ನ್ಯೂಸ್

ಕೃಷ್ಣಗಿರಿ ದೇವಿ ಭಾಗವತ ಮಹಾಕಥಾದಲ್ಲಿ ರಾಜ್ಯಪಾಲರು ಭಾಗಿ

ಕೃಷ್ಣಗಿರಿ: ನವರಾತ್ರಿಯು ಶಕ್ತಿಯ ಭಕ್ತಿ ಮತ್ತು ಆರಾಧನೆಯ ದೊಡ್ಡ ಹಬ್ಬವಾಗಿದೆ. ದುರ್ಗಾ ದೇವಿಯ ಒಂಬತ್ತು ರೂಪಗಳು ನಮಗೆ ಶಕ್ತಿ, ಧೈರ್ಯ ಮತ್ತು ಭಕ್ತಿಯಿಂದ ಪ್ರೇರೇಪಿಸುತ್ತವೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.
ತಮಿಳುನಾಡಿನ ಕೃಷ್ಣಗಿರಿಯಲ್ಲಿ ಆಯೋಜಿಸಿದ್ದ ನವರಾತ್ರಿ ಉತ್ಸವ-2024 ದೇವಿ ಭಾಗವತ ಮಹಾಕಥಾ ಕಾರ್ಯಕ್ರಮದಲ್ಲಿ ಭಾಗಾವಹಿಸಿ ಅವರು ಮಾತಾನಾಡಿದರು.
ಧಾರ್ಮಿಕ ನಂಬಿಕೆಯ ಈ ಹಬ್ಬವು ಇಂದ್ರಿಯಗಳ ಸಂಯಮ, ಆಧ್ಯಾತ್ಮಿಕ ಶಕ್ತಿಯ ಸಂಚಯನ ಮತ್ತು ಆತ್ಮಶುದ್ಧೀಕರಣ, ಆತ್ಮ ವಿಶ್ವಾಸ ಮತ್ತು ಹೊಸ ಶಕ್ತಿಯನ್ನು ಪಡೆಯುವ ಮಹಾನ್ ಹಬ್ಬವಾಗಿದೆ.  ನವರಾತ್ರಿಯ ಆರಂಭ ಮತ್ತು ಮಹತ್ವವನ್ನು ಪುರಾಣಗಳಲ್ಲಿ ವಿವರವಾಗಿ ವಿವರಿಸಲಾಗಿದೆ. ದುರ್ಗಾ ಸಪ್ತಶತಿ, ದೇವಿ ಭಾಗವತ ಮತ್ತು ಮಾರ್ಕಂಡೇಯ ಪುರಾಣದಂತಹ ಗ್ರಂಥಗಳಲ್ಲಿ ದುರ್ಗಾ ದೇವಿಯ ಆರಾಧನೆ ಮತ್ತು ಅವಳ ಶಕ್ತಿಯ ವಿವಿಧ ರೂಪಗಳ ಉಲ್ಲೇಖವಾಗಿರುವುದು ಕಾಣಬಹುದು ಎಂದು ತಿಳಿಸಿದರು.
ನವರಾತ್ರಿಯ ಸಮಯದಲ್ಲಿ, ದುರ್ಗಾ ದೇವಿಯು ಭೂಮಿಗೆ ಇಳಿದು ತನ್ನ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಎಂದು ನಂಬಲಾಗಿದೆ. ಈ ಮಹಾ ಹಬ್ಬವು ವಿಶೇಷ ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ಹಬ್ಬವು ಭಾರತೀಯ ಸಂಸ್ಕೃತಿಯ ವೈವಿಧ್ಯತೆ ಮತ್ತು ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ಪ್ರತಿಯೊಂದು ಪ್ರದೇಶವು ಅದನ್ನು ವಿಭಿನ್ನ ರೀತಿಯಲ್ಲಿ ಆಚರಿಸುವ ಸಂಪ್ರದಾಯವನ್ನು ಹೊಂದಿದೆ ಎಂದು ಹೇಳಿದರು.
ವಿಶ್ವವಿಖ್ಯಾತ ಶ್ರೀ ಪಾರ್ಶ್ವ ಪದ್ಮಾವತಿ ಶಕ್ತಿಪೀಠ ತೀರ್ಥ ಧಾಮಕ್ಕೆ ದುರ್ಗಾ ಮಾತೆಯ ಆರಾಧನೆಯ ಮಹಾರಥೋತ್ಸವವನ್ನು ಆಚರಿಸಲು ದೇಶ ಮತ್ತು ಪ್ರಪಂಚದಾದ್ಯಂತದ ಜನರು ಆಗಮಿಸಿರುವುದು ಸಂತೋಷದ ವಿಷಯ.
ಕಾರ್ಯಕ್ರಮದಲ್ಲಿ ಕೃಷ್ಣಗಿರಿ ಶಕ್ತಿ ಪೀಠಾಧೀಶ್ವರರಾದ ಶ್ರೀ ವಸಂತ ವಿಜಯ್ ಮಹಾರಾಜ್, ಶ್ರೀ ಓಂ ಜಿ ಆಚಾರ್ಯ ಮುಂತಾದ ಗಣ್ಯರು ಹಾಜರಿದ್ದರು.