ನ್ಯೂಸ್

ಸರ್ಕಾರಿ ಇ-ಕಾಮರ್ಸ್ ಶೀಘ್ರ ಲೋಕಾರ್ಪಣೆ; ಅಮೆಜಾನ್, ಫ್ಲಿಪ್​ಕಾರ್ಟ್​ಗೆ ಪೈಪೋಟಿ..

Webdesk - Ravikanth

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಓಪನ್ ನೆಟ್​ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್​ಡಿಸಿ) ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ. ಇದು ಯುಪಿಐಗೆ ಸರಿಸಮವಾದ ವಾಣಿಜ್ಯ ವಹಿವಾಟಿನ ವೇದಿಕೆಯಾಗಿ ರೂಪುಗೊಳ್ಳಲಿದೆ. ಈ ವೇದಿಕೆ ಅಮೆಜಾನ್, ಫ್ಲಿಪ್​ಕಾರ್ಟ್​ಗೆ ಪೈಪೋಟಿ ನೀಡಲಿದೆ. 25 ಜನರ ತಂಡ ಇದಕ್ಕಾಗಿ ಕೆಲಸ ಮಾಡುತ್ತಿದೆ.

ಈ ಉಪಕ್ರಮ ಈಗ ಪ್ರಾಯೋಗಿಕವಾಗಿ ಚಾಲ್ತಿಯಲ್ಲಿದ್ದು, 12 ಕಂಪನಿಗಳು ಇದರಲ್ಲಿ ಖಚಿತ ಪಾಲುದಾರರಾಗಿ ಸೇರಿಕೊಂಡಿವೆ. ಇವುಗಳು ಒಟ್ಟಾಗಿ 185 ಕೋಟಿ ರೂಪಾಯಿ ಹೂಡಿಕೆ ಮಾಡಲಿವೆ. ಈ ಪ್ಲಾಟ್​ಫಾರಂ ಅನ್ನು ಕಂಪನಿ ಕಾಯ್ದೆಯ ಪ್ರಕಾರ ಲಾಭದ ಉದ್ದೇಶವಿಲ್ಲದ ಕಂಪನಿ ಎಂದು ನೋಂದಣಿ ಮಾಡಿಸಲಾಗುವುದು ಅಥವಾ ಪಾಲುದಾರ ಕಂಪನಿಯಾಗಿ ನೋಂದಣಿ ಮಾಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಎಸ್​ಬಿಐ, ಕೊಟಾಕ್ ಮಹಿಂದ್ರಾ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್, ಪಿಎನ್​ಬಿ, ಬಿಒಬಿ, ಎನ್​ಎಸ್​ಡಿಎಲ್, ಸಿಡಿಎಸ್​ಎಲ್, ಬಿಎಸ್​ಇ, ಎನ್​ಎಸ್​ಇ, ಎನ್​ಪಿಸಿಐ, ಸಿಡ್ಬಿ, ನಬಾರ್ಡ್​ಗಳು ಇದರಲ್ಲಿ ಪಾಲುದಾರ ಸಂಸ್ಥೆಗಳು.