ನ್ಯೂಸ್

ಸರ್ಕಾರಿ ನೌಕರಿ ಕೊಡಿಸುವುದಾಗಿ ಮೋಸ; ನ್ಯಾಯ ಕೊಡಿಸುವಂತೆ ಸಂತ್ರಸ್ತರ ಆಗ್ರಹ

ರಾಣೆಬೆನ್ನೂರ: ಯುವಕರಿಗೆ ಉದ್ಯೋಗ ಕೊಡಿಸುವ ಹೆಸರಿನಲ್ಲಿ ಲಾಂತರ ರೂ. ವಸೂಲಿ ಮಾಡಿ ನಿಮಗೆ ನೌಕರಿ ದೊರೆತಿದೆ ಎಂದು ನಕಲಿ ಪ್ರಮಾಣಪತ್ರ ನೀಡಿ ಮೋಸ ಮಾಡಿದ್ದು ಈತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಸಂತ್ರಸ್ತರು ಬುಧವಾರ ಇಲ್ಲಿಯ ಶಹರ ಠಾಣೆ ಪಿಎಸ್​ಐ ಗಡ್ಡೆಪ್ಪ ಗುಂಜುಟಗಿ ಅವರಿಗೆ ಮನವಿ ಸಲ್ಲಿಸಿದರು.
ಸಂತ್ರಸ್ತ ಶಂಕರ ಮಾತನಾಡಿ, ರೋಹಿತ್​ ಗುತ್ತಲ ಲೋಕೋಪಯೋಗಿ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ 3 ಲಕ್ಷ ರೂ.ನಿಂದ 10 ಲಕ್ಷ ರೂ.ವರೆಗೂ ಹಣ ತೆಗೆದುಕೊಂಡಿದ್ದಾನೆ. ಹಾವೇರಿ, ಗದಗ, ಬೆಳಗಾಂವಿ, ಧಾರವಾಡ ಸೇರಿ ವಿವಿಧಡೆ 17 ಜನರಿಗೆ ಒಟ್ಟು 69.20 ಲಕ್ಷ ರೂ. ತೆಗೆದುಕೊಂಡಿದ್ದಾನೆ. ಎಲ್ಲರಿಗೂ ಲೋಕೋಪಯೋಗಿ ಇಲಾಖೆಯಲ್ಲಿ ಎಇಇ ಆಗಿ ಕೆಲಸ ದೊರೆತಿದೆ ಎಂದು ನೇಮಕಾತಿ ಆದೇಶ ಪ್ರತಿ ನೀಡಿದ್ದಾನೆ.
ಆದರೆ, ಸರ್ಕಾರಿ ಕಚೇರಿಗೆ ತೆರಳಿ ಕೇಳಿದರೆ ಇದು ನಮಗೆ ಗೊತ್ತಿಲ್ಲ. ನಿಮಗೆ ಯಾರೋ ಮೋಸ ಮಾಡಿದ್ದಾರೆ ಎಂದು ಹೇಳಿ ವಾಪಸ್​ ಕಳುಹಿಸಿದ್ದಾರೆ. ಇದರಿಂದ ರೋಹಿತ ನಮಗೆ ಮೋಸ ಮಾಡಿರುವ ವಿಷಯ ತಿಳಿದು ಬಂದಿದೆ. ಇದೀಗ ರೋಹಿತನನ್ನು ಕೇಳಿದರೆ ನಿಮ್ಮ ಹಣ ವಾಪಸ್​ ಕೊಡುತ್ತೇನೆ ಎಂದು ಹೇಳಿ ನಿತ್ಯ ಸತಾಯಿಸುತ್ತಿದ್ದಾನೆ.
ಅವರ ತಂದೆ&ತಾಯಿಗೆ ಕೇಳಿದರೂ ಹಣ ವಾಪಸ್​ ಕೊಡುವುದಾಗಿ ಹೇಳುತ್ತಿದ್ದಾರೆ ಹೊರತು ಈವರೆಗೂ ಹಣ ಕೊಡದೆ ಮೋಸ ಮಾಡಿದ್ದಾರೆ. ಆದ್ದರಿಂದ ರೋಹಿತ್​ ಗುತ್ತಲ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಪಿಎಸ್​ಐ ಗಡ್ಡೆಪ್ಪ ಗುಂಜುಟಗಿ ಮಾತನಾಡಿ, ಈ ಬಗ್ಗೆ ದೂರು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಂತ್ರಸ್ತರಾದ ಕರಬಸಪ್ಪ ಕರೇಗೌಡ್ರ, ಮಂಜುನಾಥ ಬಿ.ಎಲ್​., ಗುರುರಾಜ ಕುಂಬಳೂರ, ಸಿದ್ದೇಶ ಎ.ಎಂ., ಬಸವರಾಜ ಬಳಿಗಾರ, ಜಗದೀಶ ಮತ್ತೂರ, ಮಲ್ಲಿಕಾರ್ಜುನ ಅಂಗಡಿ, ಪ್ರದಿಪ ಅಂಗಡಿ, ಚೇತನ ಗುಗ್ಗರಿ, ಶಂಕರ ಬಣಕಾರ, ರಮೇಶ ಚಕ್ರಸಾಲಿ, ಗಿರೀಶ ಕುಂಬಾರ ಮತ್ತಿತರರು ಇದ್ದರು.