ನ್ಯೂಸ್

ವಿದ್ಯುತ್ ಉತ್ಪಾದನೆ ಕುಸಿದರೂ ತಗ್ಗಿದ ಬೇಡಿಕೆಯಿಂದ ಸರ್ಕಾರ ನಿರಾಳ | Depend on Hydro and Exchange

ಬೆಂಗಳೂರು: ರಾಜ್ಯದ ಸ್ಥಾಪಿತ ಸಾಮರ್ಥ್ಯ ವಿದ್ಯುತ್ ಉತ್ಪಾದನೆಯಲ್ಲಿ ಹಠಾತ್ ಕುಸಿತವಾಗಿದ್ದು, ಗರಿಷ್ಠ ಬೇಡಿಕೆ ಪ್ರಮಾಣವೂ ಇಳಿಮುಖವಾಗಿದ್ದರಿಂದ ‘ವಿದ್ಯುತ್ ಅಭಾವ’ದ ಸಂಕಷ್ಟದಿಂದ ಸರ್ಕಾರ ಪಾರಾಗಿದೆ.

ಮಾರ್ಚ್ ಕೊನೆ, ಏಪ್ರಿಲ್ ಆರಂಭಿಕ ವಾರದಲ್ಲಿ ದೈನಂದಿನ ಗರಿಷ್ಠ ಅವಧಿ (ಪೀಕ್ ಅವರ್ ಲೋಡ್) ಯ ಬೇಡಿಕೆಯು 18 ಸಾವಿರ ಮೆಗಾ ವಾಟ್ ದಾಟಿತ್ತು. ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರೂ ಇಂಧನ ಇಲಾಖೆ ಸ್ವಲ್ಪಮಟ್ಟಿಗೆ ದಿಗಿಲುಗೊಂಡಿತ್ತು.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವಿನಿಂದ ಬೇಸಿಗೆಯಲ್ಲಿ ಬೇಡಿಕೆ 19 ಸಾವಿರ ಮೆಗಾ ವಾಟ್ ದಾಟಲಿದೆ ಎಂದು ಅಂದಾಜಿಸಿ, ವಿವಿಧ ಮೂಲಗಳಿಂದ ವಿದ್ಯುತ್ ಹೊಂದಿಸಿತ್ತು. ಜತೆಗೆ ತಾಂತ್ರಿಕ ನೆಪದಲ್ಲಿ ಅನಧಿಕೃತ ಲೋಡ್‌ಶೆಡ್ಡಿಂಗ್ ಮೂಲಕ ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿತ್ತು.

ಮಾರ್ಚ್ ಅಂತ್ಯಕ್ಕೆಲ್ಲ 18 ಸಾವಿರ ದಾಟಿದೆ ಎಂದಾದರೆ ಬೇಸಿಗೆ ಮುಗಿಯುವಷ್ಟರಲ್ಲಿ 20 ಸಾವಿರ ಮೆಗಾ ವಾಟ್ ದಾಟಲೂಬಹುದು ಎಂದು ಇಲಾಖೆ ಲೆಕ್ಕಹಾಕಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಬಿಸಿಲ ಪ್ರಖರತೆ, ತಾಪ ಹೆಚ್ಚಳವಾಗಿದ್ದರೂ ವಿದ್ಯುತ್ ಗರಿಷ್ಠ ಬೇಡಿಕೆ 15 ಸಾವಿರ ಮೆ.ವಾ.ಗೆ ಕುಸಿದಿದೆ.

ಪರ್ಯಾಯ ಮಾರ್ಗೋಪಾಯ

ಕೃಷಿ ಕ್ಷೇತ್ರದ ಬಳಕೆ ಕಡಿಮೆಯಾಗಿರುವುದು ಮೇಲ್ನೋಟದ ಕಾರಣ. ಆದರೆ ಉದ್ಯಮ ವಲಯವು ಸ್ವಯಂ ಇಲ್ಲವೇ ಖಾಸಗಿ ವಿದ್ಯುತ್ ವ್ಯವಸ್ಥೆಗೆ ಹೆಚ್ಚೆಚ್ಚು ಮೊರೆ ಹೋಗುತ್ತಿರುವುದು ಮತ್ತೊಂದು ಪ್ರಮುಖ ಕಾರಣವೆಂದು ಮೂಲಗಳು ತಿಳಿಸಿವೆ.

ಕ್ರಾಸ್ ಸಬ್ಸಿಡಿ, ನಿಗದಿತ ಶುಲ್ಕ ಹೆಚ್ಚಿಸಿದ್ದೂ ಸಾಲದೆಂಬಂತೆ ಎಸ್ಕಾಂಗಳ ನಿವೃತ್ತ ಸಿಬ್ಬಂದಿ ಮಾಸಿಕ ಪಿಂಚಣಿ ಮತ್ತು ಭತ್ಯೆ ವೆಚ್ಚದ ಭಾರವನ್ನು ಹೊರಿಸಲಾಗಿದೆ. ವಿದ್ಯುತ್ ದರ ಏರಿಕೆಯ ಹೊರೆಯು ಪರ್ಯಾಯ ಅರಸುವಂತೆ ಮಾಡಿದೆ ಎಂದು ವಾಣಿಜ್ಯೋದ್ಯಮ ವಲಯ ಹೇಳುತ್ತಿದೆ.

ಬೇಸಿಗೆ ಕಾಲದಲ್ಲಿ ಸರ್ಕಾರದ ಪಾಲಿಗೆ ಶಾಖೋತ್ಪನ್ನ ಮೂಲವು ‘ಆಪತ್ಬಾಂಧವ’. ಜತೆಗೆ ಕಲ್ಲಿದ್ದಲು ದಾಸ್ತಾನು, ಪೂರೈಕೆಗೆ ಅನುಗುಣವಾಗಿ ಉತ್ಪಾದನೆಯಲ್ಲಿ ಸ್ಥಿರತೆ, ನಿರಂತರತೆ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ.

ರಾತ್ರಿ ವೇಳೆ ಸೌರ ಮೂಲದ ವಿದ್ಯುತ್ ಲಭ್ಯವಾಗುವುದಿಲ್ಲ. ಹಗಲು ಮೋಡ ಮುಸುಕಿದರೆ ಕುಸಿತ ನಿರೀಕ್ಷಿತ. ಹಾಗೆಯೇ ಪವನ ಮೂಲದ ವಿದ್ಯುತ್‌ನಲ್ಲಿ ಏರುಪೇರು ಸಹಜವಾಗಿದ್ದು, ಶಾಖೋತ್ಪನ್ನ ಮೂಲದ ವಿದ್ಯುತ್‌ನಿಂತ ಪರಿಸ್ಥಿತಿ ನಿರ್ವಹಿಸಬಹುದಾಗಿದೆ.

ಆದರೆ ಆರ್‌ಟಿಪಿಎಸ್‌ನಲ್ಲಿ ಸಂಭವಿಸಿದ ವಿದ್ಯುತ್ ಅವಘಡದಿಂದ ನಾಲ್ಕು ಘಟಕಗಳು ವಿದ್ಯುತ್ ಉತ್ಪಾದನೆ ಸ್ಥಗಿತವಾಗಿ 880 ಮೆ.ವಾ. ಖೋತಾ ಆಗಿದೆ. ಬಿಟಿಪಿಎಸ್, ವೈಟಿಪಿಎಸ್‌ನಲ್ಲಿ ಸ್ಥಾಪಿತ ಸಾಮರ್ಥ್ಯಕ್ಕಿಂತ ತಲಾ 500 ಮೆ.ವಾ. ಕಡಿಮೆ ವಿದ್ಯುತ್ ಉತ್ಪಾದಿಸುತ್ತಿದ್ದು, ಕಲ್ಲಿದ್ದಲು ದಾಸ್ತಾನು ಕಡಿಮೆಯಿರುವುದು ಕಾರಣವೆಂದು ಮೂಲಗಳು ತಿಳಿಸಿವೆ.

ವಾರದೊಳಗೆ ವಾಪಸ್

ಆರ್‌ಟಿಪಿಎಸ್ ನಾಲ್ಕನೇ ಘಟಕ ರಿಪೇರಿಗೆ ನಾಲ್ಕು ತಿಂಗಳು ಹಿಡಿಯಿತು. ಇನ್ನೇನು ವಿದ್ಯುತ್ ಉತ್ಪಾದನೆಗೆ ಚಾಲನೆ ನೀಡಬೇಕೆನ್ನುವಷ್ಟರಲ್ಲಿ ವಿದ್ಯುಜ್ಜನಕ ಪರಿವರ್ತಕ (250 ಎಂವಿಎ)ದಲ್ಲಿ ಆಕಸ್ಮಿಕ ಬೆಂಕಿ ತಗುಲಿ 2, 3ನೇ ಘಟಕಗಳ ಕೇಬಲ್‌ಗಳು ಸುಟ್ಟು ಹೋಗಿವೆ.

ತಾಂತ್ರಿಕ ತಂಡ ಪರಿಶೀಲಿಸಿ ಒಂದೆರಡು ದಿನಗಳಲ್ಲಿ ಪ್ರಾಥಮಿಕ ವರದಿ ಸಲ್ಲಿಸಲಿದೆ. ನಂತರ ನೈಜ ಕಾರಣ ತಿಳಿಯಲು ತಾಂತ್ರಿಕ ತಜ್ಞರ ತಂಡವನ್ನು ಕಳುಹಿಸಲಾಗುತ್ತದೆ ಎಂದು ಇಂಧನ ಇಲಾಖೆ ಮೂಲಗಳು ಹೇಳಿವೆ.

ಸುಟ್ಟು ಹೋಗಿರುವ ಕೇಬಲ್‌ಗಳನ್ನು ತ್ವರಿತವಾಗಿ ಬದಲಿಸಿ ಇನ್ನೊಂದು ವಾರದೊಳಗೆ 2 ಮತ್ತು 3ನೇ ಘಟಕ ಪುನರಾರಂಭಿಸಲಾಗುವುದು. ಆದರೆ ನಾಲ್ಕನೇ ಘಟಕದ ಪುನರಾರಂಭ ಯಾವಾಗ ಎಂದು ನಿರ್ದಿಷ್ಟವಾಗಿ ಹೇಳಲಾಗದು ಎಂದಿವೆ.