ಶೃಂಗೇರಿ: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಸರ್ಕಾರ ಹೆಚ್ಚಿನ ಕಾಳಜಿ ವಹಿಸುತ್ತಿದೆ. ಶಿಕ್ಷಕರು ರಾಷ್ಟ್ರ ನಿರ್ಮಾಣದ ರೂವಾರಿಗಳು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ರಜತಮಹೋತ್ಸವ ಉದ್ಘಾಟಿಸಿ ಮಾತನಾಡಿ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವ ಕುರಿತು ಸರ್ಕಾರಕ್ಕೆ ಕಾಳಜಿ ಇದೆ. ಅತಿಥಿ ಉಪನ್ಯಾಸಕರ ವೇತನ ಹೆಚ್ಚಿಸಲು ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತೇನೆ. ವಿದ್ಯಾರ್ಥಿಗಳು ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ಮುನ್ನಡೆದು ಸಾಧನೆ ಮಾಡಬೇಕು ಎಂದರು.
ಜೆಸಿಬಿಎಂ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಸ್ವಾಮಿ ಮಾತನಾಡಿ, ಸರ್ಕಾರಿ ಶಾಲೆ-ಕಾಲೇಜುಗಳನ್ನು ಕೀಳರಿಮೆಯಿಂದ ಕಾಣಬಾರದು. ಸರ್ಕಾರಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಪ್ರಾಧ್ಯಾಪಕರು ಇದ್ದಾರೆ. ಅವರು ವಿದ್ಯಾರ್ಥಿಗಳ ಶ್ರೇಯಸ್ಸಿಗಾಗಿ ದುಡಿಯುತ್ತಿದ್ದಾರೆ ಎಂದರು.
ಪ್ರತಿಷ್ಠಿತ ಸಂಸ್ಥೆಗಳಲ್ಲಿ ಶಿಕ್ಷಣ ಅಂಕಗಳಿಗೆ ಸೀಮಿತವಾಗಿದೆ. ಅಲ್ಲಿ ಭೌತಿಕ ಶಿಕ್ಷಣ ಮಾತ್ರ ಸಿಗುತ್ತದೆ. ಆದರೆ ಸರ್ಕಾರಿ ಕಾಲೇಜುಗಳಲ್ಲಿ ಬೌದ್ಧಿಕ ಮೌಲ್ಯ ಸಿಗುತ್ತದೆ. ವಿದ್ಯಾರ್ಥಿಗಳು ವ್ಯಕ್ತಿತ್ವ ಹೇಗೆ ಬೆಳೆಸಿಕೊಳ್ಳಬೇಕು ಎಂಬ ವಿವೇಚನೆ ಅವರಲ್ಲಿ ಇರಬೇಕು. ಆತ್ಮವಿಶ್ವಾಸದಿಂದ ಮಕ್ಕಳು ಮುನ್ನಡೆದಾಗ ಮಾತ್ರ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಉಮೇಶ್ ಪೊದುವಾಳ್ ಮಾತನಾಡಿ, ಮನುಷ್ಯನ ಜೀವನ ಸಾರ್ಥಕ್ಯದ ಹಾದಿಯಲ್ಲಿ ಸಾಗಬೇಕಾದರೆ ಗುರುವಿನ ಮಾರ್ಗದರ್ಶನ ಅಗತ್ಯ. ಗುರುವಿಗೆ ಶರಣಾಗಿ ಜ್ಞಾನ ಪಡೆದರೆ ಮಾತ್ರ ಶ್ರೇಷ್ಠ ವ್ಯಕ್ತಿ ಆಗಲು ಸಾಧ್ಯ. ದೀನದಲಿತರ ಸೇವೆ ಬದುಕಿನ ಪರಮ ಧ್ಯೇಯವಾಗಬೇಕು ಎಂದರು.
ಶಾಸಕ ರಾಜೇಗೌಡ, ಗುತ್ತಿಗೆದಾರ ಋಷ್ಯಶೃಂಗ ಹೆಗಡೆ, ಕಾರ್ಯಾಧ್ಯಕ್ಷ ಉಮೇಶ್ ಪೊದುವಾಳ್, ಉಪನಿರ್ದೇಶಕ ಪುಟ್ಟಾನಾಯ್ಕಾ, ಕಲಾವಿದ ಮಂಡಗಾರು ಜನಾರ್ದನ್, ಪ್ರಾಧ್ಯಾಪಕರಾದ ಮಂಜುನಾಥ್, ಉಮೇಶ್ ಅವರನ್ನು ಗೌರವಿಸಲಾಯಿತು. ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಸಿಬ್ಬಂದಿ ದಿವಂಗತ ಚೆನ್ನಪ್ಪ ಅವರ ಕುಟುಂಬಕ್ಕೆ ಸಹಾಯಧನ ನೀಡಲಾಯಿತು. ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಯಕ್ಷಗಾನ ಹಾಗೂ ನೃತ್ಯವೈಭವ ಜನರ ಮೆಚ್ಚುಗೆ ಗಳಿಸಿತು.
ಪ್ರಾಚಾರ್ಯ ಅರುಣ್‌ಕುಮಾರ್, ಅಭಿವೃದ್ಧಿ ಸಮಿತಿ ಸದಸ್ಯರಾದ ವಿನುತಾ, ಆನಂದಸ್ವಾಮಿ, ಆಶಾ, ಗೋಪಾಲಕೃಷ್ಣ, ಸುಬ್ರಹ್ಮಣ್ಯ, ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ, ಗ್ರಾಪಂ ಮಾಜಿ ಸದಸ್ಯೆ ಸೌಭಾಗ್ಯಾ ಗೋಪಾಲನ್ ಇದ್ದರು.