ನ್ಯೂಸ್

ಐಎಂಎ ವಂಚನೆ ಪ್ರಕರಣದಿಂದ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಗೆ ಆರೋಪ ಮುಕ್ತಗೊಳಿಸಿದ ಸರ್ಕಾರ

ಬೆಂಗಳೂರು : ಬಹುಕೋಟಿ ವಂಚನೆ ಮಾಡಿದ್ದ ಐಎಂಎ ಹಗರಣದಲ್ಲಿ ಸಿಲುಕಿದ್ದ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್‌ಗೆ ಆರೋಪ ಮುಕ್ತರಾಗಿದ್ದಾರೆ. ಐಎಂಎ ಹಗರಣದಲ್ಲಿ ಇವರ ಮೇಲಿನ ಆರೋಪದ ಸಾಬೀತಾಗದ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆಯನ್ನು ಮುಕ್ತಾಯಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ರಾಜ್ಯ ಸರ್ಕಾರ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಎಂ.ತಮ್ಮಯ್ಯ ಅವರನ್ನು ವಿಚಾರಣಾಧಿಕಾರಿಯಾಗಿ ನೇಮಿಸಿತ್ತು. ವಿಚಾರಣಾಧಿಕಾರಿಯ ವರದಿ ಆಧರಿಸಿ ಸರ್ಕಾರ ಇಲಾಖಾ ವಿಚಾರಣೆಯನ್ನು ಮುಕ್ತಾಯಗೊಳಿಸಿದೆ. ನಿಂಬಾಳ್ಕರ್ ವಿರುದ್ಧದ ಆರೋಪಗಳನ್ನು ಕೈಬಿಡಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಿದೆ.

ಐಎಂಎ ವಂಚನೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಿತ್ತು. ಬಳಿಕ ತನಿಖೆ ನಡೆಸಿದ್ದ ಸಿಬಿಐ ಅಂದಿನ ಸಿಐಡಿ ಐಜಿಪಿಯಾಗಿದ್ದ ಹೇಮಂತ್ ನಿಂಬಾಳ್ಕರ್ ವಿರುದ್ಧ ಸಾಮಾನ್ಯ ಇಲಾಖಾ ಕ್ರಮಕ್ಕೆ ಶಿಫಾರಸ್ಸು ಮಾಡಿತ್ತು. ಶಿಸ್ತು ಮತ್ತು ಮೇಲ್ಮನವಿ ನಿಯಮಗಳ ಅಡಿ ನಿಂಬಾಳ್ಕರ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು.

ಹೈಕೋರ್ಟ್ ತನ್ನ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆ ವಜಾ ಮಾಡಿರುವುದರಿಂದ ಇಲಾಖಾ ವಿಚಾರಣೆಯನ್ನು ಮುಕ್ತಾಯಗೊಳಿಸುವಂತೆ 2021ರಲ್ಲಿ ರಾಜ್ಯ ಸರ್ಕಾರಕ್ಕೆ ಹೇಮಂತ್ ನಿಂಬಾಳ್ಕರ್, ಪತ್ರ ಬರೆದು ಮನವಿ ಮಾಡಿದ್ದರು. ಇದಕ್ಕೆ ರಾಜ್ಯ ಸರ್ಕಾರ ಕ್ರಿಮಿನಲ್ ಪ್ರಕ್ರಿಯೆ ಮತ್ತು ಇಲಾಖಾ ವಿಚಾರಣೆಯನ್ನು ಭಿನ್ನ ನೆಲೆಯಲ್ಲಿ ನಡೆಸಲಾಗುತ್ತದೆ. ಈ ಎರಡನ್ನು ಹೋಲಿಕೆ ಮಾಡಬಾರದು.

ಕ್ರಿಮಿನಲ್ ಪ್ರಕ್ರಿಯೆ ವಜಾ ಮಾಡಿರುವುದು ಇಲಾಖಾ ವಿಚಾರಣೆ ಮೇಲೆ ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ ಎಂದಿತ್ತು. ಬಳಿಕ ಸರ್ಕಾರವು ಅಖಿಲ ಭಾರತ ಸೇವಾ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳ ಅಡಿ ನಿಂಬಾಳ್ಕರ್ ವಿರುದ್ಧ ವಿಚಾರಣೆಗಾಗಿ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಎಂ. ತಿಮ್ಮಯ್ಯ ಅವರನ್ನು ನೇಮಕ ಮಾಡಿತ್ತು.