ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನಗಳ ಹಂಚಿಕೆ ಪ್ರಕರಣದ ರಾಜಕೀಯ ಸಂಘರ್ಷವು ಗವರ್ನಮೆಂಟ್ ವರ್ಸಸ್ ಗವರ್ನರ್ ತಿರುವು ಪಡೆಯುವ ಲಕ್ಷಣಗಳು ಗೋಚರಿಸಿವೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರ ಧೋರಣೆ ಕುರಿತು ವಿಸõತ ಚರ್ಚೆ ಸಾಧ್ಯತೆಗಳ ಸುಳಿವು ಸಿಕ್ಕಿದೆ.
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಒಪ್ಪಿಗೆ ನೀಡಿದ್ದಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ರಾಜ್ಯಪಾಲರ ಹುದ್ದೆ ಸಂವಿಧಾನಾತ್ಮಕವಾಗಿದೆ. ಅವರ ಬಗ್ಗೆ ಗೌರವವಿದೆಯಾದರೂ ತಾರತಮ್ಯ ಧೋರಣೆ ಅನುಸರಿಸಬಾರದು. ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ
ಅನುಮತಿ ರಾಜಕೀಯ ಪ್ರೇರಿತ ನಿರ್ಧಾರವೆಂದು ಟೀಕಿಸಲಾಗುತ್ತಿದೆ. ಸಿದ್ದರಾಮಯ್ಯ ಆದಿಯಾಗಿ ಮಂತ್ರಿ ಮಂಡಲದ ಎಲ್ಲ ಸದಸ್ಯರು, ಕಾಂಗ್ರೆಸ್ ನಾಯಕರು ಇದೆ ಮಾತುಗಳನ್ನು ಪುನರುಚ್ಚರಿಸಿದ್ದಾರೆ. ರಾಜ್ಯಪಾಲರ ರಾಜಕೀಯ ಪ್ರೇರಿತ ನಿರ್ಧಾರಕ್ಕೆ ಪ್ರತ್ಯುತ್ತರವಾಗಿ ರಾಜಕೀಯ ನಿರ್ಧಾರ ಕೈಗೊಳ್ಳಬೇಕೆಂಬುದು ಬಹಳಷ್ಟು ಸಚಿವರ ಒತ್ತಾಸೆಯಾಗಿದೆ.
ಇದೇ ಕಾರಣಕ್ಕೆ ಸಂವಿಧಾನದತ್ತವಾಗಿ ತನಗಿರುವ ಅಧಿಕಾರವನ್ನು ಸಚಿವ ಸಂಪುಟದಲ್ಲಿ ಚಲಾಯಿಸಿ, ಪ್ರಾಸಿಕ್ಯೂಷನ್ಗೆ ಬಾಕಿ ಪ್ರಕರಣಗಳ ಕುರಿತು ರಾಜ್ಯಪಾಲರಿಗೆ ಪತ್ರ ಬರೆದು ವಿಳಂಬಕ್ಕೆ ಕಾರಣ ಕೇಳಲು ಸರ್ಕಾರ ಮುಂದಾಗಿದೆ. ಖಾಸಗಿ ದೂರು ಸಲ್ಲಿಕೆಯಾದ ಕೆಲವೇ ಗಂಟೆಗಳಲ್ಲಿ ಮುಖ್ಯಮಂತ್ರಿಗೆ ಸಮಜಾಯಿಷಿ ಕೇಳಿ ನೋಟಿಸ್ ನೀಡಲಾಯಿತು. ದಾಖಲೆಗಳ ಸಹಿತ ವಿವರವಾದ ಉತ್ತರ ಕೊಟ್ಟು, ಸಿಎಂಗೆ ನೀಡಿದ ಕಾರಣ ಕೇಳುವ ನೋಟಿಸ್ ಹಿಂಪಡೆಯಲು ಮನವಿ ಮಾಡಲಾಯಿತು. ಆದರೂ ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದೆ. ಇದೇ ನಿಲುವು ಬಾಕಿ ಪ್ರಕರಣಗಳಿಗೆ ಅನ್ವಯಿಸಲಿಲ್ಲವೇಕೆ?, ತಾರತಮ್ಯ ಅಲ್ಲವೆ? ಎನ್ನುವುದು ಸಚಿವರನ್ನು ಕಾಡುತ್ತಿರುವ ಪ್ರಶ್ನೆಗಳಿವು. ಸಚಿವ ಸಂಪುಟ ಸಭೆಯಲ್ಲೂ ಇವೇ ಪ್ರಶ್ನೆಗಳು ಪ್ರಸ್ತಾಪವಾಗಲಿವೆ. ರಾಜಭವನವನ್ನು ಕಾನೂನಾತ್ಮಕ ಇಕ್ಕಟ್ಟಿಗೆ ಸಿಲುಕಿಸಲು ಬೇಕಾದ ವ್ಯೂಹ ರಚಿಸಿ, ರಾಜ್ಯಪಾಲರಿಗೆ ಪತ್ರ ಬರೆಯುವಂತಹ ನಿರ್ಧಾರ ಕೈಗೊಂಡರೂ ಅಚ್ಚರಿಯೇನಿಲ್ಲ ಎಂದು ಮೂಲಗಳು ತಿಳಿಸಿವೆ.
ಒಪ್ಪಿಗೆಗೆ ಕಾದಿರುವ ಪ್ರಕರಣಗಳು: ಮಾಜಿ ಸಿಎಂ, ಹಾಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಜನಾರ್ದನರೆಡ್ಡಿ ಸೇರಿ ಒಟ್ಟು ಆರು ಜನರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿಗೆ ಮನವಿ ಮಾಡಲಾಗಿದೆ. ಈ ಪೈಕಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧದ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಉಳಿದ ಪ್ರಕರಣಗಳಲ್ಲಿ ರಾಜಭವನ ಕೇಳಿದ್ದ ಸ್ಪಷ್ಟೀಕರಣ, ಹೆಚ್ಚುವರಿ ಮಾಹಿತಿಯನ್ನು ಸರ್ಕಾರ ಒದಗಿಸಿ ವರ್ಷವೇ ಕಳೆದಿದ್ದರೂ ಪ್ರಾಸಿಕ್ಯೂಷನ್ಗೆ ಸಮ್ಮತಿಸಿಲ್ಲ. ಆದರೆ ಸಿದ್ದರಾಮಯ್ಯ ವಿರುದ್ಧ ತರಾತುರಿಯಲ್ಲಿ ರಾಜ್ಯಪಾಲರು ಸಮ್ಮತಿಸಿದ್ದಾರೆ. ವಿಳಂಬಕ್ಕೆ ಕಾರಣ ತಿಳಿದುಕೊಳ್ಳಬೇಕಾಗಿದ್ದು, ಮಂತ್ರಿ ಮಂಡಲಕ್ಕಿರುವ ಈ ಅಧಿಕಾರ ಬಳಸಿಕೊಳ್ಳಲೇಬೇಕು ಎಂಬುದು ಸಚಿವರ ಅಭಿಪ್ರಾಯವಾಗಿದೆ ಎಂದು ತಿಳಿದಿದೆ.
ಕಾನೂನು ಸಮರಕ್ಕೆ ಬಲ: ರಾಜ್ಯಪಾಲರಿಗೆ ಅವರು ಕಾರ್ಯನಿರ್ವಹಣೆಗೆ ಸಹಾಯ, ಸಲಹೆ ನೀಡಲು, ವಿವೇಚನೆ ಬಳಕೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಮುಖ್ಯಮಂತ್ರಿಯನ್ನು ಹೊಂದಿರುವ ಮಂತ್ರಿ ಮಂಡಲಕ್ಕೆ ಅಧಿಕಾರವಿದೆ ಎಂದು ಸಂವಿಧಾನದ 163ನೇ ಪರಿಚ್ಛೇದ ಹೇಳುತ್ತದೆ. ರಾಜಭವನದ ವಿರುದ್ಧ ರಾಜಕೀಯ ಅಸ್ತ್ರ, ದ್ವೇಷ ಹೀಗೆ ಏನು ಬೇಕಾದರೂ ಪ್ರತಿಪಕ್ಷಗಳು ಅರ್ಥೈಸಿ ಟೀಕೆ-ಟಿಪ್ಪಣಿ ಮಾಡಿದರೂ ಪರವಾಗಿಲ್ಲ. ವಿಳಂಬಕ್ಕೆ ಕಾರಣವೇನು ? ಎಂದು ಪತ್ರ ಬರೆದು ಕೇಳಬೇಕು. ರಾಜ್ಯಪಾಲರಿಂದ ಉತ್ತರ ಪಡೆದುಕೊಂಡರೆ ಮುಂದಿನ ಕಾನೂನು ಸಮರಕ್ಕೆ ಬಲ ತುಂಬುವ ಮಾಹಿತಿ ಲಭಿಸಲಿದೆ ಎನ್ನುವುದು ಹಲವು ಸಚಿವರ ಲೆಕ್ಕಾಚಾರವೆಂದು ಗೊತ್ತಾಗಿದೆ.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾವುದೇ ಭೀತಿಯಿಲ್ಲ. ಮಂತ್ರಿ ಮಂಡಲ ಅವರ ಬೆನ್ನಿಗೆ ನಿಲ್ಲಬೇಕಾದ ಅಗತ್ಯವೂ ಇಲ್ಲ. ಅಂತಹ ಭಯ-ಭೀತಿಯಿದ್ದರೆ ತನಿಖೆಗೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚಿಸುತ್ತಿದ್ದರೆ? | ಎಚ್.ಕೆ.ಪಾಟೀಲ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕುಮಾರಸ್ವಾಮಿ ಪ್ರಕರಣದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯಪಾಲರು, ತನ್ನ ವಿರುದ್ಧ ಮಾತ್ರ ಯಾವುದೇ ತನಿಖಾ ವರದಿಯನ್ನು ಆಧರಿಸದೇ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದು ತಾರತಮ್ಯವಲ್ಲವೆ? | ಸಿದ್ದರಾಮಯ್ಯ ಸಿಎಂ ಸಿಎಂ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆಗೆ ವೈಯಕ್ತಿಕವಾಗಿ ಟಿ.ಜೆ.ಅಬ್ರಹಾಂ ಸಲ್ಲಿಸಿದ್ದ ರಾಜ್ಯಪಾಲರು ಪರಿಗಣಿಸಿದ್ದಾರೆ. ಹಾಗಿದ್ದ ಮೇಲೆ ಲೋಕಾಯುಕ್ತ ಸಂಸ್ಥೆ ಕೇಳುವ ಅಭಿಯೋಜನೆಗೆ ಏಕೆ ಅನುಮತಿ ನೀಡುವುದಿಲ್ಲ ಎಂಬ ಪ್ರಶ್ನೆ ಉದ್ಭವಿಸುತ್ತದೆ. | ಡಾ.ಜಿ.ಪರಮೇಶ್ವರ್ ಗೃಹ ಸಚಿವ