ನ್ಯೂಸ್

ಪ್ರಮುಖ ನಾಯಕರ ಪೋನ್ ಕದ್ದಾಲಿಸುತ್ತಿರುವ ಸರ್ಕಾರ: ಆರ್.ಅಶೋಕ್ ಆರೋಪ | We will expose the failure of cong govt in front of the people

ಬೆಂಗಳೂರು: ನನ್ನದು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿ ಪ್ರಮುಖ ನಾಯಕರ ಪೋನ್ ಕರೆಗಳನ್ನು ರಾಜ್ಯ ಸರ್ಕಾರ ಕದ್ದಾಲಿಸುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದರು.

ವಿಧಾನಸೌಧದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮುಖ ನಾಯಕರ ೆನ್‌ಗೆ ಕಳ್ಳಗಿವಿ ಇಟ್ಟಿರುವ ಬಗ್ಗೆ ಆಡಳಿತ ಪಕ್ಷದ ಶಾಸಕರೇ ಹೇಳಿದ್ದಾರೆ. ವಿರೋಧಿಗಳನ್ನು ಬಗ್ಗುಬಡಿಯಬೇಕೆಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ. ಇದರಲ್ಲಿ ಅನುಮಾನವೇ ಬೇಡವೆಂದರು.

ಈ ಬಾರಿ ಅಧಿವೇಶನದಲ್ಲಿ ಅನೇಕ ಸಮಸ್ಯೆಗಳ ಮೇಲೆ ಬಿಜೆಪಿ ಬೆಳಕು ಚೆಲ್ಲಿದೆ. ಆದರೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಯಾವುದಕ್ಕೂ ಸರಿಯಾದ ಉತ್ತರ ನೀಡಿಲ್ಲ. ಪ್ರತಿಭಟನೆ ಮಾಡಿರುವುದಕ್ಕೆ ಶಾಸಕರನ್ನೇ ಅಮಾನತು ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನರ ಮುಂದಿಡಲಿದ್ದೇವೆ

ಬಜೆಟ್ ಪುಸ್ತಕದಲ್ಲಿ ಬಹಳಷ್ಟು ಸುಳ್ಳುಗಳಿವೆ. ಸಿಎಂ ಕಚೇರಿಯಲ್ಲಿ ಕೆಲಸ ಮಾಡುವವರು ಗ್ಯಾರಂಟಿಯನ್ನು ಪ್ರಶಂಸಿಸಿದ್ದರ ಬಗ್ಗೆಯೂ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಅಧಿವೇಶನದಲ್ಲಿ ಚರ್ಚೆ ಮಾಡಿದ ಎಲ್ಲ ವಿಷಯಗಳನ್ನು ಜನರ ಮುಂದಿಡಲಿದ್ದೇವೆ.

ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟಿಸಲಾಗಿದೆ. ಅಸಂವಿಧಾನಿಕ ಮುಸ್ಲಿಂ ಮೀಸಲು ವಿರುದ್ಧವೂ ಆಕ್ಷೇಪ ಎತ್ತಲಾಗಿದೆ. ಸರ್ಕಾರದ ವೈಲ್ಯಗಳು, ಸಂವಿಧಾನ, ಜನ ವಿರೋಧಿ ನೀತಿಗಳನ್ನು ಜನತಾ ನ್ಯಾಯಾಲಯಕ್ಕೆ ಕೊಂಡೊಯ್ಯಲಿದ್ದು, ಜನರೇ ತೀರ್ಮಾನಿಸಲಿದ್ದಾರೆ ಎಂದು ಆರ್.ಅಶೋಕ್ ಹೇಳಿದರು.

ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮುಸ್ಲಿಂ ಮೀಸಲಾತಿಯನ್ನು ವಿರೋಧಿಸಿದ್ದರು. ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದು-ಮುಸ್ಲಿಮರ ನಡುವೆ ಒಡಕು ಉಂಟು ಮಾಡುವ ಕುತಂತ್ರ ಹೂಡಿದ್ದು, ವೋಟ್‌ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಆಪಾದಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಗೆ ಸಚಿವರು, ಶಾಸಕರಿದ್ದಾರೆ. ಅಧಿಕಾರಿಗಳು ಈ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಆದರೂ ಅನುಷ್ಠಾನ ಸಮಿತಿಗಳನ್ನು ರಚಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ರಾಜ್ಯದ ಜನರ ತೆರಿಗೆ ಹಣ ಹಂಚುತ್ತಿದ್ದಾರೆ ಎಂದು ಟೀಕಿಸಿದರು.

ಖರ್ಗೆಯೇ ಬಂದರು

ಸಿಎಂ ಸಿದ್ದರಾಮಯ್ಯ ಗಾಲಿ ಕುರ್ಚಿಯಲ್ಲಿದ್ದರೆ ಸರ್ಕಾರ ತೆವಳುತ್ತಿದೆ. ಇದರ ನಡುವೆ ಸಿಎಂ ಕುರ್ಚಿಗಾಗಿ ಕಿತ್ತಾಟ ವಿಭಿನ್ನ ಸ್ವರೂಪ ಪಡೆದುಕೊಳ್ಳುತ್ತಿದೆ. ‘ಹನಿಟ್ರ್ಯಾಪ್’ ಪ್ರಕರಣದ ಹಿಂದಿರುವ ಕೈಗಳ ಬಗ್ಗೆ ಕಾಂಗ್ರೆಸ್‌ನಲ್ಲೇ ಜೋರು ಚರ್ಚೆಯಾಗುತ್ತಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಸ್ವತಃ ಬಂದು, ಸಿಎಂ ಸಿದ್ದರಾಮಯ್ಯ ಆರೋಗ್ಯ ವಿಚಾರಿಸುವ ನೆಪದಲ್ಲಿ ಚರ್ಚಿಸುವ ಸ್ಥಿತಿಗೆ ಸಿಎಂ ಕುರ್ಚಿಗಾಗಿ ಕಾದಾಟ ತಲುಪಿದೆ.

ಸಚಿವ ಕೆ.ಎನ್.ರಾಜಣ್ಣ ಮತ್ತು ಅವರ ಮಗ, ಸಿಎಂ ಸಿದ್ದರಾಮಯ್ಯನವರ ಅನುಮತಿ ಪಡೆದು ಹನಿಟ್ರ್ಯಾಪ್ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ಇದರ ಸೂತ್ರದಾರರು ಯಾರೆಂದು ತಿಳಿದು ಬಂದಿದೆ ಎಂದು ಆರ್.ಅಶೋಕ್ ಹೇಳಿದರು.