ನ್ಯೂಸ್

'ಆರ್‌ಬಿಐ'ನ ನೂತನ 'ಉಪ ಗವರ್ನರ್ ಆಗಿ ಎಸ್‌ಸಿ ಮುರ್ಮು' ಅವರನ್ನು ನೇಮಿಸಿದ ಸರ್ಕಾರ| RBI

ನವದೆಹಲಿ; ಭಾರತೀಯ ರಿಸರ್ವ್ ಬ್ಯಾಂಕ್‌‌ (ಆರ್​ಬಿಐ) ನ ನೂತನ ಉಪಗವರ್ನರ್ ಆಗಿ ಮೂರು ವರ್ಷಗಳ ಅವಧಿಗೆ ಶಿರೀಶ್ ಚಂದ್ರ ಮುರ್ಮು ಅವರನ್ನು ನೇಮಿಸಲಾಗಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ, ದೆಹಲಿ ಸಂಪುಟದ ನೇಮಕಾತಿ ಸಮಿತಿಯು ಇಂದು (ಸೆ. 29) ಅವರ ನೇಮಕಾತಿಯನ್ನು ಅನುಮೋದಿಸಿದೆ.

ಅಕ್ಟೋಬರ್ 8 ರಂದು ರಾಜೇಶ್ವರ ರಾವ್ ಅವರ ಅಧಿಕಾರಾವಧಿ ಕೊನೆಗೊಳ್ಳಲಿದ್ದು, ಅವರ ಉತ್ತರಾಧಿಕಾರಿಯಾಗಿ ಮುರ್ಮು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸದ್ಯ ರಾಜೇಶ್ವರ ರಾವ್ ಅವರು ಬ್ಯಾಂಕಿಂಗ್ ನಿಯಂತ್ರಣ ಮತ್ತು ಇತರ ಖಾತೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ರಾಜೇಶ್ವರ್ ಅವರನ್ನು ಮೊದಲು ಸೆಪ್ಟೆಂಬರ್ 2020 ರಲ್ಲಿ ಮೂರು ವರ್ಷಗಳ ಅವಧಿಗೆ ಉಪ ಗವರ್ನರ್ ಆಗಿ ನೇಮಿಸಲಾಯಿತು ಬಳಿಕ 2023 ರಲ್ಲಿ ಒಂದು ವರ್ಷದ ವಿಸ್ತರಣೆಯನ್ನು ನೀಡಲಾಯ್ತು. ಇದಾದ ನಂತರ 2024 ರಲ್ಲಿ ಮತ್ತೊಂದು ವಿಸ್ತರಣೆಯನ್ನು ಪಡೆದುಕೊಂಡರು. ಅವರು ಅಕ್ಟೋಬರ್ 8 ಕ್ಕೆ ಸುಮಾರು ಐದು ವರ್ಷಗಳ ಅಧಿಕಾರವನ್ನು ಪೂರ್ಣಗೊಳಿಸಲಿದ್ದಾರೆ.

ಮುರ್ಮು ಅವರು ಪ್ರಸ್ತುತ ಆರ್‌ಬಿಐನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದು, ಅವರ ಅಧಿಕಾರಾವಧಿ ಅ.9 ರಿಂದ ಪ್ರಾರಂಭವಾಗಲಿದೆ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ. ಆರ್‌ಬಿಐ ನಾಲ್ಕು ಉಪ ಗವರ್ನರ್‌ಗಳನ್ನು ಹೊಂದಿದ್ದು, ಪ್ರತಿಯೊಬ್ಬರೂ ಹಣಕಾಸು ಮಾರುಕಟ್ಟೆಗಳ ನಿಯಂತ್ರಣ, ಹಣಕಾಸು ನೀತಿ, ಬ್ಯಾಂಕಿಂಗ್ ಮೇಲ್ವಿಚಾರಣೆ ಮತ್ತು ಇತರ ಕಾರ್ಯಗಳ ಕ್ಷೇತ್ರ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ.

RBI ನ ಮೂರು ಉಪ ಗವರ್ನರ್‌ಗಳು:

ಸ್ವಾಮಿನಾಥನ್ ಜಾನಕಿರಾಮನ್

ಇವರು ಮೇಲ್ವಿಚಾರಣಾ ಮತ್ತು ಗ್ರಾಹಕ-ಕೇಂದ್ರಿತ ಕ್ಷೇತ್ರಗಳಿಗೆ ಜವಾಬ್ದಾರರಾಗಿರುತ್ತಾರೆ. ಮೇಲ್ವಿಚಾರಣೆ ಇಲಾಖೆ, ಗ್ರಾಹಕ ಶಿಕ್ಷಣ ಮತ್ತು ರಕ್ಷಣಾ ಇಲಾಖೆ ಮತ್ತು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್‌ನ ಮುಖ್ಯಸ್ಥರಾಗಿದ್ದಾರೆ.

ಪೂನಂ ಗುಪ್ತಾ

ಇವರು ಆರ್ಥಿಕ ನೀತಿ ಮತ್ತು ಕಾರ್ಯತಂತ್ರದ ಸಂವಹನವನ್ನು ನೋಡಿಕೊಳ್ಳುತ್ತಾರೆ. ಹಣಕಾಸು ನೀತಿ ಇಲಾಖೆ, ಆರ್ಥಿಕ ಮತ್ತು ನೀತಿ ಸಂಶೋಧನಾ ಇಲಾಖೆ, ಹಣಕಾಸು ಸ್ಥಿರತೆ ಇಲಾಖೆ ಮತ್ತು ಅಂತರರಾಷ್ಟ್ರೀಯ ಇಲಾಖೆಯನ್ನು ಮುನ್ನಡೆಸುತ್ತಾರೆ.

ಟಿ. ರಬಿ ಶಂಕರ್

(ಏಜೆನ್ಸೀಸ್)

ಇವರು ಪಾವತಿ ಮತ್ತು ವಸಾಹತು ವ್ಯವಸ್ಥೆಗಳ ಇಲಾಖೆ, ವಿದೇಶಿ ವಿನಿಮಯ ಇಲಾಖೆ, ಮಾಹಿತಿ ತಂತ್ರಜ್ಞಾನ ಮತ್ತು ಕೇಂದ್ರ ಭದ್ರತಾ ಕೋಶಗಳ ವಾಬ್ದಾರಿ ಹೊಂದಿದ್ದಾರೆ. ಸರ್ಕಾರಕ್ಕೆ ಸಂಬಂಧಿಸಿದ ಖಾತೆಗಳು ಮತ್ತು ಬಾಹ್ಯ ಹೂಡಿಕೆ ಕಾರ್ಯಾಚರಣೆಗಳನ್ನು ಸಹ ನೋಡಿಕೊಳ್ಳುತ್ತಾರೆ.