ನ್ಯೂಸ್

ಅಧಿಕಾರಿಗಳಿಗೆ ಗೌರ್ನರ್ ಶಾಕ್; ಬಾಕಿ ತನಿಖಾ ಶಿಫಾರಸು, ಕಳೆದ ವರ್ಷವೇ ಎಚ್ಚರಿಸಿದ್ದ ಲೋಕಾ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಅಭಿಯೋಜನಾ ಮಂಜೂರಾತಿಗೆ ಲೋಕಾಯುಕ್ತ ಸಂಸ್ಥೆಯಿಂದ ಸ್ವೀಕೃತವಾಗಿರುವ ಪ್ರಕರಣಗಳ ಸಮಗ್ರ ಮಾಹಿತಿ ಒದಗಿಸುವಂತೆ ಮುಖ್ಯಕಾರ್ಯದರ್ಶಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಸೂಚಿಸಿರುವ ವಿಚಾರ ಇದೀಗ ನೂರಾರು ಸರ್ಕಾರಿ ಅಧಿಕಾರಿ, ಸಿಬ್ಬಂದಿ ಎದೆಯಲ್ಲಿ ನಡುಕ ಹುಟ್ಟಿಸಿದೆ.

2023ರ ಮೇ 20ರಿಂದ ಈವರೆಗಿನ ವರದಿ ಕೊಡುವಂತೆ ರಾಜ್ಯಪಾಲರು ನಿರ್ದೇಶನ ನೀಡಿದ್ದಾರೆ. ಆದರೆ, ಈ ಹಿಂದಿನ ಪ್ರಕರಣಗಳ ಮಾಹಿತಿಯನ್ನು ಹೆಕ್ಕಿ ತೆಗೆದು ಅವುಗಳಿಗೆ ತಾತ್ವಿಕ ಅಂತ್ಯಕಾಣಿಸುವ ಹೊಣೆಗಾರಿಕೆ ಸರ್ಕಾರದ ಜವಾಬ್ದಾರಿ ಮೇಲಿದೆ. ಮಾಹಿತಿಗಳ ಪ್ರಕಾರ ಏಳೆಂಟು ವರ್ಷದ ಹಳೆಯ ಪ್ರಕರಣಗಳನ್ನು ಸರ್ಕಾರ ಹಾಗೆಯೇ ಇಟ್ಟಿದೆ. ಹಾಗೆಯೇ ಇಟ್ಟಿದೆ ಎನ್ನುವುದಕ್ಕಿಂತ ಲೋಕಾಯುಕ್ತದಿಂದ ಶಿಫಾರಸುಗೊಂಡ ಕಡತ ಮುನ್ನೆಲೆಗೆ ಬಾರದಂತೆ ನೋಡಿಕೊಳ್ಳುವ ಕಾರ್ಯ ಹಿಂದಿನಿಂದಲೂ ನಡೆದುಬಂದಿದೆ. ಎಷ್ಟು ಕಡತ ಬಾಕಿ ಇರಬಹುದೆಂಬ ಅಂದಾಜು ಸರ್ಕಾರದ ಬಳಿ ಇಲ್ಲ.

ಅಧಿಕಾರಿ, ಸಿಬ್ಬಂದಿ ವಿರುದ್ಧ ಭ್ರಷ್ಟಾಚಾರ ಆರೋಪ, ನಿಯಮ ಉಲ್ಲಂಘನೆ ಸೇರಿ ವಿವಿಧ ಆಯಾಮಗಳಲ್ಲಿ ದೂರುಗಳು ಬಂದ ಸಂದರ್ಭದಲ್ಲಿ ಪ್ರಾಥಮಿಕ ತನಿಖೆ ನಡೆಸುವ ಲೋಕಾಯುಕ್ತ ಪ್ರಕರಣವು ಮೇಲ್ನೋಟಕ್ಕೆ ತನಿಖೆಗೆ ಸೂಕ್ತ ಎಂದು ಕಂಡುಬಂದ ವೇಳೆ ಅಭಿಯೋಜನೆಗೆ ಸೂಕ್ತ ಎಂದು ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ. ಹೀಗೆ ಶಿಫಾರಸುಗೊಂಡ ಕಡತ ಸಂಪುಟ ಸಭೆ ಮುಂದೆ ಬರಬೇಕಾಗುತ್ತದೆ. ಈ ಪ್ರಕ್ರಿಯೆ ನಡೆಯದಂತೆ ನೋಡಿಕೊಳ್ಳುವ ಬುದ್ಧಿವಂತಿಕೆ ಸರ್ಕಾರಿ ವ್ಯವಸ್ಥೆಯಲ್ಲಿದೆ.

ಒಂದೊಮ್ಮೆ ಲೋಕಾಯುಕ್ತದ ಶಿಫಾರಸನ್ನು ಸಂಪುಟ ಸಭೆ ಒಪ್ಪಿ ಚಾರ್ಜ್ ಶೀಟ್ ಪ್ರಕ್ರಿಯೆ ನಡೆದು ಆರೋಪ ಕಂಡು ಬಂದಲ್ಲಿ ಬಡ್ತಿಗೆ ಅವಕಾಶ ಸಿಗುವುದಿಲ್ಲ. ಅಥವಾ ಕೆಲವೊಂದು ಸಂದರ್ಭದಲ್ಲಿ ಸ್ಥಳ ನಿಯುಕ್ತಿಗೂ ಅವಕಾಶ ಸಿಗದೇ ಹೋಗಬಹುದು. ಇದೇ ಕಾರಣಕ್ಕೆ ಲೋಕಾಯುಕ್ತ ಶಿಫಾರಸನ್ನು ಸಂಪುಟದ ಮುಂದೆ ಬಾರದಂತೆ ತಡೆಯಲು ವಿವಿಧ ತಂತ್ರಗಾರಿಕೆ ರೂಪಿಸುವ ಅನೇಕ ಉದಾಹರಣೆ ಇದೆ. ಲೋಕಾಯುಕ್ತಕ್ಕೆ ತಮ್ಮ ಇಲಾಖೆಗಳಿಂದ ಮರು ವಿಮರ್ಶೆಗೆ ಪತ್ರ ಬರೆಸುವುದು, ಆ ಮೂಲಕ ಪ್ರಕ್ರಿಯೆ ತಡ ಆಗುವಂತೆ ಮಾಡುವುದು, ಸಚಿವಾಲಯದಲ್ಲೇ ವಿವಿಧ ಹಂತದಲ್ಲಿ ಕಡತ ಇರುವಂತೆ ಮಾಡುವುದು, ಇನ್ನೂ ಹೆಚ್ಚೆಂದರೆ ಜಾತಿ, ಹಣದ ಪ್ರಭಾವ ಬಳಸಿ ತನಿಖೆ ಮುಂದುವರಿಯದಂತೆ ನೋಡಿಕೊಳ್ಳುವುದು ತೆರೆಮರೆಯಲ್ಲಿ ನಡೆದಿದ್ದೂ ಇದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಕಾರಿಗಳೇ ತಿಳಿಸುತ್ತಾರೆ.

ಎಸಿಬಿ ಇದ್ದ ಸಂದರ್ಭದಲ್ಲಿ ನಡೆದ ರೈಡ್​ಗಳಿಗೆ ಸಂಬಂಧಿಸಿದಂತೆ ಅನೇಕ ಪ್ರಕರಣಗಳು ಇನ್ನೂ ತಾತ್ವಿಕ ಅಂತ್ಯ ಕಂಡಿಲ್ಲ. ಅಧಿಕಾರಿಗಳ ಅನೌಪಚಾರಿಕ ಚರ್ಚೆ ಸಂದರ್ಭದಲ್ಲಿ ಕೇಳಿಬಂದ ಮಾತುಗಳ ಪ್ರಕಾರ 2007ರಲ್ಲಿ ಲೋಕಾಯುಕ್ತ ವರದಿಗೆ ಸರ್ಕಾರ ಒಪ್ಪಿಗೆ ಕೊಡದ ಉದಾಹರಣೆ ಇದೆ ಎಂದು ವಿವರಿಸಿದ್ದಾರೆೆ.

ಲೋಕಾಯುಕ್ತ ನ್ಯಾಯಮೂರ್ತಿ ಅಸಮಾಧಾನ: ಇದೇ ವಿಚಾರದಲ್ಲಿ ಲೋಕಾಯುಕ್ತ ಅಸಮಾಧಾನಗೊಂಡ ಬೆಳವಣಿಗೆ ಕೂಡ ನಡೆದಿದ್ದಿದೆ. ವಿಧಾನಸೌಧದಲ್ಲಿ 2023ರ ನವೆಂಬರ್​ನಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವೊಂದಲ್ಲಿ ಪಾಲ್ಗೊಂಡಿದ್ದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್, ಅಂಕಿ-ಸಂಖ್ಯೆ ಸಹಿತ ಸರ್ಕಾರಕ್ಕೆ ಕನ್ನಡಿ ಹಿಡಿದಿದ್ದರು. ಇಲಾಖಾ ವಿಚಾರಣೆಯಲ್ಲಿ ಆರೋಪ ಸಾಬೀತಾದ ಕುರಿತು ಕಳುಹಿಸಿರುವ 1074 ಪ್ರಕರಣಗಳು ದೀರ್ಘ ಕಾಲದಿಂದ ಸರ್ಕಾರದ ಬಳಿ ಬಾಕಿ ಇದೆ. ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿ ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ಸರ್ಕಾರಕ್ಕೆ ಸೂಕ್ತ ಶಿಫಾರಸುಗಳೊಂದಿಗೆ ವರದಿ ಸಲ್ಲಿಸಲಾಗಿದೆ. ಆದರೆ, ಈ ವಿಚಾರದಲ್ಲಿ ಸೀಮಿತ ಫಲಿತಾಂಶ ಮಾತ್ರ ಬಂದಿದೆ ಎಂದು ಸರ್ಕಾರದ ಗಮನ ಸೆಳೆದಿದ್ದರು. ಬಳಿಕ ತಡಬಡಾಯಿಸಿ ಎಚ್ಚೆತ್ತಿದ್ದ ಸರ್ಕಾರ ಈ ಕಡತಗಳ ಮಾಹಿತಿ ಸಂಗ್ರಹಕ್ಕೆ ಗಮನ ಕೊಟ್ಟಿತ್ತು. ನಂತರ ಈ ವಿಚಾರ ಹಾಗೇ ಬದಿಗೆ ಸರಿಯಿತು.

ಸಮಗ್ರ ಮಾಹಿತಿ ಸಿದ್ಧ?: ರಾಜ್ಯಪಾಲರ ನಿರ್ದೇಶನದ ಪ್ರಕಾರ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ತುರ್ತಾಗಿ ಮಾಹಿತಿ ನೀಡುವಂತೆ ಮುಖ್ಯಕಾರ್ಯದರ್ಶಿ ಪತ್ರ ಬರೆದು, ಒಂದು ವಾರ ಕಾಲಾವಕಾಶ ನೀಡಿದ್ದರು. ಈ ಅವಧಿ ಮಂಗಳವಾರ ಅಂತ್ಯವಾಗಿದೆ. ಮುಂದಿನ 2-3 ದಿನಗಳಲ್ಲಿ ಸಮಗ್ರ ಮಾಹಿತಿ ಸಿದ್ಧವಾಗಲಿದೆ. ನಂತರ ರಾಜ್ಯಪಾಲರಿಗೆ ವರದಿ ಕಳಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2023ರ ಮೇ 20ರ ನಂತರ ಪ್ರಕರಣದ ಮಾಹಿತಿ ಸಂಗ್ರಹ ಈಗ ನಡೆಯುತ್ತಾದರೂ ಸಹಜವಾಗಿ ಈ ಅವಧಿಗಿಂತ ಹಿಂದಿನ ಅವಧಿಯ ಪ್ರಕರಣ ಬಗ್ಗೆ ಇಲಾಖೆ ಮುಖ್ಯಸ್ಥರು ಗಮನಿಸಬೇಕಾಗುತ್ತದೆ. ಇದೇ ಕಾರಣಕ್ಕೆ ರಾಜ್ಯಪಾಲರ ಪತ್ರ ಈ ಸಂದರ್ಭದಲ್ಲಿ ಮಹತ್ವಪಡೆದುಕೊಂಡಿದೆ ಎಂದು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ಅಧಿಕಾರಿ ತಿಳಿಸುತ್ತಾರೆ.