ನ್ಯೂಸ್

ನಿವೃತ್ತ ಐಪಿಎಸ್‌ಗಳಿಗೆ ಸರ್ಕಾರ ಬಿಗ್ ಶಾಕ್

ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ಬಿಜೆಪಿ ಮುಖಂಡ, ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಸೇರಿ ನಿವೃತ್ತ ಐಪಿಎಸ್ ಅಧಿಕಾರಿಗಳ ಮನೆಗೆಲಸದ ಸಿಬ್ಬಂದಿಯನ್ನು (ಆರ್ಡರ್ಲಿ) ಹಿಂಪಡೆಯುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.

ನಿವೃತ್ತ ಡಿಜಿಪಿಗಳಾದ ರೂಪಕ್ ಕುಮಾರ್ ದತ್ತ, ಕಿಶೋರ್ ಚಂದ್ರ, ನಿವೃತ್ತ ಎಡಿಜಿಪಿಗಳಾದ ಸುನೀಲ್ ಅಗರ್‌ವಾಲ್, ಭಾಸ್ಕರ್ ರಾವ್ ಮನೆಯಲ್ಲಿ ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್‌ಆರ್‌ಪಿ) ಸಿಬ್ಬಂದಿ ಆರ್ಡರ್ಲಿಗಳಾಗಿದ್ದಾರೆ. ನಿವೃತ್ತ ಅಧಿಕಾರಿಗಳ ಮನೆಯಲ್ಲಿರುವ ಇವರ ಸೇವೆಯನ್ನು ಕೂಡಲೇ ಹಿಂಪಡೆಯುವಂತೆ ಸರ್ಕಾರ ಆದೇಶಿಸಿದೆ. ಈ ಹಿನ್ನಲೆಯಲ್ಲಿ ಕೆಎಸ್‌ಆರ್‌ಪಿ ಎಡಿಜಿಪಿಗೆ ಮುಂದಿನ ಕ್ರಮಕ್ಕೆ ಡಿಜಿಪಿ ಸೂಚಿಸಿದ್ದಾರೆ.

ಸೇವೆಯಿಂದ ನಿವೃತ್ತಿ ಹೊಂದಿದ 15 ದಿನಗೊಳಗೊಳಗೆ ತಮ್ಮಆರ್ಡರ್ಲಿಗಳನ್ನು ಇಲಾಖೆಗೆ ಮರಳಿ ಕಳುಹಿಸಬೇಕು. ಕೆಲವರು ನಿವೃತ್ತಿ ಬಳಿಕ ಸೇವೆ ಮುಂದುವರಿಸಿದ್ದಾರೆ. ವೈಯಕ್ತಿಕ ಕಾರಣ ನಿಮಿತ್ತ ಸ್ವಯಂನಿವೃತ್ತಿ ಹೊಂದಿದ ಬಳಿಕವು ಆರ್ಡರ್ಲಿ ಸೇವೆಯನ್ನು ಬೆಂಗಳೂರು ನಗರದ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪಡೆದಿರುವುದು ಟೀಕೆಗೆ ಗುರಿಯಾಗಿದೆ.

ವಿಧಾನಸಭಾ ಚುನಾವಣೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಭಾಸ್ಕರ್ ರಾವ್ ಸ್ಪರ್ಧಿಸಿ ಪರಾಜಿತರಾಗಿದ್ದರು. ಸೇವೆಯಿಂದ ನಿವೃತ್ತರಾದ ನಂತರ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿ ಆರ್.ಕೆ. ದತ್ತ ನಿವೃತ್ತರಾಗಿದ್ದಾರೆ. ಹಾಗೆಯೇ ಸಿಐಡಿ ಡಿಜಿಪಿಯಾಗಿ ನಿವೃತ್ತರಾದ ಕಿಶೋರ್‌ಚಂದ್ರ, ಪ್ರಸುತ್ತ ರಿಯಲ್‌ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (ರೇರಾ) ಅಧ್ಯಕ್ಷರಾಗಿದ್ದಾರೆ.