ನ್ಯೂಸ್

ರಾಜಭವನಕ್ಕೆ ಸಚಿವರನ್ನು ಕರೆ ತಂದ ರಾಜ್ಯಪಾಲರ ಪತ್ರ !

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರಾಂತದ ವಿಶ್ವ ವಿದ್ಯಾಲಯಗಳಿಗೆ ಈ ವರ್ಷ 300 ಕೋಟಿ ರೂ. (ಶೇ.10) ಅನುದಾನ ತೆಗೆದಿರಿಸಲೇಬೇಕು ಎಂದು ಪ್ರಾಂತದ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಗೆ ಪತ್ರ ಬರೆದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಶಾಕ್ ನೀಡಿದ್ದಾರೆ.

ಸಂವಿಧಾನದ 371 (ಜೆ) ವಿಧಿಯಡಿ ಶಾಸನಾತ್ಮಕವಾಗಿ ವಿಶೇಷ ಸ್ಥಾನಮಾನ ಪಡೆದ ಪ್ರಾಂತದಲ್ಲಿ ಆಡಳಿತಾತ್ಮಕ ಕ್ರಮಗಳು ಹಾಗೂ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆ ಹೊಣೆ ರಾಜ್ಯಪಾಲರದಾಗಿದೆ.

ರಾಜ್ಯ ಸರ್ಕಾರಕ್ಕೆ ಪಾಲನೆ, ಅನುಷ್ಠಾನ ಜವಾಬ್ದಾರಿ ನೀಡಿದ್ದರೆ, ಕಾಲಕಾಲಕ್ಕೆ ಪರಿಶೀಲಿಸಿ, ಪರಾಮರ್ಶೆ, ಸಲಹೆ-ಸೂಚನೆಗಳನ್ನು ನೀಡಬೇಕೆಂದು ರಾಜ್ಯಪಾಲರಿಗೆ ಕಾಯ್ದೆ ನಿರ್ದೇಶಿಸಿದೆ.

ರಾಜಭವನಕ್ಕೆ ದೌಡು

ಕಾಯ್ದೆ ಪ್ರಕಾರ ಸುಪ್ರೀಂ ಆಗಿರುವ ಗವರ್ನರ್ ಪತ್ರ ಬರೆದ ಹಿನ್ನೆಲೆಯಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್ ಸಿಂಗ್, ಸಚಿವರು ಹಾಗೂ ಶಾಸಕರು ರಾಜಭವನಕ್ಕೆ ಮಂಗಳವಾರ ದೌಡಾಯಿಸಿದರು.

ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮೂರು ಸಾವಿರ ಕೋಟಿ ರೂ. ಅನುದಾನ ಮೀಸಲಿರಿಸಿದ್ದಾರೆ. ಈ ಪೈಕಿ ಮಂಡಳಿ ಹಂತದಲ್ಲಿ ರೂಪಿಸುವ ಸೂಕ್ಷ್ಮ ಯೋಜನೆಯಡಿ ಒಟ್ಟಾರೆ ಶಿಕ್ಷಣ ಕ್ಷೇತ್ರಕ್ಕೆ ಶೇಕಡ 25ರಷ್ಟು, ಆರೋಗ್ಯ ಕ್ಷೇತ್ರಕ್ಕೂ ನಿರ್ದಿಷ್ಟ ಮೊತ್ತ ಹಂಚಿಕೆಯಾಗಲಿದೆ.

ಸ್ಥೂಲ ಯೋಜನೆಯಡಿ ಆಯಾ ಕ್ಷೇತ್ರದ ಶಾಸಕರು ಗ್ರಾಮೀಣ-ನಗರ ಪಟ್ಟಣ ಸ್ಥಳೀಯ ಸಂಸ್ಥೆಗಳ ಬೇಡಿಕೆಗಳನ್ನು ಪರಿಗಣಿಸಿ ಸಲ್ಲಿಸಲಿರುವ ಪ್ರಸ್ತಾವನೆ ಅನುಸಾರ ಮಂಡಳಿ ಸಭೆಯಲ್ಲಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗುತ್ತದೆ.

ಸ್ಥೂಲ ಕ್ರಿಯಾ ಯೋಜನೆಯು ಡಾ.ಡಿ.ಎಂ.ನಂಜುಂಡಪ್ಪ ಸಮಿತಿ ವರದಿ, ಶಿಾರಸು ಮಾಡಿದ ಕಾರ್ಯಕ್ರಮಗಳನ್ನು ಸಾಮಾನ್ಯವಾಗಿ ಒಳಗೊಂಡಿರಲಿದ್ದು, ಮೂಲ ಸವಲತ್ತು ಸುಧಾರಣೆಗೂ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ರಾಜ್ಯಪಾಲರಿಗೆ ನಿಯೋಗ ಮನವರಿಕೆ ಮಾಡಿಕೊಟ್ಟಿತು.

ಸಮಾಧಾನಕರ ಮೊತ್ತ

ಪ್ರಾಂತದ ವಿಶ್ವ ವಿದ್ಯಾಲಯಗಳಿಗೆ 300 ಕೋಟಿ ರೂ. ಮೀಸಲಿಡುವುದು ಪ್ರಸಕ್ತ ಹಣಕಾಸು ವರ್ಷಕ್ಕೆ ಮೀಸಲಿಡುವುದು ಕಷ್ಟ ಸಾಧ್ಯ. ಸಾಮಾಧಾನಕರ ಅನುದಾನ ನೀಡಲಿದ್ದು, ಮುಂದಿನ ವರ್ಷ ಉನ್ನತ ಶಿಕ್ಷಣಕ್ಕಾಗಿ ಪ್ರತ್ಯೇಕ ಅನುದಾನ ನಿಗದಿಪಡಿಸಲಾಗುವುದು ಎಂದು ನಿವೇದಿಸಿದರು.

ಸಚಿವ, ಶಾಸಕರ ತಂಡದ ಮಾತಿಗೆ ಒಲ್ಲದ ಮನಸ್ಸಿನಿಂದ ಥಾವರ್ ಚಂದ್ ಗೆಹಲೋತ್ ಒಪ್ಪಿಗೆ ಸೂಚಿಸಿ, ಬಜೆಟ್ ಮಂಡಿಸಿ ಐದು ತಿಂಗಳು ಕಳೆದರೂ ಕ್ರಿಯಾ ಯೋಜನೆ ಅಂತಿಮವಾಗಿಲ್ಲ ಏಕೆ ? ಕೇಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದಿದೆ.

ಮಂಡಳಿಗೆ ಪೂರ್ಣ ಪ್ರಮಾಣದಲ್ಲಿ ಅಧ್ಯಕ್ಷ, ಸದಸ್ಯರ ನೇಮಕ, ಇನ್ನಿತರ ಕಾರಣಗಳಿಗೆ ವಿಳಂಬವಾಗಿದೆ. ಮುಂದಿನ ವರ್ಷ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎಂದು ತಂಡ ಹೇಳಿದಾಗ ತಪ್ಪದೇ ಪಾಲಿಸಬೇಕು ಎಂದು ತಾಕೀತು ಮಾಡಿದ್ದಾರೆ.

ಅಲ್ಲದೆ, ಸಕಾಲದಲ್ಲಿ ಅನುಷ್ಠಾನದಿಂದ ಯೋಜನೆ ಉದ್ದೇಶ ಸಾರ್ಥಕ. ಅನುದಾನವೂ ಪೂರ್ಣ ಪ್ರಮಾಣ ಬಳಕೆಯಾಗಲಿದೆ ಎಂದು ಥಾವರ್ ಚಂದ್ ಗೆಹಲೋತ್ ಸಲಹೆ ನೀಡಿದರು ಎನ್ನಲಾಗಿದೆ.