ನವದೆಹಲಿ: ನಗರ ಸಹಕಾರ ಬ್ಯಾಂಕುಗಳು (ಯುಸಿಬಿ) ಮತ್ತು ಮಲ್ಟಿ-ಸ್ಟೇಟ್ ಸಹಕಾರಿ ಬ್ಯಾಂಕುಗಳ ಮೇಲ್ವಿಚಾರಣೆಯನ್ನು ಇನ್ನುಮುಂದೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನೋಡಿಕೊಳ್ಳಲಿದೆ.
ಈ ಕುರಿತು ಮಾಹಿತಿ ಕೇಂದ್ರ ಸಚಿವ ಪ್ರಕಾಶ್ ಜಾವ್ದೇಕರ್ ಮಾಹಿತಿ ನೀಡಿದ್ದಾರೆ. ನಗರ ಸಹಕಾರ ಬ್ಯಾಂಕುಗಳು (ಯುಸಿಬಿಗಳು) ಮತ್ತು ಬಹು-ರಾಜ್ಯ ಸಹಕಾರ ಬ್ಯಾಂಕುಗಳಿಗೆ ಸುಗ್ರೀವಾಜ್ಞೆಯನ್ನು ಇಂದು ಕೇಂದ್ರ ಸಚಿವ ಸಂಪುಟವು ಅಂಗೀಕರಿಸಿದೆ ಎಂದು ಅವರು ಪ್ರಕಟಿಸಿದ್ದಾರೆ.
ಈ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳ ಅಂಕಿತ ಬಿದ್ದ ತಕ್ಷಣದಿಂದಲೇ ಜಾರಿಯಾಗುವಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
ಆರ್‌ಬಿಐನ ಮೇಲ್ವಿಚಾರಣೆಯಲ್ಲಿ ಸಹಕಾರಿ ಬ್ಯಾಂಕುಗಳನ್ನು ತರುವ ಸರ್ಕಾರದ ಉದ್ದೇಶವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವರ್ಷದ ಬಜೆಟ್‌ನಲ್ಲಿ ಘೋಷಿಸಿದ್ದರು. ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಮಸೂದೆಯನ್ನು ಅಂಗೀಕರಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಸರ್ಕಾರ ಸುಗ್ರೀವಾಜ್ಞೆಯನ್ನು ತಂದಿದೆ.
1,482 ನಗರ ಸಹಕಾರಿ ಬ್ಯಾಂಕುಗಳು ಮತ್ತು 58 ಬಹು-ರಾಜ್ಯ ಸಹಕಾರಿ ಬ್ಯಾಂಕುಗಳು ಸೇರಿದಂತೆ ಸರ್ಕಾರಿ ಬ್ಯಾಂಕುಗಳನ್ನು ಈಗ ಆರ್‌ಬಿಐನ ಮೇಲ್ವಿಚಾರಣಾ ಅಧಿಕಾರಕ್ಕೆ ತರಲಾಗುತ್ತಿದೆ. ನಿಗದಿತ ಬ್ಯಾಂಕುಗಳಿಗೆ ಅನ್ವಯವಾಗುವಂತೆ ಸಹಕಾರಿ ಬ್ಯಾಂಕುಗಳಿಗೆ ಆರ್‌ಬಿಐ ಅಧಿಕಾರಗಳು ಅನ್ವಯವಾಗುತ್ತವೆ.
"1,540 ಸಹಕಾರಿ ಬ್ಯಾಂಕುಗಳನ್ನು ಆರ್‌ಬಿಐ ಮೇಲ್ವಿಚಾರಣೆಗೆ ಒಳಪಡಿಸುವ ಹಿನ್ನೆಲೆಯಲ್ಲಿ ಇಲ್ಲಿನ 8.6 ಕೋಟಿಗೂ ಹೆಚ್ಚು ಠೇವಣಿದಾರರ 4.84 ಲಕ್ಷ ಕೋಟಿ ರೂ.ಗಳ ಹಣ ಸುರಕ್ಷಿತವಾಗಿ ಉಳಿಯುತ್ತದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ. (ಏಜೆನ್ಸೀಸ್)