗೆ ಎಂ.ಬಿ.ಪಾಟೀಲ ಮನವರಿಕೆ ಮಾಡಿಕೊಟ್ಟರು.