ನ್ಯೂಸ್

ಸಾರ್ವಜನಿಕ ವಲಯದ ಉದ್ಯಮಗಳ ಮೇಲ್ವಿಚಾರಣೆಗೆ ಮುಂದಾದ ಸರ್ಕಾರ|Monitor

ಬೆಂಗಳೂರು: ಸಾರ್ವಜನಿಕ ವಲಯದ ಉದ್ಯಮಗಳ ಮೇಲ್ವಿಚಾರಣೆಗೆ ಆರ್ಥಿಕ ಇಲಾಖೆ ಮುಂದಾಗಿದೆ(Government moves to monitor public sector enterprises). ರಾಜ್ಯ ಸರ್ಕಾರದ ಸಾರ್ವಜನಿಕ ವಲಯದ ಅನೇಕ ಉದ್ಯಮಗಳು ನಷ್ಟದಲ್ಲಿವೆ. ಲಾಭದಲ್ಲಿರುವ ಸಂಸ್ಥೆಗಳ ನಿರ್ವಹಣೆಯೂ ತೃಪ್ತಿದಾಯವಾಗಿಲ್ಲ. ಹಾಗಾಗಿ ಈ ಉದ್ಯಮಗಳ ಮೇಲೆ ನಿಗಾ ಇಡಲು ಹಣಕಾಸು ಇಲಾಖೆ ಹಣಕಾಸು ಸಲಹೆಗಾರರನ್ನು ನೇಮಕ ಮಾಡಲಿದೆ.

ಸಾರ್ವಜನಿಕ ವಲಯದ ಉದ್ಯದಮಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಮನ್ವಯಗೊಳಿಸಲು ಹಣಕಾಸು ಇಲಾಖೆ ದೃಢ ಹೆಜ್ಜೆ ಇಟ್ಟಿದೆ. ಪಿಎಸ್‌ಯುಗಳಿಂದ ಹಣಕಾಸು ಡೇಟಾ ಸಂಗ್ರಹಿಸುವುದು, ಒಟ್ಟುಗೂಡಿಸುವುದು, ವಿಶ್ಲೇಷಿಸುವುದು, ಕಂಪನಿಗಳ ಕಾಯಿದೆ ಮತ್ತು ಹಣಕಾಸು ಇಲಾಖೆಗೆ ವಿವಿಧ ನಿರ್ದೇಶನಗಳಿಗೆ ಅನುಸರಣೆಯನ್ನು ನವೀಕರಿಸುವುದರ ಮೇಲೆ ನಿಗಾ ಇಡಲಾಗುತ್ತದೆ.

ಹಣಕಾಸು ದಾಖಲೆಗಳ ಪರಿಶೀಲನೆ

ಪಿಎಸ್‌ಯುಗಳ ಪ್ರಮುಖ ನಿರ್ಧಾರಗಳು, ಸಾಂಸ್ಥಿಕ ಬೆಳವಣಿಗೆಗಳು ಮತ್ತು ಕ್ರಿಯೆಯ ಅಂಶಗಳ ಪ್ರಗತಿಯನ್ನು ಟ್ರ್ಯಾಕ್ ಮಾಡುವುದು, ಶಾಸನಬದ್ಧ ಮತ್ತು ನಿಯಂತ್ರಕ ಅಗತ್ಯತೆಗಳ ಅನುಸರಣೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆ ಇದಾಗಿದೆ.

ಪಿಎಸ್‌ಯುಗಳ ಖಾತೆಗಳ ಲೆಕ್ಕಪರಿಶೋಧನೆ ಪರಿಶೀಲನೆ, ಹಣಕಾಸು ಹೇಳಿಕೆಗಳು, ಬ್ಯಾಲೆನ್ಸ್ ಶೀಟ್‌ಗಳು ಮತ್ತು ಇತರ ಪ್ರಮುಖ ಹಣಕಾಸು ದಾಖಲೆಗಳನ್ನು ಪರಿಶೀಲನೆ ಮಾಡಲು ಮುಂದಾಗಿದೆ.

ಕಾರ್ಯಕ್ಷಮತೆ ನಿರ್ಣಯ

ಪಿಎಸ್‌ಯುಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸುವುದು, ಹಣಕಾಸಿನ ವರದಿಗಳಲ್ಲಿ ಯಾವುದೇ ವ್ಯತ್ಯಾಸಗಳು ಅಥವಾ ಸಮಸ್ಯೆಗಳನ್ನು ಗುರುತಿಸಿ ಸರಿಪಡಿಸುವುದು ಸಮಸ್ಯೆಗಳನ್ನು ಪರಿಹರಿಸಲು ಮಾರ್ಗೋಪಾಯಗಳನ್ನು ಕಂಡು ಹಿಡಿಯುವುದು ಹಾಗೂ ಕರ್ನಾಟಕ ಸರ್ಕಾರದ ಹಣಕಾಸು ಇಲಾಖೆಗೆ ನಿಯಮಿತ ನವೀಕರಣಗಳು ಮತ್ತು ಸಮಗ್ರ ವರದಿಗಳನ್ನು ಒದಗಿಸುವ ಜವಾಬ್ದಾರಿಯನ್ನು ಹಣಕಾಸು ಸಲಹೆಗಾರರ ಹೆಗಲಿಗೆ ಹಾಕಲಾಗುತ್ತದೆ.

ಪಾರದರ್ಶಕತೆ ತರಲು ಪ್ರಯತ್ನ

ಹಣಕಾಸಿನ ಕಾರ್ಯಕ್ಷಮತೆ, ಸಂಭವನೀಯ ಅಪಾಯಗಳು, ಯಾವುದೇ ಮಹತ್ವದ ಸಾಂಸ್ಥಿಕ ಬದಲಾವಣೆಗಳನ್ನು ಯೋಜಿಸುವುದು, ಎಲ್ಲ ವರದಿ ಮತ್ತು ಸಂಬಂಧಿತ ದಾಖಲಾತಿಗಳ ಸಕಾಲಿಕ ಸಲ್ಲಿಕೆಯನ್ನು ಖಚಿತಪಡಿಸಿಕೊಳ್ಳುವುದನ್ನೂ ಹಣಕಾಸು ಸಲಹೆಗಾರರು ಮಾಡಲಿದ್ದಾರೆ. ಇದರಿಂದ ಪಿಎಸ್‌ಯುಗಳ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಬರುವುದಲ್ಲದೆ, ಆಡಳಿತದಲ್ಲಿ ದಕ್ಷತೆ ಹೆಚ್ಚುತ್ತದೆ. ಪರಿಣಾಮಕಾರಿ ನಿರ್ವಹಣೆ ಸರಾಗವಾಗುತ್ತದೆ. ನ್ಯೂನತೆ ಸರಿಪಡಿಸಿ ಸಾರ್ವಜನಿಕ ವಲಯದ ಉದ್ಯಮಗಳ ಪ್ರಗತಿಗೆ ಮಹತ್ವದ ಮೈಲಿಗಲ್ಲಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇದೇ ಮೊದಲ ಬಾರಿಗೆ ಹಣಕಾಸು ಸಲಹೆಗಾರರನ್ನು ನೇಮಕ ಮಾಡುವತ್ತ ಹೆಜ್ಜೆ ಇಟ್ಟಿದೆ.