ಮೂಡಿಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರೊಂದಿಗೆ ಶಾಸಕಿ ನಯನಾ ಮೋಟಮ್ಮ ಸಮಾಲೋಚನೆ ನಡೆಸಿದರು. 
ನ್ಯೂಸ್

ಹಳ್ಳಿಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯಕ್ಕೆ ಕ್ರಮ

ಮೂಡಿಗೆರೆ: ಉತ್ತಮ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತಮಟ್ಟದ ಸ್ಥಾನಮಾನಗಳನ್ನು ಪಡೆದುಕೊಳ್ಳಲು ಸಹಕಾರಿಯಾಗಲಿದೆ. ಕಡುಬಡತನ ಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಪಾಲಕರು ನೋಡಿಕೊಳ್ಳಬೇಕಾಗಿದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು ಸೇರಿದಂತೆ ವಿವಿಧ ಶಾಲೆ, ಕಾಲೇಜುಗಳಿಗೆ ಬುಧವಾರ ಭೇಟಿ ನೀಡಿ ವಿದ್ಯಾರ್ಥಿಗಳ ಕುಂದುಕೊರತೆ ಆಲಿಸಿದ ಬಳಿಕ ಮಾತನಾಡಿದ ಅವರು, ಶಿಕ್ಷಣದಿಂದ ಮೂಲ ಜ್ಞಾನ ಸಂಪಾದಿಸಿದರೆ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.
ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆ. ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಮೊಬೈಲ್ ಬಳಕೆ ಕಡಿಮೆ ಮಾಡಿದರೆ ಶೈಕ್ಷಣಿಕ ಭವಿಷ್ಯ ಉಜ್ವಲವಾಗಲಿದೆ. ಶಾಲೆ, ಕಾಲೇಜುಗಳಲ್ಲಿ ಯಾವುದೆ ಸಮಸ್ಯೆಗಳು ಇದ್ದರೂ ಪ್ರಾಚಾರ್ಯರು ಹಾಗೂ ಶಾಲಾ ಮುಖ್ಯಸ್ಥರ ಗಮನಕ್ಕೆ ತರಬೇಕು ಎಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯರು ಶಾಸಕರೊಂದಿಗೆ ಮಾತನಾಡಿ, ಸರ್ಕಾರಿ ಶಾಲೆ, ಕಾಲೇಜುಗಳಿಗೆ ವಿದ್ಯಾರ್ಥಿನಿಯರ ಸೇರ್ಪಡೆ ವೇಳೆ ಪ್ರವೇಶ ಶುಲ್ಕದಿಂದ ವಿನಾಯಿತಿ ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಿದಂತೆ ಪುಸ್ತಕ ಹಾಗೂ ವಿವಿಧ ಶೈಕ್ಷಣಿಕ ಪರಿಕರ ಲ್ಯಾಪ್‌ಟ್ಯಾಪ್ ಉಚಿತವಾಗಿ ಸರ್ಕಾರದಿಂದ ನೀಡಿದರೆ ಶಿಕ್ಷಣ ಪಡೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಾತನಾಡಿ, ಗ್ರಾಮೀಣ ಭಾಗದಿಂದ ಕಾಲೇಜಿಗೆ ಬರಲು ಕೆಎಸ್‌ಆರ್‌ಟಿಸಿ ಬಸ್‌ಗಳ ಕೊರತೆ ಇದೆ. ಸಂಜೆ ತರಗತಿ ಮುಗಿದ ನಂತರ ಹಳ್ಳಿಗಳಿಗೆ ಹೋಗಲು ಬಸ್‌ಗಳು ಇಲ್ಲದೆ ಗಂಟೆಗಟ್ಟಲೆ ಬಸ್ ನಿಲ್ದಾಣದಲ್ಲಿ ಕಾಯಬೇಕಾಗಿದೆ. ಬೆಳಗ್ಗೆ ಮನೆಯಿಂದ ಹೊರಟರೆ ಸಂಜೆ 6ರಿಂದ 7 ಗಂಟೆಗೆ ಮನೆ ಸೇರಬೇಕಾಗುತ್ತದೆ ಎಂದು ಶಾಸಕರ ಗಮನಕ್ಕೆ ತಂದರು.
ಪಪಂ ಸದಸ್ಯರಾದ ಎಚ್.ಪಿ.ರಮೇಶ್, ಎಂ.ಎ.ಹಂಝ, ಆಸಿಫ್, ಸಿ.ಬಿ.ಶಂಕರ್, ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಉದಯಕುಮಾರ್, ಪದವಿ ಪೂರ್ವ ಕಾಲೇಜು ಪ್ರಾಚಾರ್ಯೆ ಮಂಜುಳಾ ಇತರರಿದ್ದರು.