ನ್ಯೂಸ್

ಮಹಾಮಾರಿ ಕರೊನಾದಿಂದ ಕುಗ್ಗಿರುವ ಆರ್ಥಿಕತೆ ಮೇಲೆತ್ತಲು ಡೊನಾಲ್ಡ್​ ಟ್ರಂಪ್​ಗೆ ಸಲಹೆ ನೀಡಲಿದ್ದಾರೆ ಭಾರತೀಯರು

ವಾಷಿಂಗ್ಟನ್​: ಮಹಾಮಾರಿ ಕರೊನಾ ವೈರಸ್​ ವಿಶ್ವದ ದೊಡ್ಡಣ ಅಮೆರಿಕದಲ್ಲಿ ಮೃತ್ಯಕೂಪವನ್ನೇ ನಿರ್ಮಿಸಿದ್ದು, ಆರ್ಥಿಕತೆ ದೊಡ್ಡ ಹೊಡೆತವನ್ನೇ ನೀಡಿದೆ. ಹೀಗಾಗಿ ನೆಲಕಚ್ಚಿರುವ ಆರ್ಥಿಕತೆಯನ್ನು ಮತ್ತೆ ಸರಿದಾರಿಗೆ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಗ್ರೇಟ್ ಅಮೆರಿಕನ್ ಎಕನಾಮಿಕ್ ರಿವೈವಲ್ ಇಂಡಸ್ಟ್ರಿ ಗ್ರೂಪ್​ ರಚಿಸಿದ್ದಾರೆ.

ವಿಶೇಷವೆಂದರೆ ಟ್ರಂಪ್​ ರಚಿಸಿರುವ ಗ್ರೂಪ್​ನಲ್ಲಿ ಗೂಗಲ್​ ಸಿಇಒ ಸುಂದರ್​ ಪಿಚೈ ಮತ್ತು ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾದೆಲ್ಲ ಸೇರಿದಂತೆ ಒಟ್ಟು 6 ಮಂದಿ ಇಂಡೋ-ಅಮೆರಿಕನ್ನರಿದ್ದಾರೆ. ವಿವಿಧ ಇಂಡಸ್ಟ್ರಿಗಳಿಂದ 200ಕ್ಕೂ ಹೆಚ್ಚು ವಿವಿಧ ನಾಯಕರುಗಳನ್ನು ಟ್ರಂಪ್​ ಆಯ್ಕೆ ಮಾಡಿದ್ದು, ಅವರನ್ನು 12ಕ್ಕೂ ಹೆಚ್ಚು ಗುಂಪುಗಳಾಗಿ ವಿಭಾಗಿಸಿದ್ದಾರೆ. ಇವರಿಂದ ಕುಗ್ಗಿರುವ ಆರ್ಥಿಕ ಪುನಶ್ಚೇತನಕ್ಕೆ ಟ್ರಂಪ್​ ಸಲಹೆ ಪಡೆಯಲಿದ್ದಾರೆ.

ಈ ಬಗ್ಗೆ ಮಂಗಳವಾರ ಮಾತನಾಡಿದ್ದ ಟ್ರಂಪ್​, ಕೆಲವೊಬ್ಬರ ಹೆಸರುಗಳಿವೆ. ಅವರೆಲ್ಲರು ಅತ್ಯತ್ತಮರು ಎಂದು ನಾನು ಭಾವಿಸಿದ್ದೇನೆ. ಅವರೆಲ್ಲಾ ಆರ್ಥಿಕತೆ ಉತ್ತೇಜನಕ್ಕೆ ಕೆಲ ಸಲಹೆಗಳನ್ನು ನೀಡಲಿದ್ದಾರೆ ಎಂದು ತಿಳಿಸಿದ್ದರು.

ಪಿಚೈ ಮತ್ತು ನಾದೆಲ್ಲ ಹೊರತುಪಡಿಸಿ, ಐಬಿಎಂನ ಅರವಿಂದ್​ ಕೃಷ್ಣ ಮತ್ತು ಮೈಕ್ರಾನ್​ ಟೆಕ್​ ಗ್ರೂಪ್​ನ ಸಂಜಯ್​ ಮೆಲ್ಹೋತ್ರಾ ಕೂಡ ಟ್ರಂಪ್​ ಆಯ್ಕೆ ಪಟ್ಟಿಯಲ್ಲಿದ್ದಾರೆ. ಉಳಿದಂತೆ ಆ್ಯಪಲ್​ ಸಿಇಒ ಟಿಮ್​ ಕುಕ್​, ಒರಾಕಲ್​ನ ಲಾರಿ ಎಲ್ಲಿಸನ್​ ಮತ್ತು ಫೇಸ್​ಬುಕ್​ ಸಿಇಒ ಮಾರ್ಕ್​ ಜುಕರ್​ಬರ್ಗ್ ಕೂಡ ಸೇರಿದ್ದಾರೆ.

ಕೃಷಿ, ಬ್ಯಾಂಕಿಂಗ್​, ನಿರ್ಮಾಣ/ಕಾರ್ಮಿಕರು/ಕಾರ್ಯಪಡೆ, ರಕ್ಷಣಾ, ಇಂಧನ, ಆರ್ಥಿಕ ಸೇವೆ, ಆಹಾರ ಮತ್ತು ಪಾನೀಯಗಳು, ಆರೋಗ್ಯ, ಆತಿಥ್ಯ, ಉತ್ಪಾದನೆ, ರಿಯಲ್​ ಎಸ್ಟೇಟ್​, ಚಿಲ್ಲರೆ ವ್ಯಾಪಾರ, ಟೆಕ್​, ಟೆಲಿಕಮ್ಯುನಿಕೇಷನ್​, ಸಾರಿಗೆ, ಕ್ರೀಡೆ ಮತ್ತು ಚಿಂತನೆಯ ನಾಯಕರು ಎಂಬಿತ್ಯಾದಿ ಗ್ರೂಪ್​ಗಳನ್ನು ಟ್ರಂಪ್​ ಆರ್ಥಿಕ ಉತ್ತೇಜನಕ್ಕಾಗಿ ಸೃಷ್ಟಿಸಿದ್ದಾರೆ. ಆಯ್ಕೆ ಮಾಡಿರುವ ನಾಯಕರು ಒಂದೊಂದು ಗ್ರೂಪ್​ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಅಮೆರಿಕ ಆರ್ಥಿಕತೆಯನ್ನು ಹಳಿಗೆ ತರಲು ಶ್ರಮಿಸಲಿದ್ದಾರೆ.

ಕರೊನಾ ವೈರಸ್​ನಿಂದ ಹೆಚ್ಚು ಬಾಧಿತವಾಗಿರುವ ಅಮೆರಿಕ ಸೋಂಕು ತಡೆಗಟ್ಟಲು ಲಾಕ್​ಡೌನ್​ ಮೊರೆಹೋಗಿದೆ. ಈಗಾಗಲೇ ಕರೊನಾಗೆ ಅಮೆರಿಕದಲ್ಲಿ 20 ಸಾವಿರಕ್ಕು ಹೆಚ್ಚು ಮಂದಿ ಮೃತರಾಗಿದ್ದು, 6 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿತರಾಗಿದ್ದಾರೆ. ಆರ್ಥಿಕತೆ ಸಾಕಷ್ಟು ಕುಗ್ಗಿರುವುದರಿಂದ ಅದನ್ನು ಸರಿಪಡಿಸಲು ಟ್ರಂಪ್​ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್​)