ನ್ಯೂಸ್

ಇನ್ನು ಹೆಣ್ಮಕ್ಕಳಿಗೂ ರಾತ್ರಿಪಾಳಿ ಅವಕಾಶ!

Bellari - Heera Nayak

| ಅವಿನಾಶ ಮೂಡಂಬಿಕಾನ ಬೆಂಗಳೂರು

ವಾಣಿಜ್ಯ ಮಳಿಗೆ, ಅಂಗಡಿಗಳಲ್ಲಿ ಇನ್ಮುಂದೆ ಮಹಿಳೆಯರಿಗೂ ರಾತ್ರಿಪಾಳಿ ಕೆಲಸ ಮಾಡಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಿಂದಿನಂತೆ ಅನಿವಾರ್ಯತೆ ಮೇರೆಗಷ್ಟೇ ಕಾರ್ವಿುಕ ಇಲಾಖೆ ಅನುಮತಿ ಪಡೆದು ಮಹಿಳೆಯರನ್ನು ರಾತ್ರಿಪಾಳಿಗೆ ನಿಯೋಜಿಸಬೇಕೆಂಬ ನಿಯಮ ರದ್ದಾಗಲಿದೆ. ಆದರೆ ಮಹಿಳೆಯರಿಗೆ ಮೂಲಸೌಕರ್ಯ ಹಾಗೂ ಭದ್ರತಾ ವ್ಯವಸ್ಥೆಯನ್ನು ಕಡ್ಡಾಯವಾಗಿ ಕಲ್ಪಿಸಬೇಕೆಂಬ ಷರತ್ತು ವಿಧಿಸಲಾಗಿದೆ. ಇದನ್ನು ಉಲ್ಲಂಘಿಸಿದರೆ ಪರವಾನಗಿ ರದ್ದುಪಡಿಸಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟ ಪಡಿಸಲಾಗಿದೆ.

ಯಾರಿಗೆ ಅನ್ವಯ?: ಇಲಾಖೆಯಲ್ಲಿ ನೋಂದಾಯಿಸಲಾದ ಅಂಗಡಿ, ವಾಣಿಜ್ಯ ಮಳಿಗೆಗಳು ಮಹಿಳೆ ಯರನ್ನು ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳಬಹುದಾಗಿದೆ.

ಗಾರ್ಮೆಂಟ್ಸ್​ನಲ್ಲಿ ಹೆಚ್ಚು: ರಾತ್ರಿಪಾಳಿಯಲ್ಲಿ ಮಹಿಳೆಯರು ಕೆಲಸ ಮಾಡುವುದಕ್ಕಿದ್ದ ನಿಷೇಧವನ್ನು 2002ರಲ್ಲಿ ಐಟಿ-ಬಿಟಿ ಕಂಪನಿಗಳು ಸಡಿಲಿಸಿ ಅನುಮತಿ ಪಡೆದುಕೊಂಡಿದ್ದವು. ಇದೀಗ ರಾಜ್ಯಾದ್ಯಂತ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ರಾತ್ರಿಪಾಳಿಯಲ್ಲಿ (ರಾತ್ರಿ 8 ರಿಂದ ಬೆಳಗ್ಗೆ 6) ಉದ್ಯೋಗ ನಿರ್ವಹಿಸಬಹುದಾಗಿದೆ. ಮಹಿಳೆಯರು ಗಾರ್ವೆಂಟ್ ಉದ್ಯಮದಲ್ಲಿ ಶೇ.60ರಷ್ಟಿದ್ದರೆ, ಜವಳಿ ಉದ್ಯಮದಲ್ಲಿ ಶೇ.50ರಷ್ಟಿದ್ದಾರೆ. ಉದ್ಯಮಶೀಲತೆ ಬೆಳವಣಿಗೆಗೂ ಇದು ಪರೋಕ್ಷವಾಗಿ ದಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸುರಕ್ಷತೆಗೆ ಒತ್ತು

ರಾತ್ರಿಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವ ಜವಾಬ್ದಾರಿಯನ್ನು ಸಂಸ್ಥೆಗಳೇ ವಹಿಸಿಕೊಳ್ಳಬೇಕಿದೆ. ಮನೆಯಿಂದ ಕೆಲಸದ ಸ್ಥಳಕ್ಕೆ ಹಾಗೂ ಕೆಲಸ ಮಾಡುವ ಕಂಪನಿಯಿಂದ ಮನೆಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಮಹಿಳಾ ಉದ್ಯೋಗಿ ತೆರಳುವ ವಾಹನಗಳ ಮಾರ್ಗವನ್ನು ಸಂಸ್ಥೆಯು ಗೊತ್ತುಪಡಿಸಿದ ಮೇಲ್ವಿಚಾರಕರು ಸೂಕ್ತ ರೀತಿಯಲ್ಲಿ ಪರಿಶೀಲಿಸಬೇಕು. ತುರ್ತು ಸಮಯದಲ್ಲಿ ಮಹಿಳಾ ಉದ್ಯೋಗಿಗಳು ಸಿಗ್ನಲ್ ನೀಡಿ ಸಂಬಂಧಪಟ್ಟವರನ್ನು ಸಂರ್ಪಸಲು ಸಾಧ್ಯವಾಗುವ ಮೊಬೈಲ್ ಆಪ್ ಅಭಿವೃದ್ಧಿಪಡಿಸಿ, ಕಾರ್ಯರೂಪಕ್ಕೆ ತರಬಹುದು. ಈ ಸಾರಿಗೆ ಸೌಲಭ್ಯವು ಟ್ರಾ್ಯಕಿಂಗ್ ಹಾಗೂ ಜಿಪಿಎಸ್ ಒಳಗೊಂಡಿರಬೇಕು. ಸಂಸ್ಥೆಯು ಪ್ರತಿಯೊಬ್ಬ ಚಾಲಕನ ಸ್ವ-ವಿವರ ಪಡೆದುಕೊಂಡು ಉದ್ಯೋಗಪೂರ್ವ ಪರಾಮರ್ಶೆ ನಡೆಸಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

ಕರೊನಾ ಪರಿಣಾಮ: ಕರೊನಾ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ಉದ್ಯೋಗಾವಕಾಶ ಹೆಚ್ಚಿಸುವುದಕ್ಕಾಗಿ ಮಹಿಳೆಯರಿಗೂ ರಾತ್ರಿಪಾಳಿಗೆ ಅನುಮತಿ ನೀಡುವಂತೆ ಸರ್ಕಾರಿ ಹಾಗೂ ಖಾಸಗಿ ವಲಯದಿಂದ ಬೇಡಿಕೆ ವ್ಯಕ್ತವಾಗಿತ್ತು.

ಮಾರ್ಗಸೂಚಿಗಳೇನು?

  • ವಿಶ್ರಾಂತಿ ಕೊಠಡಿ, ಶೌಚಗೃಹ, ವಿದ್ಯುತ್, ಔಷಧಾಲಯ ಸೌಲಭ್ಯ, ನೀರು, ಸ್ವಚ್ಛತಾ ಸೌಕರ್ಯ ಕಡ್ಡಾಯ
  • ರಾತ್ರಿಪಾಳಿಯಲ್ಲಿ ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ಕಂಪನಿಯೇ ನಿಯೋಜಿಸಬೇಕು
  • ಮಹಿಳಾ ಉದ್ಯೋಗಿಯ ಮೊಬೈಲ್ ಸಂಖ್ಯೆ, ಇಮೇಲ್, ವಿಳಾಸ ಬಹಿರಂಗಪಡಿಸಬಾರದು
  • ಮಹಿಳಾ ಉದ್ಯೋಗಿಯ ಅಭಿಮತವನ್ನು ಲಿಖಿತವಾಗಿ ಪಡೆದುಕೊಳ್ಳಬೇಕು. ಉದ್ಯೋಗ ಸರದಿ ಪ್ರಕಾರ ಇರಬೇಕು. ಸ್ವಯಂ/ಇತರ ಸಂಸ್ಥೆಗಳಿಂದ ಮಹಿಳಾ ಉದ್ಯೋಗಿಗಳು ಪಡೆದ ಶಿಶುಕೇಂದ್ರದ ವೆಚ್ಚವನ್ನು ಸಂಸ್ಥೆಯೇ ಭರಿಸಬೇಕು
  • ರಾತ್ರಿಪಾಳಿ ವಾಹನಗಳಲ್ಲಿ ಮೊದಲು ಹತ್ತಿಸಿಕೊಳ್ಳುವಾಗ, ಕೊನೆಗೆ ಇಳಿದುಕೊಳ್ಳುವಾಗ ಸಂಸ್ಥೆಯ ಭದ್ರತಾ ಸಿಬ್ಬಂದಿ ಒದಗಿಸಬೇಕು
  • ವಾಹನದಲ್ಲಿ ಮೊದಲು ಹತ್ತಿಸಿಕೊಳ್ಳದಂತೆ ಹಾಗೂ ಕೊನೆಯಲ್ಲಿ ಇಳಿಸದಂತೆ ಎಚ್ಚರಿಕೆ ವಹಿಸಬೇಕು
  • ಮಾರ್ಗದ ಸೂಚಿತ ಪಟ್ಟಿಯನ್ನು ಸಂಸ್ಥೆಯ ಮೇಲ್ವಿಚಾರಣಾ ಅಧಿಕಾರಿಗಳು ನಿರ್ಧರಿಸಬೇಕು
  • ತುರ್ತು ಸನ್ನಿವೇಶಗಳಲ್ಲಿ ಚಾಲಕರ ಅಥವಾ ಮಾರ್ಗ ಬದಲಾವಣೆ ಬಗ್ಗೆ ಉದ್ಯೋಗಿಗೆ ಮೊದಲೇ ಮಾಹಿತಿ ನೀಡಬೇಕು
  • ಸಂಸ್ಥೆಯ ವಾಹನಗಳ ಮೇಲೆ ನಿಗಾ ವಹಿಸಲು ಪ್ರತ್ಯೇಕ ನಿಯಂತ್ರಣಾ ಕೊಠಡಿ ಹೊಂದಿರಬೇಕು