ನ್ಯೂಸ್

ಸರ್ಕಾರಕ್ಕೆ ಜಾತಿಯಿಲ್ಲ, ಡಿಕೆಶಿಗೆ ತಿವಿದ ಬಿಜೆಪಿ ಮಾಜಿ ಮಂತ್ರಿ

ಬೆಂಗಳೂರು: ಸರ್ಕಾರ ಅಥವಾ ಮುಖ್ಯಮಂತ್ರಿ ಹುದ್ದೆ ಜಾತಿ ಆಧಾರಿತವಾಗಿ ಇರುವುದಿಲ್ಲ. ರಾಗ, ದ್ವೇಷವಿಲ್ಲದೆ ನಿಷ್ಪಕ್ಷಪಾತವಾಗಿರುತ್ತೇನೆ ಎಂದು ಪ್ರಮಾಣ ಮಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಡಾ.ಬಿ.ಆರ್.ಅಂಬೇಡ್ಕರ್, ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಟೀಕಿಸಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಸೋ ಕಾಲ್ಡ್ ಜಾತ್ಯತೀತರು ಮುಖ್ಯಮಂತ್ರಿ, ಸರ್ಕಾರಕ್ಕೆ ಜಾತಿ ಪಟ್ಟಕಟ್ಟಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನ ಸೇರಿ ಹಳೆಯದನ್ನು ಕೆದಕಿದರೆ ಕಾಂಗ್ರೆಸ್‌ನ ಬಣ್ಣ ಬಯಲಾಗುತ್ತದೆ ಎಂದರು.

ಪರಸ್ಪರ ವಿಶ್ವಾಸದ ಮೇಲೆ ಮೈತ್ರಿಯಾಗುತ್ತದೆ. ಆದರೆ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಏಕಮಾತ್ರ ಉದ್ದೇಶದಿಂದ ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಂಡರು. ಆಡಳಿತದ ಚುಕ್ಕಾಣಿ ಹಿಡಿದ ನಂತರ ಹೇಗೆ ನಡೆಸಿಕೊಂಡರು ಎನ್ನುವುದು ಸ್ವತಃ ಎಚ್.ಡಿ.ಕುಮಾರಸ್ವಾಮಿಯವರೇ ಹೊರಗೆ ಹಾಕಿದ್ದಾರೆ ಎಂದು ಸಿ.ಟಿ.ರವಿ ಕುಟುಕಿದರು.

ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾದ 17 ಶಾಸಕರನ್ನು ಯಾರು ಕಳುಹಿಸಿದರು. ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಈಗ ಎಲ್ಲಿದ್ದಾರೆ ಎನ್ನುವುದು ಕಾಂಗ್ರೆಸ್ ನಾಯಕರು ಹೇಳಬೇಕು ಎಂದು ಕಾಲೆಳೆದರು.

ಸ್ನೇಹ ಕಡಿದುಕೊಳ್ಳಲು ಸಾಧ್ಯವೆ ?

ಜೆಡಿಎಸ್-ಕಾಂಗ್ರೆಸ್ ಸರ್ಕಾರ ಪತನಗೊಳಿಸಿದ್ದೇಕೆ ? ಎಂದು ಭೇಟಿಯಾದ ಬಿಜೆಪಿ ನಾಯಕರಿಗೆ ಆದಿಚುಂಚನಗಿರಿ ಸ್ವಾಮೀಜಿಗಳು ಕೇಳಬೇಕಿತ್ತು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮಠಗಳು, ಸ್ವಾಮೀಜಿಗಳು ಸನಾತನಧರ್ಮ ಪರಂಪರೆಗೆ ಸೇರಿದವರು. ಆದರೆ ಸನಾತನ ಧರ್ಮವನ್ನು ಡೆಂಗೆಗೆ ಹೋಲಿಸಿ ನಾಶ ಮಾಡುತ್ತೇವೆ ಎಂದು ಡಿಎಂಕೆ ನಾಯಕ, ಸಿಎಂ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಹೇಳಿದ್ದರು.

ಇದಕ್ಕಾಗಿ ಇಂಡಿ ಒಕ್ಕೂಟದಲ್ಲಿರುವ ಡಿಎಂಕೆ ಜತೆಗೆ ಸ್ನೇಹವನ್ನು ಕಾಂಗ್ರೆಸ್ ಪಕ್ಷ ಕಡಿದುಕೊಳ್ಳಲು ಸಾಧ್ಯವೆ ?. ಆದಿಚುಂಚನಗಿರಿ ಸ್ವಾಮೀಜಿಯವರನ್ನು ಪ್ರಶ್ನಿಸುವ ನೈತಿಕ ಹಕ್ಕು ಡಿ.ಕೆ.ಶಿವಕುಮಾರ್ ಅವರಿಗೆ ಇಲ್ಲವೆಂದು ಹರಿಹಾಯ್ದರು.

ಗರೀಬಿ ಹಟಾವೋ (ಬಡತನ ನಿರ್ಮೂಲನೆ)ರೀತಿಯಲ್ಲಿ ಗ್ಯಾರಂಟಿಗಳು ಮಹಾವಂಚನೆಯವು. ಇಂದಿರಾಗಾಂಧಿ ಕಾಲದಿಂದ ಸೋನಿಯಾಗಾಂಧಿವರೆಗೆ ಎಲ್ಲರೂ ಗರೀಬಿ ಹಟಾವೋ ಎಂದು ಹೇಳಿದರು. ಆದರೆ ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ಬಡತನ ನೀಗಿಸಿಕೊಂಡು ದೇಶದ ಬಡ ಜನರನ್ನು ಬಡವರಾಗಿಯೇ ಉಳಿಸಿದರು ಎಂದು ಸಿ.ಟಿ.ರವಿ ವಾಗ್ದಾಳಿ ಮಾಡಿದರು.