ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮುನ್ನಡೆ ಸಾಧಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಸಂದೇಶವೊಂದನ್ನು ಪೋಸ್ಟ್ ಮಾಡಿದ ಮೋದಿ, “ದೇಶದ ಜನರು ಎನ್‌ಡಿಎ ಮೇಲೆ ವಿಶ್ವಾಸ ಇಟ್ಟಿದ್ದು, ಮೂರನೇ ಬಾರಿ ಸರ್ಕಾರ ರಚಿಸಲು ಅವಕಾಶ ನೀಡಿರುವುದು ಐತಿಹಾಸಿಕ” ಎಂದಿದ್ದಾರೆ.
ಇದನ್ನೂ ಓದಿ: ಮೋದಿ ಜನಪ್ರಿಯತೆ ಕುಗ್ಗಿರುವುದು ಸಾಬೀತು, ಕಾಂಗ್ರೆಸ್ ವೋಟ್ ಶೇರ್ ಹೆಚ್ಚಾಗಿದೆ ಎಂದ ಡಿಸಿಎಂ ಡಿ.ಕೆ. ಶಿವಕುಮಾರ್
ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಸಂದೇಶವೊಂದನ್ನು ಪೋಸ್ಟ್ ಮಾಡಿದ ಮೋದಿ, ದೇಶದ ಜನರು ಎನ್‌ಡಿಎ ಮೈತ್ರಿಕೂಟದ ಮೇಲೆ ನಂಬಿಕೆ ಇರಿಸಿದ್ದಾರೆ. ಇದೇ ಕಾರಣಕ್ಕಾಗಿ, ಸತತವಾಗಿ ಮೂರನೇ ಬಾರಿ ಸರ್ಕಾರ ರಚಿಸಲು ಅವಕಾಶ ಕೊಟ್ಟಿದ್ದಾರೆ. ಜನರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ಕೃತಜ್ಞನಾಗಿದ್ದೇನೆ. ಮುಂದಿನ ದಿನಗಳಲ್ಲೂ ಜನರ ಆಶೋತ್ತರಗಳನ್ನು ಈಡೇರಿಸುವ ದಿಸೆಯಲ್ಲಿ ನಾವು ಉತ್ತಮ ಆಡಳಿತ ನೀಡುತ್ತೇವೆ. ಹಾಗೆಯೇ, ಚುನಾವಣೆಯಲ್ಲಿ ಸತತವಾಗಿ ಶ್ರಮ ವಹಿಸಿದ ಕಾರ್ಯಕರ್ತರಿಗೂ ನಾನು ಧನ್ಯವಾದ ತಿಳಿಸುತ್ತೇನೆ. ಕಾರ್ಯಕರ್ತರ ಶ್ರಮವನ್ನು ಬಣ್ಣಿಸಲು ನನ್ನ ಬಳಿ ಪದಗಳೇ ಇಲ್ಲ” ಎಂಬುದಾಗಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 290 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಮ್ಯಾಜಿಕ್ ನಂಬರ್ ಆದ 272ರ ಗಡಿಯನ್ನು ದಾಟಿದೆ.